ಸೈಫ್ ಪುತ್ರಿ ಜೊತೆ ಹೃತಿಕ್ ರೊಮ್ಯಾನ್ಸ್?

ಹೃತಿಕ್ ರೋಷನ್ ಸುಸೇನಳಿಂದ ದೂರವಾದ ನಂತರ ಯಾರ ಜೊತೆಯೂ ಅವನ ಹೆಸರು ಹೆಚ್ಚಾಗಿ ಕೇಳಿಬಂದಿಲ್ಲ. ಈಗ ಸೈಫ್ ಆಲಿ ಖಾನ್ ಮತ್ತು ಮೊದಲ ಪತ್ನಿ ಅಮೃತಾ ಸಿಂಗ್ ಮಗಳು 24ರ ಹರೆಯದ ಸಾರಾ ಆಲಿ ಖಾನ್ ಜೊತೆ ಹೃತಿಕ್ ರೊಮ್ಯಾನ್ಸ್ ಮಾಡುತ್ತಾನೆ ಎನ್ನುವ ಗುಲ್ಲು ಜೋರಾಗಿದೆ. ಆದರೆ ಇದು ಕೂಡಾ ಬರೀ ತೆರೆಯ ಮೇಲಷ್ಟೇ.
ಸೈಫ್ ಪುತ್ರಿ ಸಾರಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾಳೆ ಎನ್ನುವ ಸುದ್ದಿ ಈಗ ಒಂದು ವರ್ಷದಿಂದ ಬಿಟೌನಿನಲ್ಲಿ ಗಿರಕಿ ಹೊಡೆಯುತ್ತಲೇ ಇತ್ತು. ಎಲ್ಲಾ ಸರಿಯಾಗಿದ್ದರೆ ಸಾರಾ ಈ ಮೊದಲು ಕರಣ್ ಜೋಹರ್ ಸಿನಿಮಾವೊಂದರಲ್ಲಿ ನಟಿಸಬೇಕಿತ್ತು. ಆದರೆ ಜೋಹರ್ ಮತ್ತು ಸಾರಾ ಅಮ್ಮ ಅಮೃತಾ ಮಧ್ಯೆ ಭಿನ್ನಾಭಿಪ್ರಾಯ ಮೂಡಿದ ಕಾರಣ ಸಾಧ್ಯವಾಗಲಿಲ್ಲ. ಆದರೀಗ ಅವಳು ಬೆಳ್ಳಿ ಪರದೆ ಮೇಲೆ ಮೊದಲ ಬಾರಿಗೆ ಹೀರೋಯಿನ್ ಆಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾಳೆ ಎನ್ನುತ್ತವೆ ಮೂಲ. ಅದೂ ಸೂಪರ್ ಸ್ಟಾರ್ ಹೃತಿಕ್ ರೋಷನ್ ಜೊತೆ ತನ್ನ ಚೊಚ್ಚಲ ಸಿನಿಮಾದಲ್ಲಿ ಅಭಿನಯಿಸಲಿದ್ದಾಳಂತೆ. ಹೃತಿಕ್ ಈ ಮೊದಲು ನಟಿಸಿರುವ `ಅಗ್ನಿ ಪಥ್’ ಸಿನಿಮಾ ನಿರ್ದೇಶಕ ಕರಣ್ ಮಲ್ಹೋತ್ರಾ ಈ ಸಿನಿಮಾಗೂ ಆಕ್ಷನ್ ಕಟ್ ಹೇಳಲಿದ್ದಾರಂತೆ. ಇದೊಂದು ಕಾಮಿಡಿ ಸಿನಿಮಾವಂತೆ.
ಬಾಲಿವುಡ್ಡಿನ ಹ್ಯಾಂಡ್ಸಮ್ ಹಂಕ್ ಹೃತಿಕ್ ಜೊತೆ ಸಾರಾಗೆ ನಟಿಸುವ ಅವಕಾಶ ಸಿಗುತ್ತಿರುವುದು ಅವಳ ಅದೃಷ್ಟವೇ ಸರಿ ಎಂದು ಬಿಟೌನ್ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಅಧಿಕೃತ ಪ್ರಕಟಣೆ ಸದ್ಯವೇ ಹೊರಬೀಳುವ ನಿರೀಕ್ಷೆ ಇದೆ.