ಬಾರ್ ಮಾಲಕನಿಂದ ರೂ 1.05 ಕೋಟಿ ವಸೂಲಿಗೆ ಯತ್ನಿಸಿದ್ದ ಜನಶ್ರೀ ಸಿಬ್ಬಂದಿ

ಬೆಂಗಳೂರು :  ಜನಶ್ರೀ ಸುದ್ದಿ ವಾಹಿನಿಯ ಆರು ಮಂದಿ ಉದ್ಯೋಗಿಗಳು ಕೋರಮಂಗಲದಲ್ಲಿರುವ ಬಾರ್ ಮಾಲಕರೊಬ್ಬರಿಂದ ಬಲವಂತವಾಗಿ ರೂ 1.05 ಕೋಟಿ ವಸೂಲಿ ಮಾಡಲು ಒಂದು ವಾರದ ಹಿಂದೆ ಪ್ರಯತ್ನಿಸಿದ್ದರೆಂಬ ಸುದ್ದಿ ಗುರುವಾರವಷ್ಟೇ ಬೆಳಕಿಗೆ ಬಂದಿದೆ.

ಸುದ್ದಿ ವಾಹಿನಿಯ ಪ್ರದೀಪ್ ಮತ್ತಿತರ ಐದು ಮಂದಿ ದಾವತ್ ಬಾರ್ ಎಂಡ್ ರೆಸ್ಟಾರೆಂಟಿಗೆ ಎಪ್ರಿಲ್ 14ರಂದು ರಾತ್ರಿ 8.30ರ ಸುಮಾರಿಗೆ ಹೋಗಿ ಅಲ್ಲಿನ ಮ್ಯಾನೇಜರ್ ಭೇಟಿಯಾಗಿ ಬಾರ್ ಮಾಲಕ ತಮಗೆ ಕೊಡುವುದಾಗಿ ಹೇಳಿದ್ದರೆನ್ನಲಾದ  ರೂ 1.05 ಕೋಟಿ ಹಣಕ್ಕೆ ಬೇಡಿಕೆಯಿರಿಸಿದ್ದರು ಎಂದು ಕೊರಮಂಗಲ ಪೊಲೀಸ್ ಠಾಣೆಯಲ್ಲಿ ಎಪ್ರಿಲ್ 15ಂದು ಬಾರ್ ಮ್ಯಾನೇಜರ್ ಹರೀಶ್ ಶೆಟ್ಟಿ ದಾಖಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.

ಆದರೆ ಶೆಟ್ಟಿ ಹಣ ನೀಡಲು ನಿರಾಕರಿಸಿದಾಗ ಆರೋಪಿಗಳು ಅವರನ್ನು ನಿಂದಿಸಿ ಬೆದರಿಸಿ ಕೂಡಲೇ ರೂ 5 ಲಕ್ಷ ನೀಡುವಂತೆ ಒತ್ತಾಯಿಸಿದ್ದರಲ್ಲದೆ ಹಣ ನೀಡದೇ ಇದ್ದಲ್ಲಿ ಸಂಸ್ಥೆಯ ವಿರುದ್ಧ ತಪ್ಪು ಭಾವನೆ ಮೂಡಿಸುವಂತಹ ಕಾರ್ಯಕ್ರಮ ಪ್ರಸಾರ ಮಾಡುವುದಾಗಿ ಬೆದರಿಸಿದ್ದರು ಎಂದೂ ಶೆಟ್ಟ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿಗಳು ಶೆಟ್ಟಿ ಮೇಲೆ ಕೈ ಮಾಡಲು ಹೋದರೂ ಅಲ್ಲಿದ್ದ ಗ್ರಾಹಕರು ತಡೆದು ಇತ್ತಂಡಗಳನ್ನೂ ಸಮಾಧಾನಪಡಿಸಿದ್ದರು. ಈ ಪ್ರಕರಣದೊಂದಿಗೆ ಜನಶ್ರೀ ಸುದ್ದಿ ವಾಹಿನಿ ವಿರುದ್ಧದ ದೂರುಗಳ ಸಂಖ್ಯೆ ನಾಲ್ಕಕ್ಕೇರಿದೆ.