`ಇದು ಆರ್ಥಿಕ ಕುಸಿತ ಎಂದು ಒಪ್ಪಿಕೊಳ್ಳುವುದು ಉಚಿತ’

“ಆದರೂ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಅರ್ಥವ್ಯವಸ್ಥೆ ಹದಗೆಡುವುದು ಮಾತ್ರ ಶತಃಸಿದ್ಧ”

“ಭಾರತದ ಅರ್ಥವ್ಯವಸ್ಥೆ ದುರ್ಗಮ ಮಾರ್ಗದಲ್ಲಿದೆ. 2017-18ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇ 7.9 ರಿಂದ ಶೆ 5.7ಕ್ಕೆ ಕುಸಿದಿದೆ.  ಬಿಜೆಪಿಯ ಮೂರು ವರ್ಷದ ಆಳ್ವಿಕೆಯಲ್ಲಿ ಇದು ಕನಿಷ್ಟ ಜಿಡಿಪಿ ಆಗಿದೆ. ಔದ್ಯಮಿಕ ಉತ್ಪಾದನಾ ಕ್ಷೇತ್ರದ ಸೂಚ್ಯಂಕವೂ ಸಹ ಜುಲೈ 2017ಕ್ಕೆ ಕುಸಿದಿದ್ದು ಶೇ 1.2ರಷ್ಟಿದೆ.  ಇದೇ ವೇಳೆ ಗ್ರಾಹಕ ಬೆಲೆ ಸೂಚ್ಯಂಕದ ಅನುಸಾರ ಹಣದುಬ್ಬರ ಶೇ 3.4ಕ್ಕೆ ಏರಿದ್ದು ಐದು ತಿಂಗಳಲ್ಲಿ ಇದು ಅತಿ ಹೆಚ್ಚಿನ ಹಣದುಬ್ಬರವಾಗಿದೆ. ಜಿಡಿಪಿ ದರದ ಕುಸಿತ ಚಿಂತೆಗೀಡುಮಾಡುವ ವಿಚಾರ ಎಂದು ವಿತ್ತ ಸಚಿವ ಜೈಟ್ಲಿ ಹೇಳಿದ್ದಾರೆ. ಆದರೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಈ ಕುಸಿತಕ್ಕೆ ತಾಂತ್ರಿಕ ಕಾರಣಗಳು ಇವೆ ಎಂದು ಅಪ್ರಬುದ್ಧ ಹೇಳಿಕೆ ನೀಡಿದ್ದಾರೆ. ಈ ಆರ್ಥಿಕ ಕುಸಿತ ಮತ್ತು ಹಿನ್ನಡೆ ಕೇವಲ ಅಮಾನ್ಯೀಕರಣದಂತಹ ಒಂದು ಘಟನೆಯ ಪರಿಣಾಮವಲ್ಲ,  ಕಳೆದ ಮೂರು ವರ್ಷಗಳಿಂದಲೂ ಈ ಪ್ರಕ್ರಿಯೆ ಜಾರಿಯಲ್ಲಿದೆ” ಎಂದು ಜೆಎನ್‍ಯು ವಿಶ್ವವಿದ್ಯಾಲಯದ ಪ್ರೊಫೆಸರ್ ಹಿಮಾಂಶು ಹೇಳುತ್ತಾರೆ. ಹಿಮಾಂಶು ಅವರೊಡನೆ ಒಂದು ಸಂದರ್ಶನ :

  • ಆರ್ಥಿಕ ಪುನಶ್ಚೇತನ ಎಲ್ಲಿ ಸಂಭವಿಸುತ್ತಿದೆ ಎಂದು ಭಾವಿಸುತ್ತೀರಿ ?

