ಐ ಟಿ ತಂಡದಿಂದÀ ಭಟ್ಕಳ ಅರ್ಬನ್ ಬ್ಯಾಂಕಿಗೆ ಭೇಟಿ, ದಾಖಲೆ ಪರಿಶೀಲನೆ

ನಮ್ಮ ಪ್ರತಿನಿದಿ ವರದಿ

ಭಟ್ಕಳ : ಇಲ್ಲಿನ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ ಮಂಗಳೂರಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ನೋಟ್ ಬ್ಯಾನ್ ಆದ ಬಳಿಕದ ವ್ಯವಹಾರವನ್ನು ಸಂಪೂರ್ಣವಾಗಿ ಪರಿಶೀಲಿಸಿತು.

ಬುಧವಾರ ಮಧ್ಯಾಹ್ನ ಬ್ಯಾಂಕಿಗೆ ಆಗಮಿಸಿದ 20 ಮಂದಿ ಆದಾಯ ತೆರಿಗೆ ಅಧಿಕಾರಿಗಳ ತಂಡ ಬ್ಯಾಂಕಿನ ಹೊರಗಡೆ ಬಾಗಿಲನ್ನು ಬಂದ್ ಮಾಡಿ ಸಿಬ್ಬಂದಿಗಳ ಮೊಬೈಲುಗಳನ್ನು ವಶಕ್ಕೆ ತೆಗೆದುಕೊಂಡು, ಅವರನ್ನು ಬೇರೆಡೆಗೆ ಕಳುಹಿಸಿ ಬ್ಯಾಂಕಿನ ಎಲ್ಲಾ ಕಂಪ್ಯೂಟರುಗಳನ್ನು ವಶಕ್ಕೆ ಪಡೆದು ಖಾತೆದಾರರ ಮಾಹಿತಿಗಳನ್ನು ಒಂದೊಂದಾಗಿಯೇ ಕಲೆ ಹಾಕಿತು. ಜೊತೆಗೆ ಬ್ಯಾಂಕಿನಲ್ಲಿ ವ್ಯವಹಾರ ಮಾಡಲು ಬಂದಿದ್ದ ಗ್ರಾಹಕರ ಪಾಸ್ಬುಕ್ ಮತ್ತಿತರ ದಾಖಲೆಗಳನ್ನೂ ಕೂಡ ಅಧಿಕಾರಿಗಳು ಪರಿಶೀಲಿಸಿಯೇ ಹೊರಗೆ ಕಳುಹಿಸಿದರು. ಬುಧವಾರ ರಾತ್ರಿ 10 ಗಂಟೆಯವರೆಗೂ ಪರಿಶೀಲನೆ ನಡೆಸಿದ ತಂಡ ಗುರುವಾರ ಬೆಳಿಗ್ಗೆ ಮತ್ತೆ ಕೆಲಸ ಆರಂಭಿಸಿ ಮಧ್ಯಾಹ್ನದವರೆಗೂ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಅಧಿಕಾರಿಗಳು ನವೆಂಬರ್ 8ರಿಂದ 500 ಹಾಗೂ 1,000 ರೂಪಾಯಿಗಳ ನೋಟ್ ರದ್ದಾದ ನಂತರ ಬ್ಯಾಂಕ್ ಖಾತೆಗಳಲ್ಲಿ ಖಾತೆದಾರರು ನಡೆಸಿದ ಸಂಶಯಾಸ್ಪದ ವ್ಯವಹಾರಗಳನ್ನು ಪತ್ತೆ ಹಚ್ಚಿ ಸುಮಾರು 15-20 ಜನರಿಗೆ ನೋಟಿಸು ನೀಡಿ ಬ್ಯಾಂಕಿಗೆ ಕರೆಸಿ ಅವರಿಂದ ವಿವರಗಳನ್ನು ಪಡೆದುಕೊಂಡಿದ್ದಾರೆನ್ನಲಾಗಿದೆ. ಬ್ಯಾಂಕಿನಲ್ಲಿ ನವೆಂಬರ್ 8ರ ಬಳಿಕ ಹೆಚ್ಚು ಠೇವಣಿ ಇಟ್ಟ ಕೆಲವು ಜನರ ಖಾತೆಗಳ ವಿವರಗಳನ್ನು ಸಂಗ್ರಹಿಸಿಕೊಂಡು ಹೋಗಿರುವುದಾಗಿಯೂ ತಿಳಿದುಬಂದಿದೆ. ನವೆಂಬರ್ 8ರ ನಂತರ ಬ್ಯಾಂಕಿನಲ್ಲಿ ಖಾತೆದಾರರು ಸಂಶಯಾಸ್ಪದವಾಗಿ ವ್ಯವಹಾರ ನಡೆಸಿದ್ದರೇ ಎನ್ನುವುದನ್ನು ತಿಳಿದುಕೊಳ್ಳಲು ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಗುರುವಾರ  ಪತ್ರಕರ್ತರು ಆದಾಯ ತೆರಿಗೆ ಅಧಿಕಾರಿಗಳಲ್ಲಿ ಈ ಕುರಿತು ಮಾಹಿತಿ ಕೇಳಿದಾಗ ಅವರು ಪ್ರತಿಕ್ರಯಿಸಲು ನಿರಾಕರಿಸಿದರು.