ಕೊಹ್ಲಿ ಪಡೆಗೆ `ಶಾಕ್’ ನೀಡಿದ ಬೆಹ್ರಂಡೋರ್ಫ್

  • ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ರಾಂಚಿಯಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಆಸ್ಟ್ರೇಲಿಯಾ ತಂಡದ ಯುವ ಬೌಲರ್ ಜೇಸನ್ ಬೆಹ್ರಂಡೋರ್ಫ್ ಗೌಹಾತಿ ಪಂದ್ಯದಲ್ಲಿ ಮ್ಯಾಚ್ ವಿನ್ನರ್ ಆಗಿ ಮೂಡಿ ಬಂದರು. ಮಳೆ ಕಾಡಿರುವ ಮೊದಲ ಪಂದ್ಯವನ್ನು ಸೋತಿರುವ ಆಸ್ಟ್ರೇಲಿಯನ್ನರು ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುವುದನ್ನು ವಿರಾಟ್ ಕೊಹ್ಲಿ ಬಳಗಕ್ಕೆ ತೋರಿಸಿಕೊಟ್ಟಿರು. ಈ ಗೆಲುವಿಗೆ ಪ್ರಮುಖವಾಗಿ ಕಾರಣರಾದವರು ಜೇಸನ್ ಬೆಹ್ರಂಡೋರ್ಫ್.

ಗೌಹಾತಿಯ ಹೊಸ ಕ್ರೀಡಾಂಗಣದಲ್ಲಿ ಆಸೀಸ್ ಆಟಗಾರರು ತೋರಿದ ಅದ್ಭುತ ಚಮತ್ಕಾರಿ ಆಟ ಗೆಲುವಿನ ಹಾದಿಯನ್ನು ತೋರಿಸಿತು. ಟಾಸ್ ಸೋತ ಟೀಂ ಇಂಡಿಯಾಕ್ಕೆ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶವನ್ನು ಆಸೀಸ್ ಕ್ಯಾಪ್ಟನ್ ಡೇವಿಡ್ ವಾರ್ನರ್ ನೀಡಿದರು. ಆದರೆ, ಟೀಂ ಇಂಡಿಯಾ ಆಟಗಾರರು ಆಸ್ಟ್ರೇಲಿಯನ್ ಬೌಲರುಗಳ ಬಿಗು ಬೌಲಿಂಗ್ ದಾಳಿಯಿಂದ ರನ್ನುಗಳಿಗೆ ತಿಣುಕಾಟ ನಡೆಸಿದರು. ಆಸ್ಟ್ರೇಲಿಯನ್ ಬೌಲರುಗಳು ಸರಣಿಯಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಬ್ಯಾಟ್ಸಮ್ಯಾನುಗಳನ್ನು ಬೆಂಡೆತ್ತಿದರು. ಟೀಂ ಇಂಡಿಯಾದ ಶಿಖರ್ ಧವನ್, ರೋಹಿತ್ ಶರ್ಮ, ನಾಯಕ ವಿರಾಟ್ ಕೊಹ್ಲಿ ಹಾಗೂ ಮನೀಶ್ ಪಾಂಡೆ ಅವರನ್ನು ತಂಡದ ಸ್ಕೋರ್ 27 ರನ್ ಆಗುವಷ್ಟರಲ್ಲೇ ಪೆವೆಲಿಯನ್ನಿಗೆ ಅಟ್ಟಿದ ಆಸೀಸ್ ಬೌಲರ್ ಜೇಸನ್ ಬೆಹ್ರಂಡೋರ್ಫ್ ಈ ಪಂದ್ಯದಲ್ಲಿ ಮಿಂಚು ಹರಿಸಿದರು.

ಈ ಸಂದರ್ಭದಲ್ಲಿ ಜಾಧವ್-ಧೋನಿ ಹಾಗೂ ಹಾರ್ದಿಕ್ ಪಾಂಡ್ಯಾ-ಕುಲದೀಪ್ ಯಾದವ್ ಜೋಡಿ ತಲಾ 33 ರನ್ನುಗಳನ್ನು ಕಲೆಹಾಕಿ ತಂಡದ ಸ್ಕೋರ್ 100ರ ಗಡಿ ದಾಟಲು ನೆರವಾದರು. ಜಾಧವ್ 27 ರನ್ ಮತ್ತು ಹಾರ್ದಿಕ್ ಪಾಂಡ್ಯಾ 25 ರನ್ನುಗಳನ್ನು ಬಾರಿಸಿದರು. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 20 ಓವರುಗಳಲ್ಲಿ 118 ರನ್ನುಗಳಿಗೆ ಆಲೌಟಾಯಿತು.

ಟೀಂ ಇಂಡಿಯಾದ ಸುಲಭದ ಟಾರ್ಗೆಟನ್ನು ಆಸ್ಟ್ರೇಲಿಯನ್ ಆಟಗಾರರು 15.3 ಓವರುಗಳಲ್ಲಿ ತಲುಪಿ ಎಂಟು ವಿಕೆಟುಗಳ ಜಯವನ್ನು ದಾಖಲಿಸಿಕೊಂಡರು. ಈ ಮೂಲಕ ಮೂರು ಪಂದ್ಯಗಳ ಈ ಕ್ರಿಕೆಟ್ ಸರಣಿ 1-1 ಅಂತರದಲ್ಲಿ ಸಮಬಲ ಸಾಧಿಸಿದೆ. ಅಕ್ಟೋಬರ್-13ರಂದು ಹೈದರಾಬಾದಿನಲ್ಲಿ ನಡೆಯುವ ಮೂರನೇ ಪಂದ್ಯದಲ್ಲಿ ಉಭಯ ತಂಡಗಳು ಸರಣಿ ಗೆಲುವಿಗಾಗಿ ಹೋರಾಟ ನಡೆಸಲಿದೆ. ಉರಿಚೆಂಡಿನ ಬೌಲಿಂಗ್ ನಡೆಸಿ (4-0-21-4 ) ಟೀಂ ಇಂಡಿಯಾದ ಸೋಲಿಗೆ ಕಾರಣರಾದ ಜೇಸನ್ ಬೆಹ್ರಂಡೋರ್ಫ್ `ಪಂದ್ಯಶ್ರೇಷ್ಠ’ರಾದರು.