ವಿಶ್ವ ಸ್ಮಾರಕಗಳ ಸ್ಪೋಟಕ್ಕೆ ಮಕ್ಕಳಿಗೆ ಐಎಸ್ ತರಬೇತಿ

ಬಗ್ದಾದ್ : ಇರಾಕ್ ಮತ್ತು ಸಿರಿಯಾದಲ್ಲಿ ತಮ್ಮ ಸಂಘಟನೆಯ ಕಾರ್ಯಾಚರಣೆ ನಡೆಸಲು ಎಳೆಯ ಮಕ್ಕಳಿಗೆ ತರಬೇತಿ ನೀಡುತ್ತಿರುವ ಐಎಸ್ ಉಗ್ರವಾದಿ ಸಂಘಟನೆ ಮೊಬೈಲ್ ಆಪ್‍ಗಳ ಮೂಲಕ ಈಫೆಲ್ ಟವರ್, ಅಮೆರಿಕದ ಲಿಬರ್ಟಿ ಪ್ರತಿಮೆ ಮತ್ತು ಬಿಗ್ ಬೆನ್ ಮುಂತಾದ ಸ್ಮಾರಕಗಳನ್ನು ಸ್ಪೋಟಿಸುವ ತಂತ್ರಗಳನ್ನು ಹೇಳಿಕೊಡುತ್ತಿದೆ.  ಹರೂಫ್, ಅಂದರೆ ಅಕ್ಷರ, ಎಂಬ ಹೆಸರಿನಲ್ಲಿರುವ ಈ ಆಪ್ ಮಕ್ಕಳಿಗೆ ಗ್ರೆನೇಡ್, ರಾಕೆಟ್ ಮುಂತಾದ ಪದಗಳ ಬಳಕೆಯನ್ನೂ ಭೋಧಿಸುತ್ತದೆ ಎಂದು ಐಎಸ್ ವಿರುದ್ಧ ಹೋರಾಡುತ್ತಿರುವ ಅಂತಾರಾಷ್ಟ್ರೀಯ ಒಕ್ಕೂಟದ ಸೇನಾ ಮುಖ್ಯಸ್ಥ ಕರ್ನಲ್ ಜಾನ್ ಡೊರಿಯಾನ್ಹೇಳಿದ್ದಾರೆ.

ಈ ಆಪ್ ಮೂಲಕ ಅರೇಬಿಕ್ ಭಾಷೆಯನ್ನೂ ಕಲಿಸಲಾಗುತ್ತಿದೆಯಾದರೂ ಟ್ಯಾಂಕ್, ಗ್ರೆನೇಡ್, ರಾಕೆಟ್ ಮುಂತಾದ ಪದಗಳನ್ನು ಭೋಧಿಸಲಾಗುತ್ತಿದೆ. ಪಶ್ಚಿಮ ರಾಷ್ಟ್ರಗಳಲ್ಲಿ ಆಕ್ರಮಣ ನಡೆಸಲು ಸಿದ್ಧರಾಗುವ ಮಕ್ಕಳಿಗೆ ಸೂಕ್ತ ಬಹುಮಾನಗಳನ್ನು ಘೋಷಿಸಲಾಗಿದೆ. ತಾವು ಆಕ್ರಮಿಸಿದ ಪ್ರತಿಯೊಂದು ಪ್ರದೇಶವನ್ನೂ ವಿನಾಶದ ಅಂಚಿಗೆ ಕೊಂಡೊಯ್ದಿರುವ ಐಎಸ್ ಎಳೆಯ ಮಕ್ಕಳ ಮನದಲ್ಲಿ ವಿಷಬೀಜ ಬಿತ್ತುತ್ತಿರುವುದು ದುರಂತ ಎಂದು ಕರ್ನಲ್ ಡೋರಿಯನ್ ಹೇಳಿದ್ದಾರೆ.

