ಕರಾವಳಿ ಪ್ರದೇಶ ಇಷ್ಟು ಕೊಳಕೇ ?

ರಾಷ್ಟ್ರೀಯ ಹೆದ್ದಾರಿ ಪ್ರದೇಶ ಗಬ್ಬು ನಾರುತ್ತಿದ್ದು ಇದೇನಪ್ಪಾ ಕರಾವಳಿ ಇಷ್ಟು ಕೊಳಕು ಪರಿಸರವೇ ಎಂದು ಹೊರಗಿನಿಂದ ಕರಾವಳಿಯ ಪ್ರವಾಸಕ್ಕೆಂದು ಬರುವ ಪ್ರವಾಸಿಗರು ಆಡಿಕೊಳ್ಳುವಂತಾಗಿದೆ.

ಕಳೆದ ಕೆಲವು ಸಮಯದಿಂದ ಕರಾವಳಿಯ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುವ ಸಂದರ್ಭದಲ್ಲಿ ಕೆಟ್ಟ ವಾಸನೆ ಬರುತ್ತಿದ್ದು ವಾಕರಿಕೆ ಬರುವಂತಾಗಿದೆ. ಬೆಳಗಿನ ಜಾವ ಗೋವಾ, ಹುಬ್ಬಳ್ಳಿ, ಮಂಗಳೂರು ಹಾಗೂ ಇನ್ನಿತರ ಪ್ರದೇಶಗಳಿಗೆ ರಫ್ತು ಆಗುವ ಮೀನಿನ ಲಾರಿಗಳು ಹೆದ್ದಾರಿ ಮೇಲೆ ಅಲ್ಲಲ್ಲಿ ಮೀನಿನ ಕೊಳಚೆ ನೀರು ಬಿಡುವುದರಿಂದ ರಸ್ತೆಯ ವಾತಾವರಣ ಕಲುಷಿತಗೊಂಡಿದೆ.

ಸರಕಾರ ಒಂದೆಡೆ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು, ಪ್ರವಾಸಿಗರು ಬರಬೇಕೆಂದು ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ಮಂಜೂರು ಮಾಡಿ ಅಭಿವೃದ್ಧಿ ಯೋಜನೆಗಳನ್ನು ನಡೆಸುತ್ತಿವೆ. ಅಲ್ಲದೆ ಸಾಕಷ್ಟು ಕಡೆಯಲ್ಲಿ ಕಾಮಗಾರಿಗಳು ಅನುಷ್ಠಾನದ ಹಂತದಲ್ಲಿವೆ. ಆದರೆ ಕರಾವಳಿಯಲ್ಲಿ ಸಾಗುವ ಪ್ರವಾಸಿಗರು ಮಾತ್ರ ಮೂಗನ್ನು ಮುಚ್ಚಿಕೊಂಡು ಸಾಗಬೇಕಾಗಿದೆ.

ಸಾರ್ವಜನಿಕರ ಪ್ರಕಾರ ಎನ್‍ಐಟಿಕೆಯಿಂದ ಪಾವಂಜೆ ಸೇತುವೆತನಕ ರಸ್ತೆಯಲ್ಲಿ ಕೆಟ್ಟ ವಾಸನೆ ಉಸಿರುಗಟ್ಟುವಂಥ ಸ್ಥಿತಿ ನಿರ್ಮಾಣವಾಗಿದೆ.

ಈ ರೀತಿ ಕರಾವಳಿ ರಸ್ತೆಗಳ ಮೇಲೆ ಮೀನಿನ ಮಲಿನ ನೀರು ಬಿಡುತ್ತಿರುವುದರಿಂದ ದುರ್ವಾಸನೆ ಜತೆಗೆ ರಸ್ತೆ ಸಂಚಾರಿಗಳ ಪ್ರಾಣಕ್ಕೂ ಕುತ್ತು ತರುವಂತಾಗಿದೆ. ಕಾರಣ ರಸ್ತೆಯ ಮೇಲೆ ಮಲೀನ ನೀರು ಬಿಡುವುದರಿಂದ ತಿರುವಿನಲ್ಲಿ ವಾಹನ ಆಯತಪ್ಪಿ ಬಿದ್ದಿರುವ ಅನೇಕ ಪ್ರಕರಣಗಳು ನಡೆದಿವೆ. ಮೀನಿನ ಲಾರಿಗಳು ಸ್ಪರ್ಧೆಗೆ ನಿಂತಂತೆ ಅತೀ ವೇಗವಾಗಿ ಲಾರಿ ಚಾಲನೆಯನ್ನು ಚಾಲಕರು ಮಾಡುತ್ತಾರೆ. ಯಾವುದಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇದಕ್ಕೆ ಕಡಿವಾಣ ಬೀಳಬೇಕಾಗಿದೆ. ಇಷ್ಟೊಂದು ವಾಸನೆ ಬರುವ ರಸ್ತೆಯಲ್ಲಿ ಮಂತ್ರಿಗಳು, ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಎಲ್ಲರೂ ಸಾಗುತ್ತಿದ್ದರೂ ಕೂಡ ಯಾರೂ ಈ ಬಗ್ಗೆ ಗಮನಹರಿಸಿ ಕ್ರಮ ಜರುಗಿಸಲು ಮುಂದಾಗದಿರುವುದು ಖೇದಕರ. ಇನ್ನಾದರೂ ಹೆದ್ದಾರಿಯಲ್ಲಿ ರಸ್ತೆ ಮೇಲೆ ಮಲೀನ ನೀರು ಬಿಡುವ ಮೀನಿನ ವಾಹನಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ.

  • ಎಂ ಅವಿನಾಶ್, ಮಂಗಳೂರು