ಭ್ರಷ್ಟರ ವಿರುದ್ಧ ಕ್ರಮವಿಲ್ಲ, ಪರಿಶಿಷ್ಟರ ಸೌಲಭ್ಯ ವಂಚನೆಗೆ ಕ್ಷಮೆ ಇಲ್ಲ

35ಕ್ಕೂ ಹೆಚ್ಚು ಲಕ್ಷ ರೂ ವಿನಿಯೋಗಿಸಿ ಉಪಯೋಗಿಸಲಾಗದೆ ನೆಲಸಮವಾದ ಕಟ್ಟಡ

ಪರಿಶಿಷ್ಟರ ಹಾಸ್ಟೆಲ್ ನಿರ್ಮಾಣಕ್ಕೆ 35 ವರ್ಷ

ವಿಶೇಷ ವರದಿ 

ಮಂಗಳೂರು : ಬುದ್ಧಿವಂತರ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಹಗಲು ದರೋಡೆಯ ಕತೆ ಇದು. ಅದೇ ರೀತಿ ಸಮಾಜದ ಶೋಷಿತ ವರ್ಗಕ್ಕೆ ನಿರಂತರ ನಾಲ್ಕು ದಶಕಗಳ ಕಾಲ ಶಿಕ್ಷಣ ಸೌಲಭ್ಯವನ್ನು ನಿರಾಕರಿಸಿದ ಸಮಾಜದ್ರೋಹಿ ಪ್ರಕರಣ ಕೂಡಾ ಹೌದು.

ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಆಂಜನೇಯ ಅವರು ಮಂಗಳವಾರ ಮಂಗಳೂರು ಉರ್ವಾ ಮಾರಿಗುಡಿ ದೇವಸ್ಥಾನ ಸಮೀಪ ರಾಜ್ಯದ ಇತರ ಹಾಸ್ಟೆಲುಗಳಿಗೆ ಹೋಲಿಸಿದರೆ ಉತ್ತಮ ಮಟ್ಟದಲ್ಲಿ ನಿರ್ಮಿಸಿದ ಬಾಲಕಿಯರ ಹಾಸ್ಟೆಲ್ ಉದ್ಘಾಟಿಸಿದರು. ಮಾತ್ರವಲ್ಲದೆ, ಹಾಸ್ಟೆಲ್ ಎದುರುಗಡೆ ತೆಂಗಿನ ಗಿಡವೊಂದನ್ನು ನೆಟ್ಟು ನೀರೆರೆದರು. ಸಚಿವ ಆಂಜನೇಯ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾಗುವ ಮೊದಲೇ ಈ ಹಾಸ್ಟೆಲ್ ಕಟ್ಟಡ ನಿರ್ಮಾಣವಾಗಬೇಕಾಗಿತ್ತು. ಆದರೆ, ಹಾಗಾಗಲಿಲ್ಲ.

ನಗರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಿಸಲು ಮಂಗಳೂರು ಮಹಾನಗರಪಾಲಿಕೆ 1980-1981ರಲ್ಲೇ ಅನುದಾನ ನೀಡಿತ್ತು. ಹಣ ಪಾಲಿಕೆಯದ್ದು. ಜಮೀನು ಕೂಡ ಪಾಲಿಕೆಯದ್ದೇ. ವಿದ್ಯಾರ್ಥಿನಿಲಯ ನಿರ್ವಹಿಸುವ ಇಲಾಖೆ ಸಮಾಜ ಕಲ್ಯಾಣ. ಕಟ್ಟಡ ನಿರ್ಮಿಸಲು ಇವರಿಬ್ಬರೂ ನೇಮಿಸಿದ್ದು ಲೋಕೋಪಯೋಗಿ ಇಲಾಖೆಯನ್ನು.

ಪರಿಶಿಷ್ಟರ ಕಲ್ಯಾಣಕ್ಕಾಗಿ ಕಾರ್ಯಕ್ರಮ ಮಾಡಲಾಗದ ಪಾಲಿಕೆ ಅಂದಿನ ಪರಿಶಿಷ್ಟರ ಶೇಕಡ 18ರ ನಿಧಿಯಿಂದ ಅನುದಾನ ನೀಡಿತ್ತು. 1981ರಲ್ಲಿ ಕಟ್ಟಡ ನಿರ್ಮಾಣ ಆರಂಭವಾಯಿತು. 1990ರಲ್ಲಿ ಕಟ್ಟಡ ಬಹುತೇಕ ಪೂರ್ತಿಯಾಯಿತು. ಪಾಲಿಕೆ ಏಳು ವರ್ಷಗಳ ಅನಂತರ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡಿತ್ತು.

