ಮತ್ತೆ ಸಲ್ಲು ಜೊತೆ ಜಾಕ್

`ಕಿಕ್’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ಸಲ್ಮಾನ್ ಖಾನ್ ಮತ್ತು ಜಾಕ್ವೆಲೀನ್ ಫರ್ನಾಂಡಿಸ್ ಮತ್ತೆ ಬೆಳ್ಳಿ ಪರದೆ ಮೇಲೆ ಮಿಂಚಲಿದ್ದಾರೆ. `ಕಿಕ್’ ಚಿತ್ರದಲ್ಲಿ ಅವರಿಬ್ಬರ ಕೆಮೆಸ್ಟ್ರಿ ಚಿತ್ರರಸಿಕರಿಗೆ ಮೋಡಿ ಮಾಡಿತ್ತು. ಈಗ `ಎಬಿಸಿಡಿ 3′ ಚಿತ್ರದಲ್ಲಿ ಅವರಿಬ್ಬರೂ ಒಟ್ಟಾಗಿ ಅಭಿನಯಿಸಲಿದ್ದಾರೆ. ಈ ಸೀರೀಸಿನ ಮೊದಲೆರಡು ಚಿತ್ರಗಳನ್ನು ನಿರ್ದೇಶಿಸಿದ್ದ ರೆಮೋ ಡಿಸೋಜಾರೇ ಈ ಸಿನಿಮಾಗೂ ಸಾರಥ್ಯ ವಹಿಸಲಿದ್ದಾರೆ.

`ಎಬಿಸಿಡಿ’ ಅಂದ್ರೆ `ಎನಿ ಬಡಿ ಕ್ಯಾನ್ ಡ್ಯಾನ್ಸ್’ ಎಂದಾಗಿದ್ದು ಶೀರ್ಷಿಕೆಯೇ ಹೇಳುವಂತೆ ಇದೊಂದು ಡ್ಯಾನ್ಸ್ ಆಧರಿತ ಚಿತ್ರ. ಈ ಹಿಂದೆ `ಎಬಿಸಿಡಿ’ ಮತ್ತು `ಎಬಿಸಿಡಿ 2′ ಚಿತ್ರಗಳು ಬಿಡುಗಡೆಯಾಗಿ ಯಶಸ್ಸು ಕಂಡಿದ್ದು ಇದೀಗ ಇದೇ ಸರಣಿಯ ಮೂರನೇ ಚಿತ್ರ ತೆರೆಗೆ ಬರಲಿದೆ. `ಎಬಿಸಿಡಿ’ ಚಿತ್ರದಲ್ಲಿ ಎಲ್ಲರೂ ಡ್ಯಾನ್ಸರೇ ಆಗಿದ್ದು ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ಮಿಂಚಿದವರಾಗಿದ್ದರು. `ಎಬಿಸಿಡಿ-2’ದಲ್ಲಿ ವರುಣ್ ಧಾವನ್ ಮತ್ತು ಶ್ರದ್ಧಾ ಕಪೂರ್ ನಟಿಸಿದ್ದರು.

ಚಿತ್ರದಲ್ಲಿ ಸಲ್ಮಾನ್ ತನ್ನ ಮಗಳನ್ನು ಡ್ಯಾನ್ಸ್ ಸ್ಪರ್ಧೆಗೆ ರೆಡಿ ಮಾಡುವ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಅಮೀರ್ ಖಾನ್ `ದಂಗಾಲ್’ ಚಿತ್ರದಲ್ಲಿ ತನ್ನ ಮಕ್ಕಳನ್ನು ಕುಸ್ತಿಯಲ್ಲಿ ತರಬೇತಿ ಕೊಡುವ ಪಾತ್ರದಲ್ಲಿ ನಟಿಸಿ ಬ್ಲಾಕ್ ಬಸ್ಟರ್ ಚಿತ್ರ ನೀಡಿದ್ದು ಈಗ ಸಲ್ಲು ಮಗಳನ್ನು ಡ್ಯಾನ್ಸರ್ ಆಗಿಸುವ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಜನರಲ್ಲಿ ಸಹಜವಾಗಿಯೇ ಕುತೂಹಲ ಮೂಡಿದೆ.

ಅಂದ ಹಾಗೆ ಚಿತ್ರದಲ್ಲಿ ಜಾಕ್ವೆಲಿನ್ ಡ್ಯಾನ್ಸ್ ಟೀಚರ್ ಆಗಿ ಕಾಣಿಸಿಕೊಳ್ಳಲಿದ್ದಾಳೆ. ಉಳಿದ ಪಾತ್ರವರ್ಗ ಇನ್ನಷ್ಟೇ ಗೊತ್ತಾಗಬೇಕಿದೆ. ಸಲ್ಮಾನ್ ನಟಿಸಿರುವ `ಟ್ಯೂಬ್ ಲೈಟ್’ ಈದ್ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಅದಲ್ಲದೇ ಈಗ `ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ನಟಿಸುತ್ತಿದ್ದು ಆ ಚಿತ್ರದ ಬಳಿಕ `ಎಬಿಸಿಡಿ 3′ ಚಿತ್ರಕ್ಕೆ ಡೇಟ್ಸ್ ನೀಡಿದ್ದಾನೆ ಎನ್ನಲಾಗಿದೆ. ಜಾಕ್ ಈಗ ವರುಣ್ ಧಾವನ್ ಜೊತೆ `ಜುಡ್ವಾ-2′ ಚಿತ್ರದಲ್ಲಿ ಅಭಿನಯಿಸುತ್ತಿದ್ದಾಳೆ.