ಚಿತೆಗೆ ಹಾರಿ ದಂಪತಿ ಆತ್ಮಾಹುತಿ

ಕಾರ್ಕಳದಲ್ಲೊಂದು ವಿಲಕ್ಷಣ ಘಟನೆ

ಮಕ್ಕಳಿಲ್ಲದ ಕೊರಗು

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಮಧ್ಯವಯಸ್ಕ ದಂಪತಿ ತಮಗೆ ಮಕ್ಕಳಿಲ್ಲವೆನ್ನುವ ಕೊರಗಿನಿಂದ ಮನೆಯೊಳಗೇ ಚಿತೆ ನಿರ್ಮಿಸಿ ಉರಿಯುತ್ತಿದ್ದ ಬೆಂಕಿಗೆ ಹಾರಿ ಆತ್ಮಾಹುತಿ ಮಾಡಿಕೊಂಡಿರುವ ಅತ್ಯಂತ ಅಪರೂಪದ ವಿಲಕ್ಷಣ ಮತ್ತು ಹೃದಯವಿದ್ರಾವಕ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

25krk2

ಹಿರ್ಗಾನ ಗ್ರಾಮದ ಕಾನಂಗಿ ರಸ್ತೆಯ ಬೆಂಗಲ್ ಎಂಬಲ್ಲಿನ ಸೀತಾರಾಮ ಆಚಾರ್ಯ (55) ಹಾಗೂ ಸುನಂದಾ (45) ಎಂಬ ದಂಪತಿ ಇಂತಹ ಕಠೋರ ನಿರ್ಧಾರ ಕೈಗೊಂಡು ತಮ್ಮ ಮನೆಯೊಳಗಿನ ದೇವರ ಕೋಣೆಯಲ್ಲೇ ಸೌದೆಯನ್ನು ಬಳಸಿ ಚಿತೆ ನಿರ್ಮಿಸಿ ಬಳಿಕ ಉರಿಯುತ್ತಿರುವ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ದಂಪತಿ. ಇವರು ಗುರುವಾರ ರಾತ್ರಿ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದ್ದು, ಸೀತಾರಾಮ ಆಚಾರ್ಯ ಮನೆಗೆ ಬಾಗಿಲು ಹಾಕಿರುವುದನ್ನು ಗಮನಿಸಿದ ಸ್ಥಳೀಯರು ಮನೆಯ ಛಾವಣಿ ಸುಟ್ಟುಹೋಗಿ ಕುಸಿದುಬಿದ್ದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಮನೆಗೆ ಹಾಕಲಾಗಿದ್ದ ಚಿಲಕವನ್ನು ಒಡೆದು ಒಳಗೆ ನೋಡಿದಾಗ ಚಿತೆಯ ಭಸ್ಮದಲ್ಲಿ ಮಾನವ ಮೂಳೆಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಭಯಾನಕ ಘಟನೆ ಬೆಳಕಿಗೆ ಬಂದಿದೆ.

ಮೂಲತಃ ಮಂಗಳೂರು ನಿವಾಸಿಯಾಗಿದ್ದ ಸೀತಾರಾಮ ಆಚಾರ್ಯ ಪಣಿಯೂರು ನಿವಾಸಿ ಸುನಂದ ಎಂಬವರ ಜತೆ ವಿವಾಹವಾಗಿ ಹಿರ್ಗಾನ ಗ್ರಾಮದ ಬೇಂಗಲ್ ಎಂಬಲ್ಲಿನ ಸರಕಾರಿ ಭೂಮಿಯಲ್ಲಿ ಕಳೆದ ಹದಿನೈದು ವರ್ಷಗಳ ಹಿಂದೆ ಮನೆ ಕಟ್ಟಿ ವಾಸವಾಗಿದ್ದರು. ಕಳೆದ ಹಲವು ವರ್ಷಗಳ ಹಿಂದೆ ಮದುವೆಯಾದರೂ ಮಕ್ಕಳಾಗಿರಲಿಲ್ಲ. ಅಲ್ಲದೇ ತಮ್ಮಗೆ ಯಾರೂ ಹತ್ತಿರದ ಬಂಧುಗಳು ಇಲ್ಲದ ಹಿನ್ನಲೆಯಲ್ಲಿ ಮುಂದಿನ ಭವಿಷ್ಯದ ಕುರಿತು ಸಾಕಷ್ಟು ಚಿಂತೆಗೀಡಾಗಿದ್ದರು.

