ಕನ್ನಡದಲ್ಲಿ ನಿರರ್ಗಳ ಮಾತನಾಡುತ್ತಿದ್ದ ಜಯಾ

ಚೆನ್ನೈ : ಎಐಎಡಿಎಂಕೆ ಅಧಿನಾಯಕಿ ಹಾಗೂ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದವರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಮೇಲ್ಕೋಟೆಯಲ್ಲಿ ಜನಿಸಿದ ಅವರಿಗೆ  ಕನ್ನಡದ ಮೇಲೆ ಅಪಾರ  ಪ್ರೀತಿಯಿತ್ತೆಂಬುದು ಆಕೆಯ ರಾಜಕೀಯ ಸಮಕಾಲೀನರಿಗೆ ಹಾಗೂ ಸ್ಯಾಂಡಲವುಡ್ಡಿನಲ್ಲಿ ಹಲವರಿಗೆ ಆಶ್ಚರ್ಯ ತಂದ ವಿಷಯವಾಗಿತ್ತು.

2012ರಲ್ಲಿ ಅಂದಿನ ಕರ್ನಾಟಕ ಮುಖ್ಯಮಂತ್ರಿ  ಜಗದೀಶ್ ಶೆಟ್ಟರ್ ಅವರೊಂದಿಗೆ ಕಾವೇರಿ ವಿಚಾರ ಚರ್ಚೆಯ ಸಂದರ್ಭ ಅವರು ಕನ್ನಡದಲ್ಲಿಯೇ ಮಾತನಾಡಿದ್ದರು. ಆದರೆ ಆಕೆ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಿದ್ದು ಇದೇ ಮೊದಲಲ್ಲ. ಇದಕ್ಕೂ ಮುಂಚೆ 2002ರಲ್ಲಿ ಎಸ್ ಎಂ ಕೃಷ್ಣ ಜತೆಯೂ ಕನ್ನಡದಲ್ಲಿಯೇ ಮಾತನಾಡಿದ್ದರು. ಇದಕ್ಕೆ ಮಾಜಿ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಸಾಕ್ಷಿಯಾಗಿದ್ದರು. “ಆಕೆಯ ಕನ್ನಡ  ಭಾಷೆಯ ಮೇಲಿನ ಹಿಡಿತ ಹಾಗೂ  ಮಾತನಾಡುವ ಧಾಟಿಯನ್ನು ನೋಡಿ ನನಗೆ ಆಶ್ಚರ್ಯವಾಗಿತ್ತ್ತು” ಎಂದು ಅವರು ಹೇಳುತ್ತಾರೆ.

ಶೆಟ್ಟರ್ ಅವರಿಗೆ ಕೂಡ ಜಯಲಲಿತಾ ಕನ್ನಡ ಮಾತನಾಡುವ ಶೈಲಿ ಬಹಳಷ್ಟು ಹಿಡಿಸಿತ್ತು. ಕನ್ನಡ ಮಾತನಾಡುವಾಗ ಆಕೆಯಲ್ಲಿ ಸಂತಸ ಮನೆ ಮಾಡಿತ್ತು ಎಂದು ಶೆಟ್ಟರ್ ನೆನಪಿಸಿಕೊಳ್ಳುತ್ತಾರೆ. ಕಾವೇರಿ ವಿಚಾರದಲ್ಲಿ ಅವರೇಕೆ ತಮ್ಮ ನಿಲುವನ್ನು ಸಡಿಲಿಸುತ್ತಿಲ್ಲ ಎಂಬ ಶೆಟ್ಟರ್ ಪ್ರಶ್ನೆಗೆ “ತಮಿಳು ಜನರು ನನ್ನ ಮೇಲೆ ವಿಶ್ವಾಸವಿರಿಸಿದ್ದಾರೆ.  ಈ ವಿಚಾರದಲ್ಲಿ ನಾನು ದೃಡ ನಿಲುವು ಹೊಂದಬೇಕು. ಇದು ನನ್ನ ಕರ್ತವ್ಯ” ಎಂದು ಹೇಳಿದ್ದರು. ಕಾವೇರಿ ವಿಚಾರದಲ್ಲಿ ಎರಡೂ ರಾಜ್ಯಗಳ ನಡುವೆ ರಾಜಕೀಯ ಮೇಲಾಟವಿದ್ದರೂ ಜಯಲಲಿತಾ ಯಾವತ್ತೂ ಕರ್ನಾಟಕದ ರಾಜಕಾರಣಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು.

ಹಿರಿಯ ಕನ್ನಡ ನಟಿ ಸರೋಜಾ ದೇವಿ ಹಾಗೂ ಜಯಲಲಿತಾ ಉತ್ತಮ ಸ್ನೇಹಿತೆಯರಾಗಿದ್ದು ನಾವಿಬ್ಬರೂ ಯಾವತ್ತೂ ಕನ್ನಡದಲ್ಲಿಯೇ ಮಾತನಾಡುತ್ತಿದ್ದ್ದೆವು, ಎಂದು ಸರೋಜಾ ದೇವಿ ನೆನಪಿಸಿಕೊಳ್ಳುತ್ತಾರೆ.