ತ ನಾ : ಜಲ್ಲಿಕಟ್ಟು ನಿಷೇಧ ಮರುಪರಿಶೀಲನಾ ಅರ್ಜಿಗೆ ಸುಪ್ರೀಂ ಕೋರ್ಟ್ ತಿರಸ್ಕಾರ

ನವದೆಹಲಿ : ಸಂವಿಧಾನದ ವ್ಯಾಪ್ತಿಯಲ್ಲಿ ಜಲ್ಲಿಕಟ್ಟುವಿಗೂ ಧಾರ್ಮಿಕ ಸ್ವಾತಂತ್ರ್ಯಕ್ಕೂ ಯಾವುದೇ ಸಂಬಂಧವಿಲ್ಲ ಕಂಡು ಬರುವುದಿಲ್ಲ ಎಂದು ಖಡಕ್ಕಾಗಿ ಹೇಳಿದ ಸುಪ್ರೀಂ ಕೋರ್ಟ್, ಜಲ್ಲಿಕಟ್ಟು ನಿಷೇಧ ಪುನರ್‍ಪರಿಶೀಲಿಸುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯನ್ನು ತಳ್ಳಿಹಾಕಿದೆ.

“ತಮಿಳುನಾಡಿನಲ್ಲಿ ಹೋರಿಗಳನ್ನು ಜಲ್ಲಿಕಟ್ಟು ಕ್ರೀಡೆಗೆ ಬಳಸಿಕೊಳ್ಳುವುದು ಪ್ರಾಣಿಗಳ ಕ್ಷೇಮಾಭಿವೃದ್ಧಿ ಕಾಯ್ದೆಗೆ ವಿರುದ್ಧವಾಗಿದೆ. ಅಂದರೆ, ಈ ಕ್ರೀಡೆಯಿಂದ ಪ್ರಾಣಿಗಳಿಗೆ ಹಿಂಸೆ ತಡೆ ಕಾಯ್ದೆ ಉಲ್ಲಂಘನೆಯಾಗುತ್ತದೆ” ಎಂದು ಸುಪ್ರೀಂ ನ್ಯಾಯಪೀಠದ ಜಸ್ಟಿಸ್ ದೀಪಕ್ ಮಿಶ್ರ ಮತ್ತು ನ್ಯಾ ಆರ್ ಎಫ್ ನಾರಿಮನ್ ಸ್ಪಷ್ಟಪಡಿಸಿದ್ದಾರೆ.

“ಧಾರ್ಮಿಕ ಸ್ವಾತಂತ್ರ್ಯದ ಕಲಂ 25ಕ್ಕೂ ಜಲ್ಲಿಕಟ್ಟುವಿಗೆ ಎಲ್ಲೂ ಸಂಬಂಧ ಕಂಡು ಬಂದಿಲ್ಲ” ಎಂದವರು ಸ್ಪಷ್ಪಡಿಸಿದರು.

“ಸಾಕು ಪ್ರಾಣಿಯಾಗಿರುವ ಹೋರಿಗಳನ್ನು ಮನೋರಂಜನೆಗಾಗಿ ಪಳಗಿಸಲಾಗುತ್ತದೆ ಎಂಬುದು ಊಹಿಸಲು ಅಸಾಧ್ಯವಾಗಿದೆ. ವಿಶಾಲವಾದ ಮೈದಾನಗಳಲ್ಲಿ ಹೋರಿಗಳನ್ನು ಬೆಂಕಿಯಲ್ಲಿ ಓಡಿಸಿ, ಮನೋರಂಜನೆ ಪಡೆಯಲಾಗುತ್ತದೆ. ಇದಕ್ಕೆ ಟಿಕೆಟು ನಿಗದಿಪಡಿಸದಿದ್ದರೂ, ಇದರಿಂದ ಪ್ರಾಣಿಗಳ ಮೇಲೆ ದೌರ್ಜನ್ಯವೆಸಗಿದಂತಾಗುತ್ತದೆ” ಎಂದು ನ್ಯಾಯಪೀಠ ಹೇಳಿದೆ.

“ಪ್ರತಿಯೊಂದು ಹಬ್ಬವು ಧಾರ್ಮಿಕ ಹಿನ್ನೆಲೆ ಹೊಂದಿದೆ. ಅಂತೆಯೇ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕೂಡಾ ಧಾರ್ಮಿಕ ಹಿನ್ನೆಲೆ ಹೊಂದಿದೆ. ಈ ಕ್ರೀಡೆಯನ್ನು ಕೃಷಿಕರು ಬೇಸಾಯ ಆರಂಭದ ಸಂದರ್ಭದಲ್ಲಿ ಆಯೋಜಿಸುತ್ತಾರೆ” ಎಂದು ತಮಿಳುನಾಡು ಪರವಾದಿ ಹಿರಿಯ ವಕೀಲ ಶೇಖರ್ ನಪಾಡೆ ಕೋರ್ಟಿಗೆ ನಿವೇದಿಸಿದ್ದರು.