ಅಮಾನ್ಯೀಕರಣದಿಂದ ಭಾರತದ ಆರ್ಥಿಕತೆಗೆ ಬಾಧೆ ಹೆಚ್ಚಾಗಿದೆಯೇ ಹೊರತು ಲಾಭವಾಗಿಲ್ಲ ಎಂದು ನಾವು ಹೇಳುತ್ತಿದ್ದುದನ್ನೇ ಆರ್ ಬಿ ಐ ದೃಢೀಕರಿಸಿದೆ. ಈ ಬಾಧೆ ಯಾವ ಹಂತದಲ್ಲಿ ಉಂಟಾಯಿತು, ಎಲ್ಲಿ ಬಾಧಿತವಾಯಿತು ಎಂದು ಇನ್ನೂ ಶೋಧಿಸುತ್ತಿದ್ದೇವೆ. ಅಮಾನ್ಯೀಕರಣದಿಂದ ಆರ್ಥಿಕ ವ್ಯವಸ್ಥೆಯ ಮೇಲಾಗಿರುವ ನೇತ್ಯಾತ್ಮಕ ಪರಿಣಾಮಗಳನ್ನು ನೋಡಿದ್ದಾರೆ. ಆದರೆ ಈ ಆರ್ಥಿಕ ಕುಸಿತಕ್ಕೆ ಅಮಾನ್ಯೀಕರಣ ಮಾತ್ರವೇ ಕಾರಣವಲ್ಲ. ನಾನು ಈ ಹಿಂಜರಿತವನ್ನು ಕುಸಿತ ಎಂದೇ ಕರೆಯುತ್ತೇನೆ. 2015-16ರಿಂದಲೇ ಅಭಿವೃದ್ಧಿ ದರ ಕ್ಷೀಣಿಸುತ್ತಿದೆ. ಆಳುವ ವರ್ಗಗಳು ಹಲವಾರು ವರ್ಷಗಳಿಂದ ನಿರ್ಲಕ್ಷಿಸಿರುವ ಸಮಸ್ಯೆಗಳ ಫಲವನ್ನು  ನಾವಿಂದು ಅನುಭವಿಸುತ್ತಿದ್ದೇವೆ.

  • ನೀವು ಉಲ್ಲೇಖಿಸುವ ಸಮಸ್ಯೆಗಳು ಯಾವುವು ?

ಕೆಲವು ಸಮಸ್ಯೆಗಳು 2013-14ರಲ್ಲೇ ಆರಂಭವಾಗಿದ್ದವು. ವೇತನ ಮತ್ತು ಕೂಲಿಯ ದರಗಳು 2013ರಿಂದಲೇ ಕುಸಿತ ಕಂಡಿದ್ದವು. ಬ್ಯಾಂಕುಗಳಲ್ಲಿ ಮರುಪಾವತಿಯಾಗದ ಸಾಲದ ಹೊರೆ ಆಗಲೇ ಆರಂಭವಾಗಿತ್ತು. ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತ ಆರಂಭವಾಗಿತ್ತು. 2014ರಲ್ಲಿ ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡ ಕೂಡಲೇ ತೈಲ ಬೆಲೆಗಳ ಕುಸಿತದಿಂದ ಪ್ರಾಥಮಿಕ ಪದಾರ್ಥಗಳ ಬೆಲೆಗಳೂ ಕುಸಿದವು. 2014-15ರಲ್ಲಿ ಬರಗಾಲ ತಲೆದೋರಿತ್ತು. 2014ರಲ್ಲಿ ಕೃಷಿ ಬಿಕ್ಕಟ್ಟು ಕುಸಿದಿದ್ದು 2015ರಲ್ಲಿ ಸಂಪೂರ್ಣ ಕುಸಿತ ಕಂಡಿತ್ತು. ಗ್ರಾಮೀಣ ಪ್ರದೇಶದ ಬೇಡಿಕೆ ಪ್ರಮಾಣ ಕುಸಿದಿತ್ತು. ಈ ಕುಸಿತವನ್ನು ಸರ್ಕಾರ ಗಮನಿಸಬೇಕಿತ್ತು. ಇದರ ಪರಿಣಾಮ ಇತರ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿತ್ತು. ರಫ್ತು ವ್ಯಾಪಾರ ಎರಡು ವರ್ಷಗಳಿಂದಲೇ ಕುಸಿಯುತ್ತಿತ್ತು.  ಕಟ್ಟಡ ನಿರ್ಮಾಣ ಜಿಡಿಪಿಯಲ್ಲಿನ ಕುಸಿತದಿಂದ ಸಾಲದ ಮೊತ್ತ ಕ್ಷೀಣಿಸಿತ್ತು. ಬಂಡವಾಳ ಹೂಡಿಕೆ ಕಡಿಮೆಯಾಗಿತ್ತು.

  • ಸಣ್ಣ ಉದ್ದಿಮೆಗಳ ಮೇಲೆ ಜಿ ಎಸ್ ಟಿ ಪರಿಣಾಮವನ್ನು ಗ್ರಹಿಸುವುದು ಹೇಗೆ ? ಆರ್ಥಿಕ ಪುನಶ್ಚೇತನ ಹೇಗೆ ಕಾಣುವಿರಿ ?

