ನನಗೆ ಆತ್ಮಹತ್ಯೆಯೊಂದೇ ದಾರಿಯಾ?

ಪ್ರ : ನನಗೆ ಮದುವೆಯಾಗಿ ಹದಿನೈದು ವರ್ಷವಾಗಿದೆ. ಮಗನಿಗೆ 13 ವರ್ಷ. ನನ್ನ ಗಂಡ ಬಿಲ್ಡಿಂಗ್ ಕೆಲಸಕ್ಕೆ ಹೋಗುತ್ತಾರೆ. ಅವರಿಗೆ ಕುಡಿಯುವ ಚಟ ಇದೆ. ಮೇಲಾಗಿ ಹೆಂಗಸರ ಮೋಹವೂ ಇದೆ. ವೇಶ್ಯೆಯರ ಸಹವಾಸವೂ ಇದೆ ಅಂತ ಊರಿನವರು ಹೇಳುತ್ತಾರೆ. ಅದೂ ಅಲ್ಲದೇ ಈಗೀಗ ಮನೆಗೆ ಬರುವುದೂ ಕಡಿಮೆ ಮಾಡಿದ್ದಾರೆ. ಅವರಿಗೆ ಬೇರೊಬ್ಬಳು ಹೆಂಗಸಿನೊಂದಿಗೆ ಮದುವೆಯೂ ಆಗಿ ಮಗುವಿದೆಯಂತ ನಮಗೆ ಬೇಕಾದವರೊಬ್ಬರು ಕೆಲವು ತಿಂಗಳ ಹಿಂದಷ್ಟೇ ಹೇಳಿದರು. ನಾನು ಅದರ ಬಗ್ಗೆ ಕೂಲಂಕುಶವಾಗಿ ವಿಚಾರಿಸಿದಾಗ ಅವರು ಆ ಮಹಿಳೆಯನ್ನು ದೇವಸ್ಥಾನದಲ್ಲಿ ಮದುವೆಯಾಗಿ ಈಗ ಎರಡು ವರ್ಷದ ಮಗಳೂ ಇರುವುದು ಸತ್ಯ ಅಂತ ಗೊತ್ತಾಯಿತು. ಆದರೆ ನಾನೀಗ ಏನು ಮಾಡಲಿ? ಕೆಲವರು ಪೊಲೀಸ್ ಕಂಪ್ಲೇಂಟ್ ಕೊಡಿ ಅನ್ನುತ್ತಿದ್ದಾರೆ. ಆದರೆ ಅದರಿಂದ ಏನು ಪ್ರಯೋಜನ? ಹೆಚ್ಚೆಂದರೆ ಅವರನ್ನು ಹಿಡಿದುಕೊಂಡು ಹೋಗುತ್ತಾರೆ. ನನ್ನ ಮತ್ತು ಮಗನ ಬಾಳೂ ನರಕ. ಆ ಮಹಿಳೆ ಮತ್ತು ಅವಳ ಮಗಳ ಬದುಕೂ ಹಾಳು. ಅದೂ ಅಲ್ಲದೇ ಈಗ ಅತ್ತೆ, ಮಾವನ ಆಸರೆಯಾದರೂ ನನಗಿದೆ. ಅವರ ಮಗ ನನ್ನಿಂದಾಗಿ ಜೈಲಿಗೆ ಹೋದರೆ ಅವರು ನನ್ನನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಾರಾ? ಅವರಿಗೆ ಮಗ ಏನು ಮಾಡಿದರೂ ಸರಿ. ಗಂಡಸು ಹೊರಗೆ ದುಡಿಯುವುದರಿಂದ ಅವರನ್ನು ಪ್ರಶ್ನಿಸುವ ಹಕ್ಕು ಹೆಂಡತಿಗೂ ಇಲ್ಲ ಅನ್ನುವುದು ಅವರ ಭಾವನೆ. ನನ್ನ ಅಪ್ಪನ ಮನೆಯಲ್ಲಿಯೂ ಬಡತನ. ಬಾಯಿ ತೆಗೆದರೆ ನಾನು ಮಗನೊಂದಿಗೆ ಬೀದಿಗೆ ಬೀಳಬೇಕಾಗುತ್ತದೆ. ಈಗ ವಾರಕ್ಕೊಮ್ಮೆ ಬಂದು ನನ್ನ ದೇಹ ಆಕ್ರಮಿಸಿಕೊಳ್ಳುತ್ತಾರೆ. ಆದರೆ ನನಗೆ ನನ್ನ ಗಂಡನ ಮುಖ ನೋಡಲೂ ಅಸಹ್ಯವಾಗುತ್ತದೆ. ಈ ರೀತಿ ಬದುಕುವುದು ನನಗೆ ಚಿತ್ರಹಿಂಸೆಯಾಗುತ್ತಿದೆ.  ಸಾವೇ ಲೇಸು ಅನಿಸುತ್ತಿದೆ. ಮಗನಿಗಾಗಿ ಬದುಕಿದ್ದೇನೆ. ಏನು ಮಾಡಲಿ?

