ಮನಪಾ ಬಜೆಟ್ ಕರಡು ತಯಾರಿಗೆ ಸಾರ್ವಜನಿಕರ ಸಲಹೆ ಇದೇನಾ

2017-18ರ ಸಾಲಿಗೆ ಬಜೆಟ್ ಕರಡು ತಯಾರಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಲಹೆ ಸ್ವೀಕರಿಸಲು ಮನಪಾ ಕಮಿಷನರ್  28-11-17ರಂದು ಸಭೆ ಕರೆದರು. ಆದರೆ ಸಭೆಗೆ 60 ಕಾರ್ಪೊರೇಟರುಗಳ ಪೈಕಿ ಬೆರಳೆಣಿಕೆಯಷ್ಟು ಜನ ಬರುವುದೇ ? ಅಧಿಕಾರಿಗಳು ಎಲ್ಲಿ ಹೋದರು ? ಮೇಯರ್ ಸಾಹೇಬರ ಪತ್ತೆನೆ ಇಲ್ಲ. ಸಾರ್ವಜನಿಕರಂತೂ ಮನಪಾ ಸಭಾಂಗಣದಲ್ಲಿ ತುಂಬಿ ತುಳುಕಬೇಕಾದಲ್ಲಿ ಒಂದೊಂದು ಟೇಬಲಿನಲ್ಲಿ ಅಲ್ಲಲ್ಲಿ ಕುತ್ಕೊಂಡದ್ದು ಕಂಡುಬಂತು. ಸಭೆ 4 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಒಂದು ಗಂಟೆಯಷ್ಟು ತಡವಾಗಿ ಆರಂಭಗೊಂಡಿತು. ಹಾಗಾದರೆ ಇದೇನಾ ಮನಪಾ ಬಜೆಟ್ ತಯಾರಿ ? ಇದೆಂಥ ಬಜೆಟ್ ತಯಾರಿಯ ಕಾರ್ಯವೈಖರಿ ? ಇದು ಯಾರ ಸಭೆ ? ಈ ಸಭೆ ಪಾಲಿಕೆ ಆಯುಕ್ತರಿಗೆ ಮಾತ್ರ ಸಂಬಂಧಪಟ್ಟದ್ದೇ ? ಮೇಯರ್, ಕಾರ್ಪೊರೇಟರ್, ಜನಪ್ರತಿನಿಧಿ, ಅಧಿಕಾರಿಗಳಿಗೆ ಬಜೆಟ್ ಕರಡು ಸಂಬಂಧಪಟ್ಟದಲ್ಲವೇ ? ಯಾಕಾಗಿ ಇವೆಲ್ಲ ಅವ್ಯವಸ್ಥೆ, ಅಶಿಸ್ತು, ಕ್ರಮ ತಪ್ಪಿದ ಯಾರಿಗೂ ಬೇಡವಾದ ಸಭೆ, ಪರ್ಸಂಟೇಜ್ ತಿನ್ನಲು ಮಾತ್ರ ಇರುವುದೇ ? ಇದೊಂದು ಕಾಟಾಚಾರದ ಸಭೆಯಲ್ಲದೆ ಮತ್ತೇನು ? ಸಾರ್ವಜನಿಕರು ಅಲ್ಲಿಗೆ ಬಂದು ಇಂತಹ ಅವ್ಯವಸ್ಥೆ ನೋಡಲು ಅವರಿಗೆ ಬೇರೇನು ಕೆಲಸವಿಲ್ಲವೇ ? ಹತ್ತು ಇಪ್ಪತ್ತು ಜನರು, ಅಧಿಕಾರಿಗಳು, ಕಾರ್ಪೊರೇಟರುಗಳು ಹಾಜರಾಗಿರುವುದಕ್ಕೆ ಸಭೆ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ ?

ವಾರ್ಷಿಕ ಬಜೆಟ್ ತಯಾರಿಸಲು ಪೂರ್ವಭಾವಿ ಸಿದ್ಧತೆ ಮಾಡಲಿಲ್ಲ ಎಂಬುದು ಸಭೆಗೆ ನೆರೆದ ಸಾರ್ವಜನಿಕರಿಂದ ಸಾಬೀತುಗೊಂಡಿದೆ. ಮನಪಾ ಆಯುಕ್ತರು ಮುಂದಿನ ಬಜೆಟ್ ಕರಡು ತಯಾರಿಕೆಗೆ ಸಾರ್ವಜನಿಕರು ತಮ್ಮ ಅಮೂಲ್ಯ ಸಲಹೆ ನೀಡಲು ಒಂದು ತಿಂಗಳ ಮೊದಲೇ ದಿನಪತ್ರಿಕೆಗಳಲ್ಲಿ ಈ ಬಗ್ಗೆ ವೈಡ್ ಪಬ್ಲಿಸಿಟಿ ಮಾಡಲಿ. ಮೇಯರ್, ಎಲ್ಲಾ ಕಾರ್ಪೊರೇಟರ್, ಅಧಿಕಾರಿಗಳು ಹಾಜರಾಗುವಂತೆ ಪ್ರಯತ್ನಿಸಲಿ. ಹಾಗಾದರೆ ಮಾತ್ರ ಬಜೆಟ್ ಕರಡು ತಯಾರಿ ಸಾರ್ಥಕವಾಗುವುದು. ಇಲ್ಲವಾದಲ್ಲಿ ಬರೀ ಕಾಟಾಚಾರಕ್ಕೆ ಬಿಟ್ಟಿ ಕೆಲಸ ತೀರಿಸಲು ಮಾಡಿದಂತಾಗುವುದು. ಜವಾಬ್ದಾರಿಯುತ ಹುದ್ದೆ ಅಲಂಕರಿಸುವವರು ಅವರ ಪಾತ್ರವನ್ನು ಸರಿಯಾಗಿ ನಿಭಾಯಿಸಲಿ.

  • ಜೆ ಎಫ್ ಡಿಸೋಜ ಅತ್ತಾವರ