ಜಿ ಎಸ್ ಟಿ ಜಾರಿಯಾಗಿ ಕೇವಲ ಎರಡೇ ತಿಂಗಳು ಕಳೆದಿರುವುದರಿಂದ ಆನೌಪಚಾರಿಕ ಕ್ಷೇತ್ರದ ಮೇಲಿನ ಪರಿಣಾಮವನ್ನು ಮಾಹಿತಿ ಸಮೇತ ನಿರೂಪಿಸಲಾಗದು. ಜಿ ಎಸ್ ಟಿ ಅನೌಪಚಾರಿಕ ಕ್ಷೇತ್ರಕ್ಕೆ ಧಕ್ಕೆ ಉಂಟುಮಾಡಿರುವುದು ಮಾತ್ರ ಸತ್ಯ. ಮುಂದಿನ ಮೂರು ತ್ರೈಮಾಸಿಕಗಳಲ್ಲಿ ಈ ಕುಸಿತ ಸುಧಾರಿಸುತ್ತದೆ ಎಂಬ ನಂಬಿಕೆ ನನಗಿಲ್ಲ. ಖಾಸಗಿ ಆರ್ಥಿಕ ಚÀಟುವಟಿಕೆÀಗಳು ಉತ್ತಮವಾಗುವ ಸಂಭವ ಕಾಣುತ್ತಿಲ್ಲ. ಮುಂದಿನ ತ್ರೈಮಾಸಿಕದಲ್ಲಿ ಅಭಿವೃದ್ಧಿಯಲ್ಲಿನ ಕೃಷಿ ಕ್ಷೇತ್ರದ ಪಾತ್ರ ಇನ್ನೂ ಕ್ಷೀಣಿಸುತ್ತದೆ. ರಾಜಕೀಯ ಹಿತಾಸಕ್ತಿಗಳ ಪರಿಣಾಮ ಜಾನುವಾರು ಕ್ಷೇತ್ರವೂ ಸಹ ಹಿನ್ನಡೆ ಕಾಣುತ್ತಿರುವುದು ವಾಸ್ತವ.

  •   ಸೇವಾ ಕ್ಷೇತ್ರದ ಬಗ್ಗೆ ನಿಮ್ಮ ಅನಿಸಿಕೆ ಏನು ?

ಸೇವಾ ಕ್ಷೇತ್ರ ಸುರಕ್ಷಿತವಾಗಿರಲು ಕಾರಣ ಎಂದರೆ ಸರ್ಕಾರಿ ಸೇವೆಗಳು ಮತ್ತು ಜಿಎಸ್‍ಟಿಗೂ ಮುಂಚಿನ ದಾಸ್ತಾನು ಪ್ರಕ್ರಿಯೆ. ಜನತೆ ಈ ಮುನ್ನ ಭಾವಿಸಿದ್ದಕ್ಕಿಂತಲೂ ಹೆಚ್ಚು ಗಂಭೀರವಾಗಿ ಅರ್ಥಿಕ ಕುಸಿತ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಒಂಭತ್ತು ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಿರುವುದರಿಂದ ಆ ಸರ್ಕಾರಗಳ ಬೊಕ್ಕಸಕ್ಕೆ ಹೊರೆಯಾದಂತಿದೆ. ಆರ್ಥಿಕ ಕ್ರೋಢೀಕರಣಕ್ಕೂ ಧಕ್ಕೆ ಉಂಟಾಗಿದೆ. ವಾಜಪೇಯಿ ಸರ್ಕಾರದ ಅವಧಿಯಲ್ಲೂ ಇದೇ ವಿದ್ಯಮಾನ ಕಂಡುಬಂದಿತ್ತು.  ಹಿಂದಿನ ಯುಪಿಎ ಸರ್ಕಾರಕ್ಕೂ ಇಂದಿನ ಮೋದಿ ಸರ್ಕಾರಕ್ಕೂ ಆರ್ಥಿಕ ನೀತಿಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬರುವುದಿಲ್ಲ. ಆದರೂ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಅರ್ಥವ್ಯವಸ್ಥೆ ಹದಗೆಡುವುದು  ಮಾತ್ರ ಶತಃಸಿದ್ಧ.