ಇದು ಸ್ಮಾರ್ಟ್ ಸಿಟಿ ಆಗುವ ಬಗೆಯೇ

ಮಂಗಳೂರು ನಗರ ಸ್ಮಾರ್ಟ್‍ಸಿಟಿಯಾಗಲಿದೆ. ಯಾವಾಗ ಹೇಗೆ ಎಂಬುದು ಇನ್ನೂ ಖಚಿತವಾಗಿಲ್ಲ. ಇತ್ತೀಚೆಗೆ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ ಪುರಭವನದ ಬಳಿಯಿಂದ ಪೊಲೀಸ್ ಕಚೇರಿವರೆಗಿನ ಸುಮಾರು 300-400 ಮೀಟರ್ ಉದ್ದದ ರಸ್ತೆ ಪುನನಿರ್ಮಾಣಗೊಳ್ಳಲಿದೆ. ಇಷ್ಟು ಚಿಕ್ಕ ರಸ್ತೆಯ ಸಲುವಾಗಿ ನಿಗದಿಪಡಿಸಿದ ಮೊತ್ತವೆಷ್ಟು ಗೊತ್ತೇ ಏಳೂವರೆ ಕೋಟಿ ರೂಪಾಯಿ.
ಸ್ಮಾರ್ಟ್ ಸಿಟಿ ಯೋಜನೆಯ ಇಡೀ ನಗರದಲ್ಲಿ ಒಂದು ತುಂಡು ರಸ್ತೆಗೆ ಏಳೂವರೆ ಕೋಟಿ ವ್ಯಯ ಮಾಡುವುದಕ್ಕೆ ಅರ್ಥವಿದೆಯೇ ಮಂಗಳೂರಿನ ರಸ್ತೆಗಳಿಗೆ ಕಾಂಕ್ರೀಟ್ ಹಾಕಿ ಹಲವು ವರ್ಷಗಳು ಕಳೆದಿವೆ. ಆದರೆ ಕಾಲ್ದಾರಿಯ ಕಾಮಗಾರಿ ಎಲ್ಲೂ ಆಗಿಲ್ಲ. ಏಳೂವರೆ ಕೋಟಿ ರೂಪಾಯಿಗಳಲ್ಲಿ ನಗರದ ಎಲ್ಲಾ ರಸ್ತೆಗಳಿಗೂ ಕಾಲುದಾರಿ ರಚಿಸಲು ಸಾಧ್ಯವಿದೆ ರಸ್ತೆ ಬದಿಯಲ್ಲಿ ಹಾಕಿದ ಮಣ್ಣು, ಕಲ್ಲು ಕಾಂಕ್ರಿಟ್ ತುಂಡುಗಳು ನಗರದ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಕಾಣ ಸಿಗುತ್ತದೆ. ಮೋರಿಗಳ ಕಾಂಕ್ರಿಟ್ ಹೊದಿಕೆ ಕುಸಿದು ಎಷ್ಟೋ ಕಡೆ ಅಪಾಯಕಾರಿ ಸ್ಥಿತಿ ಇದೆ. ಇವ್ಯಾವುದನ್ನೂ ನಿವಾರಿಸುವ ಯೋಚನೆ ನಗರ ಪಾಲಿಕೆಗಾಗಲೀ, ಜಿಲ್ಲಾಡಳಿತಕ್ಕಾಗಲೀ ಇಲ್ಲ. ನಗರದ ಎಲ್ಲಾ ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸುವುದರಲ್ಲೇ ಎಲ್ಲರಿಗೂ ಆಸಕ್ತಿ ಇದಕ್ಕೆ ಕಾರಣ ಸುಸ್ಪಷ್ಟ. ನಗರದ ಅವಶ್ಯಕತೆಗಳನ್ನು ಪೂರೈಸುವ ಮೇಯರ್ ಕಾರ್ಪೊರೇಟರ್, ಕಮಿಶನರ್, ಅಧಿಕಾರಿಗಳಾಗಲೀ ಜಿಲ್ಲಾಡಳಿತದ ಯಾವುದೇ ಹಂತದ ಅಧಿಕಾರಿಗಳಾಗಲೀ ಎಂದೂ ಕಾಲ್ದಾರಿ ಬಳಸುವವರಲ್ಲ. ಜನಪ್ರತಿನಿಧಿ ಮತ್ತು ಅಧಿಕಾರಿಗಳಲ್ಲಿ ಹೆಚ್ಚಿನವರು ಕಾರುಗಳಲ್ಲಿ ಸಂಚರಿಸುವವರು ಅದು ಬಿಟ್ಟರೆ ದ್ವಿಚಕ್ರ ವಾಹನ ಬಳಸುವವರು. ಜನಸಾಮಾನ್ಯರು ನಡೆದಾಡುವ ಕಾಲ್ದಾರಿಗಳು ಇವರಿಗೆ ಕಾಣಿಸುವುದೂ ಇಲ್ಲ. ಕಾಲ್ದಾರಿ ಇಲ್ಲದ ಸಮಸ್ಯೆ ಅವರಿಗೆ ಅರಿವಾಗುವುದೂ ಇಲ್ಲ. ಹಾಗಾಗಿ ವಾಹನಗಳು ಸಂಚರಿಸುವ ರಸ್ತೆಗಳ ಅಭಿವೃದ್ಧಿ ಮಾತ್ರ ಅವರಿಗೆ ಮುಖ್ಯ ಮಂಗಳೂರು ನಗರದ ವಿಸ್ತಾರ, ವ್ಯಾಪ್ತಿ ಮತ್ತು ಬೇರೆ ಪ್ರದೇಶಗಳ ಸಮಸ್ಯೆ ಹಾಗೂ ಅವಶ್ಯಕತೆಗಳ ನೈಜ ಅರಿವು ಇದ್ದವರು ಏಳೂವರೆ ಕೋಟಿ ರೂ ಈ ಯೋಜನೆಗೆ ಖಂಡಿತಾ ಒಪ್ಪಿಕೊಳ್ಳಲಿಕ್ಕಿಲ್ಲ. ಒಂದು ರಸ್ತೆಯನ್ನು ಅತ್ಯಾಧುನಿಕಗೊಳಿಸಿ ಅದರ ಭಾವಚಿತ್ರ ತೆಗೆದು, ಮಂಗಳೂರು ಸ್ಮಾರ್ಟ್ ಸಿಟಿಯಾಗಿದೆ ಎಂದು ಲೋಕದ ಜನರನ್ನು ಮರಳುಗೊಳಿಸುವ ಹುನ್ನಾರವಾಗಿ ಇದು ಕಾಣುತ್ತದೆ

  • ಮಹೇಶ್ ಎಂ  ಕಂಕನಾಡಿ ಮಂಗಳೂರು

LEAVE A REPLY