ಕಾನೂನು ಎಲ್ಲರಿಗೂ ಒಂದೇ ಅಲ್ಲವೇ ?

ರಾಜಕೀಯ ಪಕ್ಷಗಳು ದೇಣಿಗೆ ರೂಪದಲ್ಲಿ ಪಡೆದಿರುವ ಹಳೆಯ ಐನೂರು, ಮತ್ತು ಒಂದು ಸಾವಿರ ರೂಪಾಯಿ ನೋಟುಗಳನ್ನು ಪಕ್ಷದ ಬ್ಯಾಂಕ್ ಖಾತೆಗೆ ಜಮೆ ಮಾಡಿದರೆ ಯಾವುದೇ ತೆರಿಗೆ ಇರುವುದಿಲ್ಲ ಎಂದು ಸರಕಾರ ಪ್ರಕಟಿಸಿದೆಯೆಂದು ಮಾಧ್ಯಮಗಳು ವರದಿ ಮಾಡುತ್ತಿವೆ.

ಈ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸ್ಪಷ್ಟನೆ ನೀಡಿದ್ದು, ಸದರಿ ಕಾನೂನು ಹೊಸದಲ್ಲ, ಈ ಕಾನೂನು ಮೊದಲಿನಿಂದಲೂ ಚಾಲ್ತಿಯಲ್ಲಿದೆ ಎಂದು ಹೇಳಿದೆಯಾದರೂ ತೆರಿಗೆ ವಿನಾಯಿತಿ ಮತ್ತು ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಹಾಗೇನಾದರೂ ಅಂತಹ ಕಾನೂನು ಇದ್ದರೂ ಪ್ರಸ್ತುತ ನೋಟ್ ಬ್ಯಾನ್ ಸಂದರ್ಭದಲ್ಲಿ ಆ ಕಾನೂನನ್ನು ಪುನರ್ ವಿಮರ್ಶೆಗೆ ಒಳಪಡಿಸಬೇಕಾಗಿತ್ತು ಹಾಗೆ ಮಾಡದೇ ಕೇವಲ ಸ್ಪಷ್ಟನೆ ನೀಡಿದರೆ ತನ್ನ ಕರ್ತವ್ಯದಿಂದ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಇದೊಂದು ರೀತಿಯಲ್ಲಿ ಕಪ್ಪು ಹಣವನ್ನು ಅಧಿಕೃತಗೊಳಿಸುವ ಹುನ್ನಾರ ಎಂದರೂ ನಡೆದೀತು.

ಪ್ರಸ್ತುತ ಸಂದರ್ಭದಲ್ಲಿ ಕಾಳಧನ ಯಾವುದೇ ರೀತಿಯಲ್ಲೂ ಬಿಳಿಯಾಗಲೂ ಅವಕಾಶ ಮಾಡಿಕೊಡುವುದು ಖಂಡಿತಾ ಒಳ್ಳೆಯ ಬೆಳವಣೆಗೆಯಲ್ಲ. ಅಲ್ಲದೆ ದಿನಕ್ಕೊಂದು ರೀತಿಯಲ್ಲಿ ಕಾನೂನುಗಳನನ್ನು ಬದಲಾಯಿಸುತ್ತಲೋ, ಸಡಿಲಗೊಳಿಸುತ್ತಲೋ ಪಕ್ಷUಳಿಗೊಂದು ಕಾನೂನು, ಸಾಮಾನ್ಯ ಜನತೆಗೆ ಇನ್ನೊಂದು ಕಾನೂನು ಎಂದು ಹೇಳುವುದು ತರವಲ್ಲ. ಈ ದಿಸೆಯಲ್ಲಿ ಪಾರದರ್ಶಕತೆ ಬಹಳ ಮುಖ್ಯವಾದುದು. ಶ್ರೀ ಸಾಮಾನ್ಯನಿಗೆ ಒಳಿತಾಗುವ ಕಾನೂನು ಜಾರಿಗೆ ಬಂದರೆ ತೊಂದರೆ ಇರುವುದಿಲ್ಲ. ಆದರೆ ಕಾಳಧನಿಕರಿಗೆ, ರಾಜಕೀಯ ಪಕ್ಷಗಳಿಗೆ, ರಾಜಕಾರಣಿಗಳಿಗೆ, ಭ್ರಷ್ಟರಿಗೆ ಅನುಕೂಲ ಮಾಡಿಕೊಡುವ ಯಾವುದೇ ಕಾನೂನುಗಳನ್ನೂ ಜನತೆ ಒಪ್ಪಲಾರರು.

  • ಚಂದ್ರಸುವರ್ಣ, ಉಪ್ಪಿನಂಗಡಿ