ವೃತ್ತಿಯಲ್ಲಿ ಬಡಗಿಯಾಗಿದ್ದ ಸೀತಾರಾಮ ಆಚಾರ್ಯರ ಆರೋಗ್ಯ  ಹದಗೆಟ್ಟಿದ್ದರಿಂದ ಕಳೆದ ಐದಾರು ವರ್ಷಗಳಿಂದ ಖಿನ್ನರಾಗಿ ಸಮಾಜದ ಜತೆ ಬೆರೆಯುವುದನ್ನು ಕೂಡಾ ಕಡಿಮೆ ಮಾಡಿದ್ದರು. ಅಲ್ಲದೆ ಮಕ್ಕಳಿಲ್ಲದ ಕೊರಗಿನ ಬಗ್ಗೆ ಆಗಾಗ ನೋವನ್ನು ವ್ಯಕ್ತಪಡಿಸುತ್ತಿದ್ದರು.

ಸೀತಾರಾಮ ಆಚಾರ್ಯರ ಮನೆಯ ಆಸುಪಾಸಿನ ಮನಯವರೆಲ್ಲಾ ಗುರುವಾರ ರಾತ್ರಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಇವರು ಈ ಕೃತ್ಯ ಎಸಗಿದ್ದಿರಹುದೆಂದು ಶಂಕಿಸಲಾಗಿದೆ. ಮನೆಯೊಳಗೆ ಕಟ್ಟಿಗೆ, ಊದುಬತ್ತಿ, ಎಣ್ಣೆಯ ಪ್ಯಾಕೆಟುಗಳು ಸಿಕ್ಕಿದ್ದು ಮನೆಯೊಳಗಿನ ದೇವರ ಕೋಣೆಯಲ್ಲಿ ಕಟ್ಟಿಗೆ, ಗಂಧ, ಊದುಬತ್ತಿ, ಎಣ್ಣೆ ಬಳಸಿ ಚಿತೆಯನ್ನು ನಿರ್ಮಿಸಿ ಬಳಿಕ ವಿಷ ಸೇವಿಸಿ ಚಿತೆಗೆ ಹಾರಿ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ಚಿತೆಯಲ್ಲಿ ಇವರು ಸಂಪೂರ್ಣ ಸುಟ್ಟುಹೋಗಿದ್ದು ಕೇವಲ ಮೂಳೆ ಹಾಗೂ ತಲೆಬುರುಡೆಗಳು ಮಾತ್ರ ಪತ್ತೆಯಾಗಿವೆ. ಪೊಲೀಸರು ಮೂಳೆಗಳನ್ನು ಸಂಗ್ರಹಿಸಿ ಡಿ ಎನ್ ಎ ಪರೀಕ್ಷೆ ಮಣಿಪಾಲ ವಿಧಿವಿಜ್ಞಾನ ಪ್ರಯೋಗಾಯಕ್ಕೆ ಕಳುಹಿಸಿದ್ದಾರೆ.

ಸಾವಿಗೆ ಮುನ್ನ ಸಾಲ ತೀರಿಸಿದ್ದರು

ಸೀತರಾಮ ಆಚಾರ್ಯ ಈ ಕೃತ್ಯ ಎಸಗುವ ಮುನ್ನ ತನ್ನ ಮನೆಯ ಸಮೀಪದ ದಿನಸಿ ಅಂಗಡಿಯೊಂದರಲ್ಲಿ ಬಾಕಿ ಇರಿಸಿದ ಸಾಲವನ್ನು ಗುರುವಾರ ತೀರಿಸಿದ ಬಳಿಕ ಅದೇ ಅಂಗಡಿಯಿಂದ ನೂಲ ಹಬ್ಬ ಇದೆ ಎಂದು ಹೇಳಿ ಅಡುಗೆ ಸಾಮಾನು ಖರೀದಿಸಿದ್ದರು. ಬಳಿಕ ತಮ್ಮ ಅಪರಕರ್ಮಗಳನ್ನು ಆತ್ಮಾಹುತಿಯ ಮುನ್ನವೇ ಮಾಡಿಕೊಂಡಿರುವ ಕುರಿತು ಕುರುಹುಗಳು ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.