ಟೀಕಾಕಾರರನ್ನು ಹಳಿಯಲೆಂದೇ ಬಿಜೆಪಿಯಲ್ಲಿ ತಾಂತ್ರಿಕ ವಿಭಾಗ !

ನವದೆಹಲಿ : ವಿಪಕ್ಷ ರಾಜಕಾರಣಿಗಳನ್ನು, ಗಾಂಧಿ ಕುಟುಂಬವನ್ನು, ಕೆಲವೊಂದು ಪ್ರಮುಖ ಪತ್ರಕರ್ತರನ್ನು ಹಾಗೂ ನಟರನ್ನು ಸಾಮಾಜಿಕ  ಜಾಲತಾಣದಲ್ಲಿ ಅಪಹಾಸ್ಯಗೈದು ನಿಂದಿಸಲೆಂದೇ ಬಿಜೆಪಿ ತನ್ನ ಐಟಿ ಗಡಣವೊಂದನ್ನು ಸೃಷ್ಟಿಸಿದೆಯೇ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿರಬಹುದು. ಇದಕ್ಕೆ ಬಿಜೆಪಿಯ ಐಟಿ ಘಟಕದ ಸದಸ್ಯೆ ಸಾಧ್ವಿ ಖೋಸ್ಲಾ ಎಂಬವರು ನೀಡಿದ ಹೇಳಿಕೆಯೊಂದು ಸ್ವಾತಿ ಚತುರ್ವೇದಿ ಎಂಬವರ ಕೃತಿ “ಐ ಯಾಮ್ ಎ ಟ್ರೋಲ್” ಇದರಲ್ಲಿ ಉಲ್ಲೇಖಗೊಂಡಿದ್ದು ಖೋಸ್ಲಾ ಪ್ರಕಾರ  ಪಕ್ಷದ ಐಟಿ ಘಟಕದ ಕೆಲ ಸ್ವಯಂಸಹಾಯಕರಿಗೆ ತಾವು ನಿಯಮಿತವಾಗಿ ಟಾರ್ಗೆಟ್ ಮಾಡಬೇಕಾದ ಕೆಲ ಮುಖ್ಯವಾಹಿನಿ ಪತ್ರಕರ್ತರು ಮತ್ತು ನಟರ  ಹೆಸರುಗಳುಳ್ಳ ಹಿಟ್ ಲಿಸ್ಟ್ ನೀಡಲಾಗುತ್ತದೆ.

“ಗಾಂಧಿ ಕುಟುಂಬದ ಮೇಲೆ ದಾಳಿ ನಡೆಸಿ ಅವರನ್ನು ಅಣಕಿಸುವುದು ಮುಖ್ಯ ಉದ್ದೇಶವಾಗಿದೆ” ಎಂಬ ಖೋಸ್ಲಾ ಹೇಳಿಕೆ ಆ ಕೃತಿಯಲ್ಲಿ ಉಲ್ಲೇಖಗೊಂಡಿದೆ. ಆಕೆಯ ಪ್ರಕಾರ “ಮೋದಿ ವಿರುದ್ಧ ಎಲ್ಲಿಯಾದರೂ ಹೇಳಿಕೆ ಕಂಡು ಬಂದರೆ, ಪಕ್ಷದ ಡಿಜಿಟಲ್ ಟ್ರ್ಯಾಕಿಂಗ್ ಸಾಧನಗಳು ಅವುಗಳನ್ನು ಕಂಡುಹಿಡಿದು ಅಲ್ಲಿಂದ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಆರಂಭವಾಗುತ್ತದೆ.”

“ದೇಶದಲ್ಲಿನ ಅಸಹಿಷ್ಣುತೆಯ ವಾತಾವರಣದಿಂದಾಗಿ ತಮ್ಮ ಪತ್ನಿಗೆ ಅಭದ್ರತೆಯ ಭಾವನೆ ಕಾಡುತ್ತಿದೆ” ಎಂದು ಕಳೆದ ವರ್ಷ ನಟ ಆಮಿರ್ ಖಾನ್ ಹೇಳಿದಾಗ ಬಿಜೆಪಿಯ ಐಟಿ ಘಟಕ ಪಕ್ಷದ ಎಲ್ಲಾ ಸಾಮಾಜಿಕ ಜಾಲತಾಣ ಸ್ವಯಂಸೇವಕರಿಗೆ ಆಮಿರ್ ಅವರನ್ನು ಸ್ನ್ಯಾಪ್ ಡೀಲ್ ಜಾಹೀರಾತಿನಿಂದ ಕೈಬಿಡಬೇಕೆಂಬ ಮನವಿಯನ್ನು ಬೆಂಬಲಿಸಬೇಕೆಂದು ನಿರ್ದೇಶಿಸಲಾಗಿತ್ತು ಎಂದೂ ಪುಸ್ತಕದಲ್ಲಿ ಹೇಳಲಾಗಿದೆ.

“ಬಿಜೆಪಿ ವಿರೋಧಿ ಪಕ್ಷಗಳ ಮೇಲೆ ಟ್ರೆಂಡಿಂಗ್ ಹ್ಯಾಶ್ ಟ್ಯಾಗುಗಳ ಮೂಲಕ ಟ್ವೀಟ್ ಮಾಡಲೆಂದೇ ಕೆಲ ಏಜನ್ಸಿಗಳಿಗೆ ಹಣ ಸಂದಾಯವಾಗುತ್ತಿದ್ದು  ಒಂದು ಏಜನ್ಸಿಗೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ವಿರುದ್ಧ ಟ್ವೀಟ್ ಮಾಡುವ ಸಲುವಾಗಿ ಪ್ರತಿ ಏಳು ಟ್ವೀಟುಗಳಿಗೆ ರೂ 40 ನಿಗದಿಪಡಿಸಲಾಗಿತ್ತು” ಎಂದೂ ಪುಸ್ತಕದಲ್ಲಿ ಹೇಳಲಾಗಿದೆ.