ಕುಮಾರಸ್ವಾಮಿಗೆ ಉರುಳಾಗುತ್ತಿರುವ ಜಂತಗಲ್ ಗಣಿಗಾರಿಕೆ ಪ್ರಕರಣ

ರಾಜ್ಯ ಜೆಡಿಎಸ್ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಎರಡು ಹೊಡೆತಗಳು ಒಂದೇ ಬಾರಿಗೆ ಬಿದ್ದಿವೆ. ಮೊದಲನೆಯದಾಗಿ ಜಂತಕಲ್ ಗಣಿಗಾರಿಕೆ ಪ್ರಕರಣದಲ್ಲಿ ಅವರ ನಿರೀಕ್ಷಣಾ ಜಾಮೀನು ಬೇಡಿಕೆಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ತಳ್ಳಿಹಾಕಿದೆ. ಎರಡನೆಯದಾಗಿ ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಕುಮಾರಸ್ವಾಮಿ ವಿರುದ್ಧ ಲಂಚದ ಆರೋಪವನ್ನು ಬೆಂಬಲಿಸುವ ದಾಖಲೆಗಳು ದೊರೆತಿವೆ. ಈ ಪ್ರಕರಣದ ಸಾಕ್ಷ್ಯ ನೀಡುತ್ತಿರುವ ಗಣಿಧಣಿ ಮತ್ತು ಮಾಜಿ ಬಿಜೆಪಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಈ ದಾಖಲೆಗಳನ್ನು ನೀಡಿದ್ದಾರೆ.

ಕುಮಾರಸ್ವಾಮಿಗೆ ನಿರೀಕ್ಷಣಾ ಜಾಮೀನು ನೀಡಲು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಗೋಪಾಲ ನಿರಾಕರಿಸಿದ್ದಾರೆ. ಆರೋಪಿ ಮಾಡಿರುವ ಆರ್ಥಿಕ ಅಪರಾಧದ ಪ್ರಮಾಣವನ್ನು ಪರಿಗಣಿಸಿ ಮತ್ತು ಇಂತಹ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ಗಮನದಲ್ಲಿರಿಸಿ ಅವರು ಈ ನಿರ್ಣಯಕ್ಕೆ ಬಂದಿದ್ದಾರೆ. ಬಂಧನಕ್ಕೆ ಒಳಗಾಗುವ ಭಯದಲ್ಲಿ ತಕ್ಷಣವೇ ಕುಮಾರಸ್ವಾಮಿ ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಇಂದು ಹೈಕೋರ್ಟಿನಲ್ಲಿ ಇದರ ವಿಚಾರಣೆ ನಡೆಯಲಿದೆ.

ಕುಮಾರಸ್ವಾಮಿ ಬಂಧನಕ್ಕೆ ಒಳಗಾಗುವ ಸಾಧ್ಯತೆ ಬಗ್ಗೆ ವಿವರ ನೀಡಲು ವಿಶೇಷ ತನಿಖಾ ತಂಡದ ಅಧಿಕಾರಿಗಳು ನಿರಾಕರಿಸಿದ್ದಾರೆ. ಗಣಿ ಕಂಪನಿಗಳಿಂದ ಕುಮಾರಸ್ವಾಮಿ ರೂ 150 ಕೋಟಿ ಲಂಚ ಪಡೆದಿದ್ದಾರೆ ಎನ್ನುವ ತಮ್ಮ ಹೇಳಿಕೆಯನ್ನು ಬೆಂಬಲಿಸಲು ಜನಾರ್ಧನ ರೆಡ್ಡಿ ಸಾಕಷ್ಟು ಪುರಾವೆಗಳನ್ನು ತನಿಖಾ ತಂಡಕ್ಕೆ ನೀಡಿದ್ದಾರೆ ಎನ್ನಲಾಗಿದೆ.