‘ಎಲ್ಲರೂ ನನ್ನವರೆಂದು ಯೋಚಿಸಿದರೆ ಜಾತಿ ವಿನಾಶ ಸಾಧ್ಯ’

ಜಾತಿ ವಿನಾಶ ಮತ್ತು ನಾನು

ವಿಚಾರ ಗೋಷ್ಠಿಯ ವರದಿ

ಮಂಗಳೂರು : ಜಾತಿ ಅಸ್ಮಿತೆ, ಶಕ್ತಿ ಒಕ್ಕೂಟವಾಗಿ ಕೆಲಸ ಮಾಡುತ್ತಿದೆ. ಜಾತಿ ವಿನಾಶಕ್ಕಿಂತ ತಾರತಮ್ಯ ನಿವಾರಣೆಗೆ ಶ್ರಮಿಸಬೇಕು. ಜಾತಿಯನ್ನು ನಿರಾಕರಿಸಿದ ಮೇಲು ಜಾತಿಯವರನ್ನು ಅನುಮಾನದಿಂದ ನೋಡುವ ದೃಷ್ಟಿಕೋನ ಬದಲಾಗಬೇಕು ಎಂದು ವಿಮರ್ಶಕ ಸಬಿತಾ ಬನ್ನಾಡಿ ಹೇಳಿದರು.

ಮಂಗಳೂರು ನಂತೂರಿನ ಶಾಂತಿಕಿರಣ ಸಭಾಂಗಣದಲ್ಲಿ ಅಭಿಮತ ಆಯೋಜಿಸಿರುವ ಜನನುಡಿ-2016 ಸಾಹಿತ್ಯ ಸಮಾವೇಶದ ಎರಡನೇ ದಿನವಾದ ಭಾನುವಾರ ಜಾತಿ ವಿನಾಶ ಮತ್ತು ನಾನು ವಿಚಾರಗೋಷ್ಠಿಯ ಸಮನ್ವಯ ಮಾಡಿದ ಅವರು, ಅಂಬೇಡ್ಕರ್ ಅವರು ಮನುಸ್ಮತಿಯನ್ನು ಸುಟ್ಟ ದಿನ ಎಂದು ನೆನಪಿಸಿಕೊಂಡರು.

“ಜಾತಿಯೊಳಗಿನ ಮದುವೆಯಲ್ಲಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಸೂಚನೆ ಇರುತ್ತೆ. ಆದರೆ ಅಂತರ್ಜಾತಿ ವಿವಾಹದಲ್ಲಿ ನಿಮ್ಮ ಜತೆ ನಾವಿಲ್ಲ ಎಂಬುದೇ ಪ್ರತಿಬಿಂಬಿತವಾಗುತ್ತಿರುತ್ತದೆ, ಮಕ್ಕಳಲ್ಲಿ ಯಾವುದೇ ಕೀಳರಿಮೆ ಮೂಡದಂತೆ ಬೆಳೆಸುವುದು ಸವಾಲಿನ ಕೆಲಸ. ಎಲ್ಲ ಸಂಕಟಗಳ ನಡುವೆ ಆಗಿರುವ ಮದುವೆಯನ್ನು ಉಳಿಸಿಕೊಳ್ಳುವುದು ಸಾಧನೆಯೋ. ಇಷ್ಟಪಟ್ಟವನ ಜತೆ ಸ್ನೇಹಿತೆಯಾಗಿರು. ನಂತರ ಮದುವೆ ನಿರ್ಧಾರ ಮಾಡಿಕೊ ಎಂದು ಮಗಳಿಗೆ ತಿಳಿ ಹೇಳಿದ್ದೆ” ಎಂದರು.

“ಜಾತಿಗೂ ಮದುವೆಗೂ ಸಂಬಂಧವಿರಲು ಸಾಧ್ಯವಿಲ್ಲ. ಆದರೆ ವ್ಯವಸ್ಥೆ ಇದೇ ಸತ್ಯ ಎನ್ನುವಂತೆ ಮಾಡಿಟ್ಟಿದೆ. ಜಾತಿಯನ್ನು ಮೀರುವ ನಿರ್ಧಾರವನ್ನು ಕೈಗೊಳ್ಳಬೇಕು, ಅಂತರ್ಜಾತಿ ವಿವಾಹದಲ್ಲಿಯೂ ಹಿಂಸೆಗಳಾಗುತ್ತಿದ್ದಾಗ ವಿಚ್ಛೇದನ ತೆಗೆದುಕೊಂಡರೆ ತಪ್ಪಲ್ಲ” ಎಂದರು.

