ಎಚ್ಡೀಕೆ ಆಪ್ತನಿಗೆ ಐಟಿ ದಾಳಿ ಬಿಸಿ

ಹಾಸನ : ರಾಜ್ಯ ಜೆಡಿ(ಎಸ್) ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿಯ ಸಮೀಪವರ್ತಿ ಎಂದೇ ತಿಳಿಯಲಾಗಿರುವ ಪಕ್ಷದ ತಿಪಟೂರು ತಾಲೂಕು ಘಟಕದ ಅಧ್ಯಕ್ಷ ಜಕ್ಕನಹಳ್ಳಿ ಲಿಂಗರಾಜು ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ತಿಪಟೂರಿನ ಜಕ್ಕನಹಳ್ಳಿಯಲ್ಲಿರುವ ಲಿಂಗರಾಜುವಿಗೆ ಸೇರಿದ ವಿವಿಧ ಸ್ಥಳಗಳಿಗೂ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ದಾಳಿಗಳಲ್ಲಿ ನಗದು, ಚಿನ್ನಾಭರಣ ಹಾಗೂ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರದ ಶಂಕರಪ್ಪ ಲೇಔಟಿನಲ್ಲಿರುವ ಲಿಂಗರಾಜು ನಿವಾಸದಲ್ಲಿ ಅಧಿಕಾರಿಗಳು ಬೆಳಗ್ಗಿನಿಂದ ಸಂಜೆವರೆಗೂ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಅವರ ಕುಟುಂಬ ಸದಸ್ಯರನ್ನೂ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ದಾಳಿಯ ನಂತರ ಲಿಂಗರಾಜು ಅವರನ್ನು ಆದಾಯ ತೆರಿಗೆ ಇಲಾಖೆ ಕಚೇರಿಗೆ ಕರೆದುಕೊಂಡು ಹೋಗಿ ಅಲ್ಲಿಯೂ ವಿಚಾರಣೆ ನಡೆಸಲಾಗಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ತಿಪಟೂರಿನಿಂದ ಸ್ಪರ್ಧಿಸಿ ಸೋಲುಂಡಿದ್ದ ಲಿಂಗರಾಜು ಚಿತ್ರ ನಿರ್ಮಾಪಕ ಹಾಗೂ ಗಣಿ ಉದ್ಯಮಿಯೂ ಆಗಿದ್ದಾರೆ. ದಾಳಿಯ ನಂತರ ಪ್ರತಿಕ್ರಿಯಿಸಿದ ಈ ಜೆಡಿಎಸ್ ನಾಯಕ, ತನ್ನ ವ್ಯವಹಾರಗಳೆಲ್ಲವೂ ಪಾರದರ್ಶಕವಾಗಿದ್ದು, ದಾಳಿಯ ಹಿಂದಿನ ಕಾರಣ ತನಗೆ ತಿಳಿದುಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ.

LEAVE A REPLY