ಮಂಗಳೂರು ಯುವಕಗೆ ಉಗ್ರರ ನಂಟು

 

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರನೊಬ್ಬನನ್ನು ಎನ್ ಐ ಎ ಪೊಲೀಸರು ಬಂಧಿಸಿ, ಬಳಿಕ ವಿಚಾರಣೆಗೊಳಪಡಿಸಿ ಬಿಡುಗಡೆಗೊಳಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣ ಮೂಲಕ ವಿದೇಶಕ್ಕೆ ತೆರಳಲು ಯತ್ನಿಸುತ್ತಿದ್ದ ಕೇರಳದ ತಲಚೇರಿ ಮೂಲದ ಮುನಾಫ್ ರೆಹಮಾನ್ ಬಂಧಿತ ಶಂಕಿತ ಉಗ್ರ. ಈತ ಕಳೆದ ಆರು ತಿಂಗಳಿಂದ ಮಂಗಳೂರಿನ ಬಂದರು ಬಳಿಯ ಓಲ್ಡ್ ಕೆಂಟ್ ರೋಡಿನಲ್ಲಿ ಪತ್ನಿ ಮಕ್ಕಳ ಜೊತೆ ನೆಲೆಸಿದ್ದ. ಈ ವೇಳೆ ವಿದೇಶಿ ಮಹಿಳೆ ಜೊತೆ ಐಸಿಸ್ ನೆಟ್ವರ್ಕ್ ಬೆಳೆಸಿದ್ದು, ಯುವಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದ.

ಮುನಾಫ್ ಡಿ 23ರಂದು ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ದುಬೈನ ಶಾರ್ಜಾಕ್ಕೆ ತೆರಳಲೆಂದು ಮಂಗಳೂರಿನ ವಿಮಾನ ನಿಲ್ದಾಣದೊಳಗೆ ಬಂದಿದ್ದ ವೇಳೆ ಅದಾಗಲೇ ಈತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಎನ್ ಐ ಎ ಪೊಲೀಸರು ಲುಕೌಟ್ ನೋಟಿಸ್ ನೀಡಿದ್ದರು. ವಿಮಾನ ನಿಲ್ದಾಣದಲ್ಲಿ ಎಮಿಗ್ರೇಶನ್ ಅಧಿಕಾರಿಗಳು ತಪಾಸಣೆ ಸಂದರ್ಭ ಈತ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೆ ಲುಕೌಟ್ ನೋಟಿಸ್ ಇದ್ದುದರಿಂದ ಮುನಾಫನ್ನು ಬಂಧಿಸಿದ್ದು, ಇದೇ ವೇಳೆ ಮಾಹಿತಿ ಆಧರಿಸಿ ಕೇರಳದ ಕ್ಯಾಲಿಕಟಿನಿಂದ ಬಂದಿದ್ದ ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಿದ್ದಾರೆ. ಇದೀಗ ಎನ್ ಐ ಎ ಪೊಲೀಸರು ಆತನನ್ನು ಕೇರಳಕ್ಕೆ ಒಯ್ದು ವಿಚಾರಣೆ ನಡೆಸುತ್ತಿದ್ದಾರೆ.

ಈತ ತನ್ನೊಂದಿಗೆ ಇದ್ದ ಪತ್ನಿ ಹಾಗೂ ಮಕ್ಕಳಿಗೆ ತನ್ನ ಚಟುವಟಿಕೆಯ ಬಗ್ಗೆ ಒಂಚೂರು ಸುಳಿವು ನೀಡದೇ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಅಲ್ಲದೆ ತನಗೆ ದುಬೈನಲ್ಲಿ ಒಳ್ಳೆಯ ಕೆಲಸ ಸಿಕ್ಕಿದ್ದು ನಾವೆಲ್ಲಾ ಅಲ್ಲೇ ನೆಲೆಸುವುದಾಗಿ ನಂಬಿಸಿ ಕರೆದೊಯ್ಯುತ್ತಿದ್ದ. ತನಿಖೆಯ ಬಳಿಕ ಪತ್ನಿ ಹಾಗೂ ಮಕ್ಕಳಿಬ್ಬರನ್ನು ಎನ್ ಐ ಎ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.

ಶಂಕಿತನ ಬಿಡುಗಡೆ

ಬಂಧಿತನಾಗಿದ್ದ ಮುನಾಫ್ ರಹ್ಮಾನನನ್ನು ಸಮಗ್ರ ವಿಚಾರಣೆಗೊಳಪಡಿಸಿದ ಎನ್ ಐ ಎ ಅಧಿಕಾರಿಗಳು ಇದೀಗ ಬಿಡುಗಡೆಗೊಳಿಸಿದ್ದಾರೆ.

ಮುನಾಫನಿಂದ ಪಾಸ್ಪೋರ್ಟ್ ವಶಪಡಿಸಿಕೊಂಡು ಮುಚ್ಚಳಿಕೆ ಬರೆಸಿಕೊಂಡು ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ಅಧಿಕಾರಿಗಳು ಈತನ ಮುಂದಿನ ಚಟುವಟಿಕೆಗಳ ಮೇಲೂ ಪ್ರತ್ಯೇಕ ನಿಗಾ ಇರಿಸಿದ್ದಾರೆ ಎಂದು ತಿಳಿದುಬಂದಿದೆ.