ಜಯಲಲಿತಾ ಅಕ್ರಮ ಪ್ರಕರಣ ಮುಗಿದಿಲ್ಲ : ಆಚಾರ್ಯ

ಜಯಲಲಿತಾ ಸಂಗಾತಿ ಶಶಿಕಲಾ

ಬೆಂಗಳೂರು : ತಮಿಳುನಾಡಿನ ಮಾಜಿ ಸೀಎಂ ಜಯಲಲಿತಾ ಜಯಾ ಮತ್ತು ಇತರ ಇಬ್ಬರ ವಿರುದ್ಧ ದಾಖಲಾಗಿದ್ದ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆ ಈಗಲೂ ಚಾಲ್ತಿಯಲ್ಲಿದೆ ಎಂದು ವಿಶೇಷ ಪ್ರಾಸಿಕ್ಯೂಟರ್ ಬಿ ವಿ ಆಚಾರ್ಯ ತಿಳಿಸಿದರು.

“ಜಯಾ ಮೃತಪಟ್ಟಿದ್ದರೂ ಆ ಪ್ರಕರಣ ಮುಗಿದಿಲ್ಲ. ಅವರ ನಿಕಟವರ್ತಿ ಶಶಿಕಲಾ ಕೂಡಾ ಈ ಕೇಸಿನಲ್ಲಿದ್ದಾರೆ” ಎಂದರು.

ಜಯಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಶಶಿಕಲಾ, ವಿ ಎನ್ ಸುಧಾಕರನ್ ಮತ್ತು ಎಲವರಸಿ ಆರೋಪಿಗಳಾಗಿದ್ದಾರೆ. ಇದು ಬಲವಾದ ಕೇಸಾಗಿದೆ” ಎಂದು ಕರ್ನಾಟಕದ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ವಾದಿಸುತ್ತಿರುವ ಆಚಾರ್ಯ ತಿಳಿಸಿದರು.

ಇತ್ತ `ಚಿನ್ನಮ್ಮ’ ಯಾನೆ ಶಶಿಕಲಾ ತಮಿಳುನಾಡಿನ ಮುಂದಿನ ಸೀಎಂ ಆಗಬೇಕೆನ್ನುವ ವಿಷಯದಲ್ಲಿ ಎಐಎಡಿಎಂಕೆ ಭಾರೀ ಒತ್ತಡದಲ್ಲಿದೆ. ಆದರೆ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿರುವುದರಿಂದ ಆಕೆಯ ರಾಜಕೀಯ ಪ್ರವೇಶ ಅಡಕತ್ತರಿಯಲ್ಲಿದೆ.

ವಿಶೇಷ ಕೋರ್ಟ್ ಆರೋಪಿಗಳ ಆಸ್ತಿ ವಿಷಯದಲ್ಲಿ ತಪ್ಪು ಲೆಕ್ಕಾಚಾರ ಹಾಕಿಕೊಂಡಿದೆ ಎಂದಿದ್ದ ಕರ್ನಾಟಕ ಹೈಕೋರ್ಟ್ 2015 ಮೇ 11ರಂದು ಜಯಾ ಮತ್ತು ಅವರ ಇತರ ಮೂವರು ಸಹವರ್ತಿಗಳನ್ನು ಈ ಕೇಸಿಂದ ಆರೋಪಮುಕ್ತಗೊಳಿಸಿತ್ತು. 2014ರಲ್ಲಿ ಇವರಿಗೆ ವಿಶೇಷ ಕೋರ್ಟ್ ಜೈಲು ಶಿಕ್ಷೆ ವಿಧಿಸಿತ್ತು.