`ಮಂಗಳೂರಿನ ಅಭಿವೃದ್ಧಿಗಾಗಿ ಜನತೆಯೆಡೆಗೆ ನಮ್ಮ ನಡಿಗೆ’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತಾಯಿಸಿ ಸಿಪಿಎಂ ಪಕ್ಷದ ವತಿಯಿಂದ ಮುಖಂಡ ಸುನಿಲ್ ಕುಮಾರ್ ಬಜಾಲ್ ನೇತೃತ್ವದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ `ಜನತೆಯೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮ ಗುರುವಾರ ನಡೆಯಿತು.

ಈ ಸಂದರ್ಭ ಮಾತನಾಡಿದ ಬಜಾಲ್, “ಇಂದು ಮಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ದಕ್ಷಿಣ ಕ್ಷೇತ್ರದ 38 ವಾರ್ಡಿಗೆ ನಾವು ತೆರಳಲಿದ್ದೇವೆ. ಈ ಪಾದಯಾತ್ರೆಯಲ್ಲಿ ಮಂಗಳೂರು ನಗರ ಅಭಿವೃದ್ಧಿಗಾಗಿ ನಾವು ಆಗ್ರಹಿಸಲಿದ್ದೇವೆ. ಜನರ ತೆರಿಗೆಯಿಂದ ಸಂಗ್ರಹಗೊಂಡ ಕೋಟಿಗಟ್ಟಲೆ ದುಡ್ಡು ಏನಾಗಿದೆ ಎನ್ನುವುದಕ್ಕೆ ಪಾಲಿಕೆ ಉತ್ತರ ನೀಡಬೇಕು” ಎಂದು ಆಗ್ರಹಿಸಿದರು.

“ನಗರ ಪಾಲಿಕೆ ಅಸ್ತಿತ್ವಕ್ಕೆ ಬಂದು ನಾಲ್ಕು ದಶಕ ಸಂದರೂ ಇನ್ನೂ ಅಭಿವೃದ್ಧಿ ಮರೀಚಿಕೆಯಾಗಿದೆ. ಮಂಗಳೂರು ನಗರದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಕೋಟಿಗಟ್ಟಲೆ ಅನುದಾನದಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದರೆ ಎಲ್ಲೂ ಕೂಡಾ ಚರಂಡಿ, ಫುಟ್ಪಾತ್ ಮಾಡಿಲ್ಲ. ಜನತೆ ತೆರಿಗೆ ಕಟ್ಟಿದ ದುಡ್ಡು ಏನಾಗಿದೆ ಎನ್ನುವುದಕ್ಕೆ ನಗರ ಪಾಲಿಕೆ ಆಯುಕ್ತರು, ಮೇಯರ್ ಉತ್ತರ ನೀಡಬೇಕು” ಎಂದು ಆಗ್ರಹಿಸಿದರು.