ಹಳೆಯಂಗಡಿಯಲ್ಲಿ ಹಿರಿಯ ನಾಗರಿಕರ ಕಾಯಿಸಿದ ಐವನ್

ಮುಲ್ಕಿ : ಹಳೆಯಂಗಡಿ ಯುವತಿ ಮಂಡಲ ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ಹಿರಿಯ ನಾಗರಿಕರಿಗೆ ಗುರುತು ಚೀಟಿ ನೋಂದಾವಣೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹಿರಿಯ ನಾಗರಿಕರನ್ನು ಕಾಯಿಸಿದ ವಿಲಕ್ಷಣ ಘಟನೆ ನಡೆದಿದೆ.

ಸುಮಾರು ಒಂಭತ್ತು ಗಂಟೆಗೆ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮ ಬರೋಬ್ಬರಿ ಎರಡು ಗಂಟೆ ತಡವಾಗಿ 11 ಗಂಟೆಗೆ ಶುರುವಾಗಿದೆ. ಐವನ್ ಬರುವವರೆಗೆ ಸಂಘಟಕರು ಕಾದು ಬಳಿಕ ಕಾರ್ಯಕ್ರಮ ಶುರು ಮಾಡಲಾಗಿದೆ. ಹಿರಿಯ ನಾಗರಿಕರು ಈ ಸಂದರ್ಭ ಐವನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 11 ಗಂಟೆ ಸುಮಾರಿಗೆ ಬಂದ ಐವನ್ ಸಭೆಯಲ್ಲಿ ಸುಮಾರು ಅರ್ಧ ಗಂಟೆ ಮಾತನಾಡಿ ತಾನೂ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿಸಿ ಸಭೆ ಬೋರ್ ಹೊಡೆಸುವಂತೆ ಮಾಡಿದರು ಎಂದು ಹಿರಿಯ ನಾಗರಿಕರು ಗೊಣಗಿದ್ದು ಕೇಳಿಬಂತು.
ಮುಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ ತಮ್ಮ ನಾಲ್ಕು ಹಿಂಬಾಲಕರೊಡನೆ ತಿರುಗುತ್ತಿರುವ ಐವನ್ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಕೆಲ ಕಡೆ ಸರಕಾರಿ-ಖಾಸಗಿ ಕಾರ್ಯಕ್ರಮ ವಹಿಸಿಕೊಂಡು ಅಭಯಚಂದ್ರ ಬೆಂಬಲಿಗರಿಗೆ ಇರಿಸುಮುರಿಸು ಉಂಟು ಮಾಡುತ್ತಿದ್ದಾರೆ. ಅಭಯಚಂದ್ರ ಬೆಂಬಲಿಗರು ಮನೆಮನೆ ಕಾಂಗ್ರೆಸ್ ಭೇಟಿ ನಡೆಸುತ್ತಿದ್ದರೆ ಐವನ್ ಬೆಂಬಲಿಗರು ಇವರೇ ಮೂಡಬಿದ್ರೆ ಕ್ಷೇತ್ರದ ಅಭ್ಯರ್ಥಿ ಎಂದು ಸರಕಾರಿ ಪೋಷಿತ ಕಾರ್ಯಕ್ರಮಗಳಲ್ಲಿ ತಿರುಗಾಡಿಕೊಂಡಿದ್ದಾರೆ ಎಂಬುದು ಅಭಯಚಂದ್ರ ಬೆಂಬಲಿಗರ ಆರೋಪ. ಕೂಡಲೇ ಐವನ್ ಬಾಯಿಗೆ ಲಗಾಮು ಹಾಕಬೇಕೆಂದು ಸ್ಥಳೀಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.