ವಿಷಯ ಮಂಡಿಸಿದ ಮಲ್ಲಿಕಾ ಬಸವರಾಜು, “ದಲಿತ, ರೈತ ಚಳವಳಿಗಳ ಸಂಪರ್ಕಕ್ಕೆ ಬಂದ ನಂತರ ಜಾತಿ ವ್ಯವಸ್ಥೆ ಕುರಿತ ಜ್ಞಾನ ವಿಶಾಲಗೊಂಡಿತು. ಅಂಬೇಡ್ಕರ್, ಗಾಂಧಿ, ಲೋಹಿಯಾರನ್ನು ಓದಿದೆವು. ಮನುಷ್ಯರನ್ನು ಮಂಗಗಳಂತೆ ನಡೆಸಿಕೊಳ್ಳುವ ಜಾತಿಪದ್ಧತಿಯನ್ನು ಏಕೆ ಅನುಸರಿಸಬೇಕು ಎಂಬ ಅರಿವು ಮೂಡಿತು. ಮದುವೆಯ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ಳಲು ವಿಚಾರ ಕೈ ಹಿಡಿಯಿತು” ಎಂದರು.

“ಜಾತಿ ವಿನಾಶಕ್ಕೆ ಅಂತರ್ಜಾತಿ ವಿವಾಹ ಕಿರುದಾರಿ. ನಾನು, ನನ್ನದು ಎಂಬ ಸ್ವಾರ್ಥ ಬಿಟ್ಟು ಎಲ್ಲರೂ ನನ್ನವರು ಎಂದು ಸಾಮೂಹಿಕವಾಗಿ ಆಲೋಚಿಸಿದರೆ ಜಾತಿ ವಿನಾಶ ಸಾಧ್ಯ. ನಮ್ಮ ಕೇರಿ, ಗಲ್ಲಿಯೊಳಗೆ ಕೂತು ಜಾತಿ ಬಗ್ಗೆ ಮಾತಾಡುವುದು ಸುಲಭ. ಅದನ್ನು ಬಿಟ್ಟು ಹೊರಬಂದು ಜಗತ್ತಿಗೆ ತೆರೆದುಕೊಳ್ಳುವ ಔದಾರ್ಯವನ್ನು ತೋರಬೇಕು” ಎಂದರು.

“ನಮ್ಮ ಜಾತಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದರೂ ಜೀನ್ ಮೂಲಕ ವ್ಯಕ್ತವಾಗುತ್ತದೆ. ಅದನ್ನು ಪ್ರಜ್ಞಾಪೂರ್ವಕವಾಗಿ ಒಡೆದು ಹಾಕಬೇಕು, ಜಾತಿ ತಾರತಮ್ಯ ಅನುಭವಿಸಿದವರಿಗೆ ಮಾತ್ರ ಅದರ ನೋವು ತಿಳಿದಿರುತ್ತೆ. ಹಾಗಾಗಿ ಮೀಸಲಾತಿ ಅತ್ಯಗತ್ಯ” ಎಂದರು.

“ನನ್ನ ಮಗನನ್ನು ಶಾಲೆಗೆ ಸೇರಿಸುವಾಗ ಬೌದ್ಧಧರ್ಮ ಎಂದು ಬರೆಸಿದೆವು. ನಾವು ಬೌದ್ಧರು ಎಂದುಕೊಂಡೆವು. ಸಮಾಜ ಅದನ್ನು ಸ್ವೀಕರಿಸಲಿಲ್ಲ. ಸಮಾಜ ಅಂತೆಯೇ ನಮ್ಮ ಜಾತಿಯಿಂದಲೇ ನೋಡುತ್ತೆ ಎಂದು ಯೋಚಿಸಿದೆವು. ಮಗನ ಹಕ್ಕುಗಳನ್ನು ಕಿತ್ತುಕೊಳ್ಳಲು ನಾವು ಯಾರು ಎಂದು ಮಗ 7ನೇ ತರಗತಿಗೆ ಬಂದಾಗ ಮತ್ತೆ ಜಾತಿ ಬರೆಸಬೇಕಾಯಿತು. ನಾವು ಜಾತಿ ಬಿಟ್ಟಿದ್ದೇವೆ ಎಂದು ಕೊಂಡರೂ ಸಮಾಜ ಹಾಗೆ ನೋಡದಿರುವುದು ಬೇಸರದ ಸಂಗತಿ” ಎಂದರು.

