`ಪ್ರೀತಿ ಅಂದ್ರೆ ಇದೇನಾ’ : ಆದಿತ್ಯಾ ಕಿವಿಯಲ್ಲುಸುರಿದ ಶ್ರದ್ಧಾ

ಸೂಪರ್ ಹಿಟ್ ಸಿನಿಮಾ `ಆಶಿಕೀ-2′ ನಂತರ ಶ್ರದ್ಧಾಕಪೂರ್ ಹಾಗೂ ಆದಿತ್ಯ ರಾಯ್ ಕಪೂರ್ `ಓಕೆ ಜಾನು’ ಚಿತ್ರದಲ್ಲಿ ಒಂದಾಗುತ್ತಿದ್ದು `ಆಶಿಕಿ’ಯ ಫೇಮನ್ನು ಮತ್ತೆ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಇದು ಕಳೆದ ವರ್ಷ ತಮಿಳು ಭಾಷೆಯಲ್ಲಿ ತೆರೆಕಂಡಿದ್ದ ಮಣಿ ರತ್ನಂ ನಿರ್ದೇಶನದ `ಓಕೆ ಕಣ್ಮಣಿ’ ಸಿನಿಮಾದ ರಿಮೇಕ್. ಆಸ್ಕರ್ ಪ್ರಶಸ್ತಿ ಪುರಸ್ಕøತ ಎ.ಆರ್. ರೆಹಮಾನ್ `ಓಕೆ ಜಾನು’ಗೆ ಸಂಗೀತ ನೀಡಿದ್ದಾರೆ.
ಸಿನಿಮಾದ ಟ್ರೈಲರ್ ಈಗಾಗಲೇ ರಿಲೀಸ್ ಆಗಿದ್ದು ಶ್ರದ್ಧಾ-ಆದಿತ್ಯಾರ ಕೆಮೆಸ್ಟ್ರಿ ಅವರ ಅಭಿಮಾನಿಗಳಿಗೆ ಇಷ್ಟವಾದರೂ `ಓಕೆ ಕಣ್ಮಣಿ’ ನೋಡಿದವರಿಗೆ ಅದರಲ್ಲಿಯ ದಲ್ಕರ್ ಸಲ್ಮಾನ್-ನಿತ್ಯಾ ಮೆನನ್ ಅವರಿಗೆ ಹೋಲಿಸಿದರೆ ಇವರದು ಸ್ವಲ್ಪ ಸಪ್ಪೆ ಎನಿಸಿದೆ. ಆದರೂ ನಿಜ ಜೀವನದಲ್ಲೂ ಆಫ್ ಆಂಡ್ ಆನ್ ಆಗುತ್ತಿರುವ ಶ್ರದ್ಧಾ-ಆದಿತ್ಯಾ ಸಂಬಂಧದ ಬಗ್ಗೆ ಸಿನಿರಸಿಕರಿಗೆ ಕುತೂಹಲ ಇರುವುದರಿಂದ ಚಿತ್ರ ಗೆಲ್ಲುವ ಭರವಸೆಯಂತೂ ಇದೆ. ಚಿತ್ರದಲ್ಲಿ ಶ್ರದ್ಧಾ ಆದಿತ್ಯಾ ಬಳಿ `ಪ್ರೀತಿ ಅಂದ್ರೆ ಇದೇನಾ’ ಎಂದು ಅವನ ಕಿವಿಯಲ್ಲಿ ಉಸುರುವ ದೃಶ್ಯ ಯುವ ಪ್ರೇಮಿಗಳಿಗೆ ಚೇತೋಹಾರಿಯಾಗಿದೆ.
ಕರಣ್ ಜೋಹರ್ ಮತ್ತು ಮಣಿ ರತ್ನಂ ಜೊತೆ ಸೇರಿ ಈ ಸಿನಿಮಾ ನಿರ್ಮಿಸಿದ್ದಾರೆ. ಈ ರೋಮ್ಯಾಂಟಿಕ್ ಡ್ರಾಮಾ ಜನವರಿ 13ರಂದು ತೆರೆಕಾಣಲಿದೆ.