ಆಪ್‍ನಲ್ಲಿರುವ ತಂತ್ರಜ್ಞಾನವನ್ನು ಕಲಿತರೆ ಬಹುಮಾನ ನೀಡುವ ಮೂಲಕ ಪಶ್ಚಿಮ ರಾಷ್ಟ್ರಗಳಲ್ಲಿನ ವಿಶ್ವ ಸ್ಮಾರಕಗಳ ಮೇಲೆ ದಾಳಿ ನಡೆಸಲು ಮಕ್ಕಳನ್ನು ಸಜ್ಜುಗೊಳಿಸಲಾಗುತ್ತಿದೆ. ಮೋಸುಲ್ ಮತ್ತಿತರ ಪ್ರಾಂತ್ಯಗಳನ್ನು ಭಯೋತ್ಪಾದಕರಿಂದ ವಿಮುಕ್ತಿಗೊಳಿಸಿದ ಕೂಡಲೇ ಮಕ್ಕಳನ್ನು ಉಗ್ರವಾದದೆಡೆಗೆ ಸೆಳೆಯುವ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವುದು ಅತ್ಯಗತ್ಯ ಎಂದು ಡೊರಿಯನ್ ಹೇಳಿದ್ದಾರೆ.

ಐಎಸ್ ಸಂಘಟನೆಯ ನಿಯಂತ್ರಣದಲ್ಲಿರುವ ಮೊಸುಲ್, ಇರಾಕ್ ಮತ್ತು ರಕ್ಕಾ ಹಾಗೂ ಸಿರಿಯಾಗಳನ್ನು ಪುನಃ ಆಕ್ರಮಿಸಿಕೊಳ್ಳಲು ಸತತ ಶ್ರಮ ವಹಿಸುತ್ತಿರುವ ಇರಾಕ್ ಮತ್ತು ಕುರ್ಡಿಸ್ತಾನದ ಪಡೆಗಳಿಗೆ ಸಾಕಷ್ಟು ನೆರವು ನೀಡಲು ಅಮೆರಿಕ ನೇತೃತ್ವದ ಸಮ್ಮಿಶ್ರ ಪಡೆಗಳು ಸತತವಾಗಿ ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಅಮೆರಿಕದ ಪಡೆಗಳು ಅಕ್ಟೋಬರಿನಲ್ಲಿ 3038 ಮತ್ತು ನವಂಬರಿನಲ್ಲಿ 2709 ಶಸ್ತ್ರಾಸ್ತ್ರಗಳನ್ನು ಪೂರೈಸಿದೆ. ಸ್ಥಳೀಯರನ್ನು ತಮ್ಮ ರಕ್ಷಣಾ ಕವಚಗಳಂತೆ ಬಳಸುತ್ತಿರುವ ಐಎಸ್ ಮೊಸುಲ್ ನಗರವನ್ನು ವಶಪಡಿಸಿಕೊಳ್ಳುವ ಅಮೆರಿಕದ ಪ್ರಯತ್ನಗಳಿಗೆ ಅಡ್ಡಿ ಮಾಡುತ್ತಿದೆ. ಮೊಸುಲಿನಲ್ಲಿ ಸಾರ್ವಜನಿಕರ ಮೇಲೆ ದಾಳಿ ನಡೆಸುವ ಮೂಲಕ ಐಎಸ್ ಉಗ್ರರು ಅಪಾರ ಹಾನಿ ಉಂಟುಮಾಡುತ್ತಿದ್ದಾರೆ. ತಮ್ಮ ಕುತಂತ್ರವನ್ನು ಒಪ್ಪದ ಜನರನ್ನು ಅಮಾನವೀಯವಾಗಿ ಹತ್ಯೆ ಮಾಡುವ ಮೂಲಕ ಐಎಸ್ ಉಗ್ರರು ಜನಸಾಮಾನ್ಯರಲ್ಲಿ ಭೀತಿ ಉಂಟುಮಾಡುತ್ತಿದ್ದಾರೆ.