ವಿಷಯ ಮಂಡಿಸಿದ ಶೈಲಜಾ ನಾಗರಘಟ್ಟ, “ನಾನು ಮಾನವಧರ್ಮ, ಮನುಷ್ಯ ಕುಲದಲ್ಲಿ ನಂಬಿಕೆ ಇಟ್ಟವಳು. ಎಲ್ಲರನ್ನೂ ಪ್ರೀತಿಸುವ ಗುಣ ಇದೆ. ಆ ಚೈತನ್ಯವೇ ನನ್ನನ್ನು ಇಲ್ಲಿ ತನಕ ತಂದಿದೆ” ಎಂದರು.

“ನಾನು ಜಾತ್ಯತೀತ ಮನೋಭಾವದಿಂದಲೇ ಜೀವನ ಸಂಗಾತಿಯನ್ನೂ ಆಯ್ಕೆ ಮಾಡಿಕೊಂಡೆ. ಅಂತರ್ಜಾತಿ ವಿವಾಹದ ಕಾರಣ ಕಷ್ಟದಲ್ಲಿ ಬಂಧುಗಳು, ಅಪ್ಪ, ಅಮ್ಮ ನೆರವಾಗಿಲ್ಲ ಎಂದು ಜಾತಿ ಬಿಟ್ಟು ಮದುವೆಯಾಗಿದ್ದಕ್ಕೆ ನೊಂದುಕೊಳ್ಳುವುದಿಲ್ಲ. ಕೆಲಸಕ್ಕೆ ಸೇರುವಾಗಲೂ ಮನುಷ್ಯ ಜಾತಿ ಎಂದು ನಮೂದಿಸಿದ್ದೆ. ಸಂಜೆಯೊಳಗೆ ಪ್ರಾಂಶುಪಾಲರು ಒಪ್ಪಿದ್ದರು. ಸರ್ಕಾರಿ ಕಡತಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಜಾತಿಯ ಕಾಲಂ ಹೋದರೆ ಮಾತ್ರವೇ ಜಾತಿ ವಿನಾಶ ಸಾಧ್ಯವಾಗಬಹುದು. ಎಲ್ಲಿಯವರೆಗೆ ನಾವು ಸಂಕುಚಿತತೆಯ ತೆಕ್ಕೆಯಲ್ಲಿ ಇರುತ್ತವೋ ಅಲ್ಲಿವರೆಗೂ ಜಾತಿ ವಿನಾಶ ಸಾಧ್ಯವಿಲ್ಲ. ಮೇಲು ಜಾತಿ ಎಂಬ ಅಹಂ, ಕೀಳು ಜಾತಿಯವ ಎಂಬ ಕೀಳರಿಮೆಯೂ ಅನಗತ್ಯ” ಎಂದರು.

ವಿಷಯ ಮಂಡಿಸಿದ ವಾಣಿ ಪೆರಿಯೋಡಿ, “ಜಾತಿ ತಾರತಮ್ಯ, ಲಿಂಗ ತಾರತಮ್ಯ ಎಳವೆಯಲ್ಲಿಯೇ ಬಹಳ ಕಾಡಿತು. ಅಪ್ಪ, ಅಮ್ಮನಿಂದ ದೂರ ಇದ್ದಾರೆ ಎಂದು ಏನನ್ನೂ ಪ್ರಶ್ನಿಸಲು ಅವಕಾಶ ಇತ್ತು. ಆದರೆ, ಎರಡೂ ಕುಟುಂಬಗಳು ನನ್ನ ಬೆಳವಣಿಗೆಗೆ ಕಾರಣವಾಗಿವೆ” ಎಂದರು.