ಹೊಸದಾಗಿ ನಿರ್ಮಾಣ ಆಗಿದ್ದರೂ ಶಿಥಿಲ ಸ್ಥಿತಿಯಲ್ಲಿದ್ದ ಕಟ್ಟಡದಲ್ಲಿ ಹಾಸ್ಟೆಲ್ ಆರಂಭಿಸಲು ಅಂದಿನ ಜಿಲ್ಲಾಧಿಕಾರಿಯೊಬ್ಬರು ಹಿಂದೇಟು ಹಾಕಿದರು. ಈ ಮಧ್ಯೆ, ಅನುದಾನ ದುರುಪಯೋಗ ಆಗಿರುವುದಾಗಿ ಪಾಲಿಕೆ ಸಭೆಯಲ್ಲಿ ಸದಸ್ಯರು ಆಕ್ಷೇಪವೆತ್ತಿದರು.

ಹೊಸ ಕಟ್ಟಡದ ಉದ್ಘಾಟನೆ ಬಳಿಕ ನೆಟ್ಟ ತೆಂಗಿನ ಸಸಿಗೆ ನೇರೆರೆದ ಸಚಿವ ಆಂಜನೇಯ
ಹೊಸ ಕಟ್ಟಡದ ಉದ್ಘಾಟನೆ ಬಳಿಕ ನೆಟ್ಟ ತೆಂಗಿನ ಸಸಿಗೆ ನೇರೆರೆದ ಸಚಿವ ಆಂಜನೇಯ

2000ರ ಜೂನ್ ತಿಂಗಳಲ್ಲಿ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದ ಮಹಾನಗರ ಪಾಲಿಕೆ ನೀಡಿದ 32.83 ಲಕ್ಷ ರೂಪಾಯಿ ಅನುದಾನವನ್ನು ಬಡ್ಡಿ ಸಹಿತ ಹಿಂತಿರುಗಿಸುವಂತೆ ಒತ್ತಾಯಿಸಿತು. ಆದರೆ, ಲೋಕೋಪಯೋಗಿ ಇಲಾಖೆ ಹಣ ಹಿಂತಿರುಗಿಸಲು ನಿರಾಕರಿಸಿತು. ಮಾತ್ರವಲ್ಲದೆ, ಕಳಪೆ ಗುಣಮಟ್ಟದ ಕಟ್ಟಡ ನಿರ್ಮಾಣ ಆಗಲು ಪಾಲಿಕೆ ಕಾಲ ಕಾಲಕ್ಕೆ ಹಣ ಬಿಡುಗಡೆ ಮಾಡದಿರುವುದೇ ಕಾರಣ ಎಂದು ಪ್ರತ್ಯುತ್ತರ ನೀಡಿತ್ತು. ಮಹಾನಗರಪಾಲಿಕೆ ಲೋಕೋಪಯೋಗಿ ಇಲಾಖೆ ವಿರುದ್ಧ ಕಾನೂನು ಸಮರಕ್ಕೂ ಮುಂದಾಯಿತಾದರೂ ಯಾವುದೇ ಪ್ರಗತಿ ಆಗಲಿಲ್ಲ.

ಅನಂತರ ಲೋಕಾಯುಕ್ತಕ್ಕೆ ಕೂಡ ದೂರು ಸಲ್ಲಿಸಲಾಯಿತು. ಲೋಕಾಯುಕ್ತದಲ್ಲಿ ಕೂಡ ಯಾವುದೇ ನ್ಯಾಯಸಮ್ಮತ ತೀರ್ಪು ಬರಲಿಲ್ಲ. ಮಾತ್ರವಲ್ಲದೆ, ಸರಿಯಾದ ತನಿಖೆ ನಡೆದ ಬಗ್ಗೆ ಕೂಡ ಮಾಹಿತಿ ಇಲ್ಲ. ಇಲಾಖಾ ತನಿಖೆಗಳು ನಡೆದರೂ ರಾಜಕೀಯ ಮುಖಂಡರು ತಪ್ಪಿತಸ್ಥ ಎಂಜಿನಿಯರುಗಳ ವಿರುದ್ಧ ಕ್ರಮಕೈಗೊಳ್ಳದಂತೆ ನೋಡಿಕೊಂಡರು.

ಹಾಸ್ಟೆಲ್ ಕಾಮಗಾರಿ 1981ರಲ್ಲಿ ಆರಂಭವಾಗಿದ್ದು, ಬಹುತೇಕ ಮಂದಿ ಅಧಿಕಾರಿಗಳು ನಿವೃತ್ತಿ ಆಗಿರುವುದರಿಂದ ಕ್ರಮ ಜನಿÐ್ಝಗಿಸಲು ಕಷ್ಟಸಾಧ್ಯ ಎಂದು ಉಪಲೋಕಾಯುಕ್ತರು ಶರಾ ಬರೆದು ಕುಳಿತರು.

