ಸ್ಕೂಟರಿನಲ್ಲಿ ವಿದೇಶ ಸುತ್ತುತ್ತಾ ಭಾರತಕ್ಕೆ ಬಂದ ವಿದೇಶಿಗ

ಸ್ಕೂಟರಿನಲ್ಲಿ ವಿದೇಶ ಸುತ್ತುತ್ತಾ ಗೋಕರ್ಣಕ್ಕೆ ಬಂದ ಪಿಎಟ್ರೊ

ನಮ್ಮ ಪ್ರತಿನಿಧಿ ವರದಿ

ಗೋಕರ್ಣ : ತನ್ನ ಬಜಾಜ್ ಸ್ಕೂಟರ್ ರೈಡ್ ಮಾಡುತ್ತಾ ಗಿನ್ನಿಸ್ ದಾಖಲೆಗಾಗಿ ಹಲವು ದೇಶಗಳನ್ನು ಸುತ್ತಿ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗ ಗೋಕರ್ಣಕ್ಕೆ ಆಗಮಿಸಿದ್ದು, ಸ್ಥಳೀಯರು ಹಾಗೂ ಕೆಲವು ವಿದೇಶಿ ಪ್ರಜೆಗಳು ಈತನಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.

ಈತ ಇಟಲಿ ದೇಶದ ಮಿಲಾನಿನ ಪ್ರಜೆ ಪಿಎಟ್ರೊ ಪೆರೊ ಎಂಬಾತನಾಗಿದ್ದಾನೆ. ಇಟಲಿಯಿಂದ ಹೊರಟ ಈತ ಟರ್ಕಿ, ರೊಮೆನಿಯಾ, ಲಿಬಿಯಾ, ಯುಕ್ರೇನ್, ಇರಾನ್, ಪಾಕಿಸ್ತಾನ ಮೂಲಕ ಭಾರತಕ್ಕೆ ಬಂದಿದ್ದಾನೆ. ಇದುವರೆಗೆ ಒಟ್ಟೂ 27,000 ಕಿ ಮೀ ಪ್ರಯಾಣಿಸಿದ್ದಾನೆ. ಪುನಃ 10,000 ಕಿ ಮೀ ಪ್ರಯಾಣಿಸುವ ಗುರಿ ಇಟ್ಟುಕೊಂಡಿದ್ದು, ವಿಯೆಟ್ನಾಂನಲ್ಲಿ ಪ್ರಯಾಣ ಕೊನೆಗೊಳಿಸಲಿದ್ದಾನೆ. ಪಂಜಾಬಿನ ಮೂಲಕ ಭಾರತ ಪ್ರವೇಶಿಸಿ ಬಳಿಕ ಕರ್ನಾಟಕದ ಗೋಕರ್ಣಕ್ಕೆ ಬಂದಿದ್ದಾನೆ.

ಆಯಾ ದೇಶದ ಜನಪದ ಕಲೆ, ಕೃಷಿ, ಯುವಪೀಳಿಗೆಯ ಮುಂದಿನ ಧ್ಯೇಯೋದ್ದೇಶ, ನೈಸರ್ಗಿಕ ಹಸಿರನ್ನು ಉಳಿಸುವ ಕುರಿತಾದ ಮಾಹಿತಿಗಳನ್ನು ಕಲೆ ಹಾಕುವುದು ಈತನ ಧ್ಯೇಯವಾಗಿದೆ. 31 ವಯಸ್ಸಿನವನಾದ ಈತ ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದಾನೆ. ಈ ಹಿಂದೆ ತನ್ನ ದೇಶದಲ್ಲಿ 54 ತಾಸು ಡ್ರಮ್ ವಾದ್ಯ ನುಡಿಸಿ ಆಕ್ಸಫರ್ಡ್ ದಾಖಲೆ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾನೆ. ಹಾಲಿ ಗೋಕರ್ಣದಲ್ಲಿರುವ ಗೆಳೆಯ ಇಟಲಿಯ ಕುರ್ಲೆಸ್ ಚಾರ್ಲಿ ಜೊತೆ ಕೆಲವು ದಿನವಿದ್ದು, ಮುಂದಿನ ಪ್ರಯಾಣ ಕೇರಳದ ಮುಖಾಂತರ ಶ್ರೀಲಂಕಾ ದೇಶವನ್ನು ಸಂದರ್ಶಿಸಲಿದ್ದಾನೆಂದು ತಿಳಿದುಬಂದಿದೆ.