“ಅಜ್ಜನೊಟ್ಟಿಗೆ ಜಾತಿ ಬಗ್ಗೆ ತುಂಬಾ ಚರ್ಚೆಯಾಗುತ್ತಿತ್ತು. ಅವರು ನನ್ನೊಂದಿಗೆ ಮಾತು ಬಿಡುತ್ತಿದ್ದರು. ಅಜ್ಜಿ ಹೊಲೆಯನನ್ನು ಮದುವೆಯಾಗುವ ಇಚ್ಛೆ ಇದೆಯೇ ಎಂದು ಕೇಳಿದ್ದರು. ಮಾಡಿಕೊಟ್ಟರೆ ಆಗುತ್ತೇನೆ ಎಂದಿದ್ದೆ. ನನಗೆ ಪಾಠ ಮಾಡಿದವರನ್ನೇ ನಾನು ಮದುವೆಯಾದೆ” ಎಂದರು.

“ಮದುವೆಯಾದಾಗ ಜಾತಿ ಮೆಟ್ಟಿ ಬಂದಿದ್ದೇನೆ ಎಂದುಕೊಂಡಿದ್ದೆ. ಸಮಾನತೆಯ ಆದರ್ಶ ಇತ್ತು. ಆದರೆ ಬದುಕು ಆರಂಭವಾದಾಗ ಬಹಳ ಕಷ್ಟವೆನಿಸಿತು. ಆಹಾರ ಪದ್ಧತಿಗೆ ಹೊಂದಿಕೊಳ್ಳಲು ಬಹಳ ಕಷ್ಟಪಟ್ಟೆ. ಯಾರಿಗೂ ನೋವಾಗಬಾರದು ಎಂದು ತುಂಬಾ ಎಚ್ಚರದಿಂದ ನಡೆದುಕೊಳ್ಳುತ್ತಿದ್ದೆ. ನಾವು ಎಂಜಲು ಎಂದರೆ ಅಸಹ್ಯ ಪಡುತ್ತೇವೆ. ಇನ್ಯಾರಿಗೋ ಎಂಜಲು ತಿನ್ನಿಸುತ್ತೇವೆ ಎಂದು ಅರ್ಥವಾಯಿತು. ಗಲೀಜು, ಅಸಹ್ಯ ಎನ್ನುವುದು ಎಲ್ಲಿಂದ ಬಂದಿತು ಎಂದು ಯೋಚಿಸುತ್ತಿದ್ದೆ. ಎಲ್ಲಿತನಕ ಶ್ರೇಣಿಯಲ್ಲಿ ತಾರತಮ್ಯ ಮಾಡುತ್ತಿದ್ದೇನೆ ಎನಿಸುವುದಿಲ್ಲವೋ ಅಲ್ಲಿವರೆಗೆ ಜಾತಿವಿನಾಶ ಸಾಧ್ಯವಿಲ್ಲ” ಎಂದರು.

ವಿಷಯ ಮಂಡಿಸಿದ ವಿ ಕೆ ಸಂಜ್ಯೋತಿ, “ಅಪ್ಪ ನಾಸ್ತಿಕ. ದೇವರೆ ಇಲ್ಲವೆಂದು ತಿಳಿದಿದ್ದರಿಂದ ಜಾತಿ, ಧರ್ಮ ನಂಬುತ್ತಿರಲಿಲ್ಲ. ಅವರಿಂದ ನಾನು ಬಹಳ ಪ್ರಭಾವಿತಳಾಗಿದ್ದೆ” ಎಂದು ನೆನಪಿಸಿಕೊಂಡರು.

“ನಾವು ಜಾತಿ ನಿರಾಕರಿಸಿದರೂ ಸಮಾಜ ಅದನ್ನು ನಿರಾಕರಿಸುತ್ತದೆಯೇ ಎನ್ನುವ ಪ್ರಶ್ನೆ ಬಹಳ ದೊಡ್ಡದು. ಮೀಸಲಾತಿ ವಿರೋಧಿಸುವವರ ವಿರುದ್ಧ ಕಟಕಿಯಾಡುತ್ತೇವೆ. ಇದರ ಅಗತ್ಯವನ್ನು ವಿವರಿಸಲು ವ್ಯವಸ್ಥೆ ಸೋತಿದೆ ಎನಿಸುತ್ತೆ” ಎಂದರು.