: ಗಂಡ ಸರಿಯಿಲ್ಲದಿದ್ದರೆ ನಿಜಕ್ಕೂ ಅಂತಹ ಮಹಿಳೆಯ ಬಾಳು ಕಷ್ಟವೇ. ಅಂತಹ ಬಾಳನ್ನು ಸಹಿಸಿಕೊಳ್ಳಲೂ ಆಗದೇ, ಅದರಿಂದ ಮುಕ್ತಿ ಪಡೆಯಲೂ ಆಗದೇ ಒದ್ದಾಡಬೇಕಾಗುತ್ತದೆ. ಹೆಂಡತಿಯಾದವಳು ಗಂಡನ ಉಳಿದ ಯಾವ ದುಶ್ಚಟವನ್ನು ಕಷ್ಟವಾದರೂ ಹೇಗೋ ನುಂಗಿಕೊಳ್ಳುತ್ತಾಳೆ. ಆದರೆ ಅವನ ಪರಸ್ತ್ರೀಸಂಗವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಂತದ್ದರಲ್ಲಿ ನಿಮ್ಮ ಗಂಡ ಬೇರೊಬ್ಬಳನ್ನು ಮದುವೆಯಾಗಿ ಮಗುವನ್ನೂ ಪಡೆದಿದ್ದಾನೆ ಅಂದರೆ ಅವನಿಗೆ ಸ್ವಲ್ಪವಾದರೂ ಜವಾಬ್ದಾರಿ ಇದೆಯಾ? ಅವನಿಗೆ ಈಗ ಏನು ಹೇಳಿದರೂ ಪ್ರಯೋಜನವಿಲ್ಲ . ನೀವೇ ಹೇಳುವಂತೆ ನಿಮಗೀಗ ಆ ಮದುವೆಯಿಂದ ಹೊರಬರುವುದೂ ಕಷ್ಟ . ಅಲ್ಲಿ ಸಹಿಸಿಕೊಂಡಿರುವುದೂ ಮನಸ್ಸಿಗೆ ಹಿಂಸೆ. ಹೆಚ್ಚೆಂದರೆ ಅವನ ಜೊತೆ ಲೈಂಗಿಕ ಸಂಪರ್ಕದಿಂದ ದೂರ ಇರಬಹುದು. ಆದ್ದರಿಂದ ಈಗ ನೀವು ನಿಮ್ಮಷ್ಟಕ್ಕೇ ಗಟ್ಟಿಯಾಗುತ್ತಾ ಹೋಗಬೇಕು. ನಿಮಗಿರುವ ವಿದ್ಯೆಗೆ ಅಥವಾ ಹವ್ಯಾಸಕ್ಕೆ ಸರಿಯಾಗಿ ಯಾವುದಾದರೂ ಕೆಲಸ ಮಾಡಿ. ಮೊದಲು ಆರ್ಥಿಕವಾಗಿ ಸ್ವಾವಲಂಬನೆಯನ್ನು ಪಡೆಯಿರಿ. ನಿಮಗೂ ಹೊರಗೆ ಹೋದರೆ ಉಳಿದ ಜನರ ಜೊತೆ ಬೆರೆಯುವುದರಿಂದ ಮನಸ್ಸಿಗೂ ಸ್ವಲ್ಪ ಸಮಾಧಾನ ಸಿಗುತ್ತದೆ. ನಿಮ್ಮಷ್ಟಕ್ಕೆ ನೀವು ಬದುಕುವ ಶಕ್ತಿಯೂ ಬರುತ್ತದೆ. ನಿಮ್ಮ ಮಗನಿಗೂ ಒಂದು ಬದುಕು ಕಲ್ಪಿಸಲು ಸಾಧ್ಯವಾಗುತ್ತದೆ. ಮುಂದೆ ನಿಮಗೆ ಆ ಮನೆಯಿಂದ ಹೊರಬರಬೇಕು ಅನಿಸಿದರೆ ಅದು ಸಾಧ್ಯವೂ ಆಗುತ್ತದೆ.  ಛಲದಿಂದ ಬದುಕಿ ನಿಮ್ಮಂತೆಯೇ ಕಷ್ಟದಲ್ಲಿರುವ ಹುಡುಗಿಯರಿಗೆ ಮಾದರಿಯಾಗಿ.