ಐವನ್ ಡಿ’ಸೋಜಾಗೆ ಸಚಿವನಾಗುವ ಆಸೆ

ಮಂಗಳೂರು : ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜ ತಾವು ಸಚಿವ ಹುದ್ದೆಯ ಆಕಾಂಕ್ಷಿಯೆಂದು ಹಾಗೂ ಯಾವುದೇ ಸಚಿವ ಹುದ್ದೆಯನ್ನು ಸ್ವೀಕರಿಸಲು ಸಿದ್ಧವೆಂಬುದನ್ನು ಬಹಿರಂಗಗೊಳಿಸಿದ್ದಾರೆ.

`ನೀವು ಸಿದ್ದರಾಮಯ್ಯ ಸಂಪುಟ ಸೇರಲಿಚ್ಛಿಸುತ್ತೀರಾ?’ ಎಂಬ ಪತ್ರಕರ್ತರ ಸತತ ಪ್ರಶ್ನೆಗಳಿಗೆ ಮೊದಲು ಉತ್ತರಿಸಲು ನಿರಾಕರಿಸಿ ಮೌನವಾಗಿದ್ದ ಐವನ್ ನಂತರ “ಸೈಕಲ್ ಚಲಾಯಿಸುವ ವ್ಯಕ್ತಿಗೆ ಕಾರನ್ನು ನೀಡಿದರೆ ಆತ ಅದನ್ನು ಸ್ವೀಕರಿಸದೇ  ಇರುತ್ತಾನೆಯೇ?” ಎನ್ನುವ ಮೂಲಕ ತಮ್ಮ ಮನದಿಂಗಿತವನ್ನು ತಿಳಿಯ ಪಡಿಸಿದರು.

ವಿಧಾನಪರಿಷತ್ ಸದಸ್ಯನಾಗಿ ಜನರ ಸೇವೆಗೆ ಸೀಮಿತ ಅವಕಾಶಗಳಿವೆ ಎಂದು ಹೇಳುವ ಐವನ್ ತಾವು ಮಂಗಳೂರು ದಕ್ಷಿಣ ಅಥವಾ ಕಾಪು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾಗಿ ಹಾಗೂ ಈ ಎರಡೂ ಕ್ಷೇತ್ರಗಳಲ್ಲಿ ಹಿಂದೆ ಕೂಡ ಸ್ಪರ್ಧಿಸಿದ್ದಾಗಿ ಹೇಳಿದರು.

ಕಾಂಗ್ರೆಸ್ ಪಕ್ಷ ಉಪಚುನಾವಣೆಯಲ್ಲಿ ಸೋಲುಣ್ಣುವುದು ಎಂದು ಭವಿಷ್ಯ ನುಡಿದಿದ್ದ ಹಿರಿಯ ನಾಯಕ ಜನಾರ್ದನ ಪೂಜಾರಿ ಹೇಳಿಕೆಗೆ ಪ್ರತಿಕ್ರಿಯಿಸಲು ಐವನ್ ನಿರಾಕರಿಸಿದರು. ಆದರೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು ಪಕ್ಷಕ್ಕೆ ಮುಂದಿನ ಚುನಾವಣೆಗೆ 224 ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಗಳನ್ನು  ಕಣಕ್ಕಿಳಿಸಲು  ಸಾಧ್ಯವಾಗದು ಎಂದಿದ್ದಾರೆ.