ದೈತ್ಯ ಇಡ್ಲಿಯಲ್ಲಿ ಜಯಲಲಿತಾ ಚಿತ್ರ ಬಿಡಿಸಿದ ಅಭಿಮಾನಿಗಳು

68 ಕೆಜಿ ತೂಕದ ಇಡ್ಲಿಯಲ್ಲಿ `ಅಮ್ಮ'ನ ಮುಖ

ಚೆನ್ನೈ : ಇತ್ತೀಚೆಗೆ ನಿಧನರಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಚಿತ್ರವನ್ನು 68 ಕೇಜಿ ತೂಕದ ದೈತ್ಯ ಇಡ್ಲಿಯೊಂದರಲ್ಲಿ ಅವರ ಅಭಿಮಾನಿಗಳು ಬಿಡಿಸಿದ್ದು ಈ ಇಡ್ಲಿಯನ್ನು ಚೆನ್ನೈ ನಗರದ ಮರೀನಾ ಬೀಚಿನಲ್ಲಿ ಪ್ರದರ್ಶನಕ್ಕಿಡಲಾಗಿದೆ
ತಮ್ಮ ಅಭಿಮಾನಿಗಳಿಂದ  ಅಮ್ಮ ಎಂದೇ ಕರೆಯಲ್ಪಡುತ್ತಿದ್ದ ಜಯಲಲಿತಾ ಅವರ ಪಕ್ಷ ಕಾರ್ಯಕರ್ತರು ತಮ್ಮ ನಾಯಕಿಯ ಮೇಲಿನ ಪ್ರೀತಿಯನ್ನು ಈ ಹಿಂದೆ ಕೂಡ ಹಲವು ರೀತಿಯಲ್ಲಿ ತೋರ್ಪಡಿಸಿದ್ದಾರೆ  ಕೆಲವರು ಆಕೆಯ ಚಿತ್ರದ ಹಚ್ಚೆಗಳನ್ನು ಹಾಕಿಸಿಕೊಂಡಿದ್ದರೆ ಒಬ್ಬ ಅಭಿಮಾನಿಯಂತೂ ಆಕೆ ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಶಿಲುಬೆಗೂ ಏರಿದ್ದ  ಆಕೆಯ ನಿಧನದ ನಂತರ ಅಮ್ಮನನ್ನು ಕಳೆದುಕೊಂಡ ದುಃಖದಲ್ಲಿ ರಾಜ್ಯದಲ್ಲಿ ಕನಿಷ್ಠ 77 ಮಂದಿ ಮೃತಪಟ್ಟಿದ್ದರು
ಬಿಎಸ್ಪಿ ನಾಯಕಿ ಮಾಯಾವತಿಯ ಹುಟ್ಟಿದ ಹಬ್ಬದ ದಿನದಂದು ಆಕೆಯ ವಯಸ್ಸಿನಷ್ಟೇ ತೂಕದ ಕೇಕ್ ಕತ್ತರಿಸಿ ಭಾರೀ ಗಾತ್ರದ ಮಾಲೆಗಳನ್ನು ಆಕೆಗೆ ಸಮರ್ಪಿಸುವ ಆಕೆಯ ಅಭಿಮಾನಿಗಳ ಪರಿಪಾಠವೊಂದನ್ನು ಹೊರತುಪಪಡಿಸಿ ಪ್ರಾಯಶಃ ತಮ್ಮ ಪಕ್ಷದ ನಾಯಕಿಯ ಮೇಲೆ ಎಐಎಡಿಎಂಕೆ ಕಾರ್ಯಕರ್ತರು ಇಟ್ಟಿರುವ ಅಭಿಮಾನಕ್ಕೆ ಬೇರೆ ಯಾರೂ ಸರಿಗಟ್ಟಲಾರರು
ಸಮಾಜವಾದಿ ಪಕ್ಷದ ಕಾರ್ಯಕರ್ತರೂ ತಮ್ಮ ಅಧಿನಾಯಕ ಮುಲಾಯಂ ಸಿಂಗ್ ಯಾದವ್ ಹುಟ್ಟಿದ ಹಬ್ಬದಂದು ಮಾಯಾವತಿ ಅಭಿಮಾನಿಗಳು ಮಾಡಿದಂತೆಯೇ ಮಾಡುತ್ತಿದ್ದಾರೆಂಬುದನ್ನು ಇಲ್ಲಿ ಸ್ಮರಿಸಬಹುದು