2001ರಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೂ ಈ ಬಗ್ಗೆ ದೂರು ನೀಡಲಾಯಿತು. ಆದರೆ, ಯಾವುದೇ ಫಲ ದೊರೆಯಲಿಲ್ಲ. ಈ ಮಧ್ಯೆ, ಜಿಲ್ಲಾಧಿಕಾರಿ ಕಟ್ಟಡವನ್ನು ಕೆಡವಿ ಹಾಕಲು ಆದೇಶ ನೀಡಿದರೂ ಪಾಲಿಕೆ ಅದಕ್ಕೆ ಆಸ್ಪದ ನೀಡಲಿಲ್ಲ. ಅವ್ಯವಹಾರ ನಡೆದಿರುವ ಬಗ್ಗೆ ಸಾಕ್ಷ್ಯ ನಾಶ ಆಗುತ್ತದೆ ಎಂಬುದು ಅದರ ವಾದ.

2005 ಎಪ್ರಿಲ್ ತಿಂಗಳಲ್ಲಿ ಪಾಲಿಕೆ ಆಯುಕ್ತರು ಜಿಲ್ಲಾ ಪಂಚಾಯತ್ ಸಿಇಒ ಸುಬೋದ್ ಯಾದವ್ ಅವರಿಗೆ ಪತ್ರ ಬರೆದು ಕಟ್ಟಡದ ಸ್ವಾಧೀನ ಪಡೆಯುವಂತೆ ಸೂಚಿಸಿದರು. ಆದರೆ, ಸುಬೋಧ್ ಯಾದವ್ ಅವರು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದು ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಹಲವು ಬಾರಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ, ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ, ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಭ್ರಷ್ಟಾಚಾರ ಮತ್ತು ಪರಿಶಿಷ್ಟ ವಿದ್ಯಾರ್ಥಿಗಳಿಗೆ ಮಾಡಲಾಗುತ್ತಿರುವ ಅನ್ಯಾಯದ ಬಗ್ಗೆ ಚರ್ಚೆ ಆಗುತ್ತಲೇ ಇತ್ತು.

2008ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಮಹೇಶ್ವರ ರಾವ್ ಅವರು ಕಟ್ಟಡ  ಕೆಡವಿ ಹಾಕಲು ಆದೇಶ ನೀಡಿದರು. ಮೂವತ್ತೊಂದು ವರ್ಷಗಳ ನಂತರ ಮತ್ತಷ್ಟು ಶಿಥಿಲವಾದ ಕಟ್ಟಡ ಕೆಡವಲು ಅನುಮತಿ ನೀಡಲಾಯಿತು. ಕೆಡಹುವುದಕ್ಕೆ ಮುನ್ನ ಎನ್ ಐ ಟಿ ಕೆ ಸಂಸ್ಥೆಯ ತಜ್ಞರಿಂದ ವಿವರವಾದ ವರದಿಯೊಂದನ್ನು ಪಾಲಿಕೆ ಪಡೆದುಕೊಂಡಿತ್ತು. ಶಿಥಿಲ ಕಟ್ಟಡ ವಿಡಿಯೋ ಚಿತ್ರೀಕರಣ ಮಾಡಿ ಕಾದಿರಿಸಲಾಗಿದೆ. ಕಟ್ಟಡ ಕೆಡವಿ ಹಾಕಲು ಟೆಂಡರ್ ಕರೆದು ಐದು ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚ ಮಾಡಲಾಯಿತು. ಅವ್ಯವಹಾರ ಮಾಡಿದ ತಪ್ಪಿತಸ್ಥರಿಂದ ನಯಾ ಪೈಸೆ ವಸೂಲು ಮಾಡಲಾಗಲಿಲ್ಲ.

ಈಗ ಸರಿಯಾಗಿ ಮೂವತ್ತೈದು ವರ್ಷಗಳ ಅನಂತರ 3.96 ಕೋಟಿ ರೂಪಾಯಿ ವೆಚ್ಚದಲ್ಲಿ ಅದೇ ಸ್ಥಳದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಉದ್ಘಾಟನೆಯಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಯಾವುದೇ ಅಪರಾಧಿಭಾವವಿಲ್ಲದೆ ಭಾಗವಹಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆಹಾರ ಇಲಾಖೆ ಸಚಿವ ಯು ಟಿ ಖಾದರ್, ಹಿಂದೊಮ್ಮೆ ಪಾಲಿಕೆ ಆಯುಕ್ತರಾಗಿದ್ದು, ಈಗ ಶಾಸಕರಾಗಿರುವ ಜೆ ಆರ್ ಲೋಬೊ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರು ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರೊಂದಿಗೆ ಉದ್ಘಾಟನೆಯಲ್ಲಿ ಭಾಗವಹಿಸಿ ಪರಿಶಿಷ್ಟರಿಗಾದ ವಂಚನೆ ಬಗ್ಗೆ ಕ್ಷಮೆ ಕೋರಲಿಲ್ಲ.