“ಜಾತಿಯನ್ನು ಮೀರುವಲ್ಲಿ ಅಂತರ್ಜಾತಿ ವಿವಾಹದ ಪಾತ್ರ ದೊಡ್ಡದು. ಆದರೆ ಅದರಿಂದ ನಿಜವಾಗಿಯೂ ತಾರತಮ್ಯ ನಿವಾರಣೆಯಾಗುತ್ತದೆಯೇ ಎಂಬುದು ಪ್ರಶ್ನೆ. ಸಂಪ್ರದಾಯಸ್ಥ ಮದುವೆಗಳಲ್ಲಿ ಹೆಣ್ಣು ತನ್ನ ತವರಿನ ಹೆಸರನ್ನು ಕಳಚಿಕೊಂಡು ಗಂಡನ ಮನೆಯ ಹೆಸರನ್ನು ಇಟ್ಟುಕೊಳ್ಳುವುತ್ತಿರುವುದು ಇಂದಿಗೂ ನಡೆಯುತ್ತಿದೆ. ಹೆಸರು, ಆಹಾರ ಪದ್ಧತಿಯಿಂದ ಜಾತಿ ಗುರುತಿಸುವ ಪ್ರಯತ್ನ ಸದಾ ನಡೆಯುತ್ತಿರುತ್ತದೆ. ಅದನ್ನು ಎದುರಿಸುವುದು ದೊಡ್ಡ ಸವಾಲು” ಎಂದರು.

ಪೆÇ್ರ ರವಿವರ್ಮಕುಮಾರ್ ಅವರು ಅಂತರ್ಜಾತಿ ವಿವಾಹಿತರ ಕುರಿತು ಮಾಡಿರುವ ಶಿಫಾರಸನ್ನು ಸರ್ಕಾರ ಅನುಷ್ಠಾನ ಮಾಡಬೇಕು ಎಂದರು.

ಪಿ ಭಾರತೀದೇವಿ ವಿಷಯ ಮಂಡಿಸುತ್ತಾ, “ಬದುಕಿನಲ್ಲಾದ ಸಣ್ಣ ಸಣ್ಣ ನೋವುಗಳು ಇಷ್ಟು ನೋವು ಕೊಡುವಾಗ ಹುಟ್ಟಿನ ಕಾರಣಕ್ಕೆ ಆಗುವಂತಹ ನೋವು ಅನುಭವಿಸುವವ ಬಗ್ಗೆ ತಿಳಿದುಕೊಂಡೆ” ಎಂದರು.

“ಸಂಘರ್ಷಮಯವಾಗಿ ಎದುರಿಸಿ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಅಂತಹ ದೊಡ್ಡ ಸಂಘರ್ಷವೇನೂ ನಾನು ಎದುರಿಸಲಿಲ್ಲ. ಜಾತಿ ಬೇರೆಯಾದರೂ ವರ್ಗ ಒಂದೇ ಆಗಿತ್ತು. ಬದುಕಿನ ರೀತಿನೀತಿಗಳು ಒಂದೇ ಆಗಿದ್ದವು” ಎಂದು ತಮ್ಮ ಅನುಭವ ಹಂಚಿಕೊಂಡರು.

ಪ್ರೀತಿಯ ಮೂಲಕ ಜಾತಿಯನ್ನು ಮೀರುವ ಬಗೆ ಇಷ್ಟ ಎಂದ ಅವರು, ಮಹಿಳೆಯ ಐಡೆಂಟಿಟಿ ಪ್ರಶ್ನೆ ಅಂತರ್ಜಾತಿ ಅಥವಾ ಸಾಂಪ್ರದಾಯಿಕ ವಿವಾಹ ಪದ್ಧತಿಯಲ್ಲಿ ಇದೆ. ಇದು ಸುಲಭದ ಪ್ರಶ್ನೆ ಅಲ್ಲ ಎಂದರು.