ವಿರಾಟ್ ಕೊಹ್ಲಿ ಜಗಳಗಂಟನೇ

ಇತ್ತೀಚೆಗೆ ಮುಗಿದಿರುವ ಭಾರತ ಮತ್ತು ಆಸ್ಟ್ರೇಲಿಯ ನಡುವಣ ಟೆಸ್ಟ್ ಪಂದ್ಯವನ್ನು ಭಾರತ 2-1ರಿಂದ ಗೆದ್ದುಕೊಂಡು, ಟೀಮ್ ಇಂಡಿಯಾ ಬೋರ್ಡರ್-ಗಾವಸ್ಕರ್ ಟ್ರೋಫಿ ಮೇಲೆ ಮರಳಿ ಹಕ್ಕು ಸ್ಥಾಪಿಸಿತು. ಇದು ಭಾರತ ಪಾಲಿಗೆ ಸಿಹಿ ಸುದ್ದಿಯಾದರೆ ಪಂದ್ಯದುದ್ದಕ್ಕೂ ನಡು ನಡುವೆ ಕೆಲವೊಂದು ಕಹಿ ಘಟನೆಗಳೂ ನಡೆದವು. ಇದರಲ್ಲಿ ಹೆಚ್ಚಾಗಿ ಒಳಪಟ್ಟವರೆಂದರೆ ಭಾರತ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ನಾಯಕ ಸ್ಟ್ರೀವ್ ಸ್ಮಿತ್ ಇವರ ಪರಸ್ಪರ ದೂರಿನನ್ವಯ ಏನೆಲ್ಲಾ ರಂಪಾಟಗಳು ನಡೆದು ದೊಡ್ಡ ಸುದ್ದಿಯಾಗಿ ಪರಿಣಮಿಸಿತು. ಸ್ಮಿತ್ ತನ್ನ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ ಎನ್ನುವುದೇನೊ ಸರಿ
ತನ್ಮಧ್ಯೆ ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಜೊತೆಗೆ ನಡೆದ ಒಂದು ಜಗಳದ ಸಂದರ್ಭವನ್ನು ಆಸ್ಟ್ರೇಲಿಯಾ ಮಾಜಿ ಓಪನರ್ ಎಡ್ ಕೊವಾನ್ ನೆನಪಿಸಿಕೊಂಡು ಹೀಗೆ ಹೇಳಿದ್ದಾರೆ. ಒಮ್ಮೆ ಸ್ಟಂಪ್ ಕೀಳಿ ವಿರಾಟ್ ಕೊಹ್ಲಿಗೆ ಇರಿಯುವಷ್ಟು ಕೋಪ ಬಂದಿತ್ತು. ವಿರಾಟ್ ಕೊಹ್ಲಿ ಕೆಟ್ಟ ಮಾತನ್ನು ಆಡಿದ್ದು ನೋಡಿ ಸಿಟ್ಟಾಗಿದ್ದೆ” ಎಂದು ತನ್ನ ಆಗಿನ ಕಹಿ ಅನುಭವವನ್ನು ಹೊರಗೆಡಹಿದ್ದಾರೆ
ಹೀಗಾದರೂ 18 ಟೆಸ್ಟುಗಳಲ್ಲಿ ಪ್ರತಿನಿಧಿಸಿರುವ ಕೊವಾನ್ ಸ್ವತಃ ಕೊಹ್ಲಿ ಆಟದ ದೊಡ್ಡ ಅಭಿಮಾನಿ ಎಂದೂ ಸಹ ಹೇಳಿಕೊಂಡಿದ್ದಾರೆ.
ಕೆಲವು ಆಟಗಾರರು ಕೈಸನ್ನೆ ಮಾಡಿ ಇನ್ನಿತರ ಕುಚೇಷ್ಠೆಗಳನ್ನು ಮಾಡಿ ತೋರಿಸುವುದು ಇವೆಲ್ಲ ಅಸಹ್ಯ ವರ್ತನೆಗಳೇ ಎನ್ನಬಹುದು. ಕ್ರಿಕೆಟ್ ಎಂದರೆ ಜಂಟ್ಲಮೆನ್ ಆಟ ಎಂಬ ಹೆಗ್ಗಳಿಕೆ ಇದೆ. ಹಿಂದಿನ ಆಟಗಾರರು ಹೀಗೆಲ್ಲಾ ವರ್ತಿಸುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಕಣ್ಣರಳಿಸಿ ದಿಟ್ಟಿಸಿ ನೋಡಿ ಮಾತಾಡುವುದು ಹೆಚ್ಚಿದೆ. ಹೀಗಾದರೆ ಇದು ಜಂಟ್ಲಮೆನ್ ಆಟ ಹೇಗಾಗುವುದು  ಕೊಹ್ಲಿ ತನ್ನ ವರ್ತನೆಯನ್ನು ಸುಧಾರಿಸಬೇಕು

  • ಜೆ ಎಫ್ ಡಿಸೋಜ  ಅತ್ತಾವರ