ನಮ್ಮ ಪ್ರೀತಿಗೆ ಭವಿಷ್ಯ ಇದೆಯಾ ?

Lovers Walking on the Beach at Sunset on Vacation

ನಿಮ್ಮ ಹುಡುಗನ ಮನೆಯವರು ಮೇಲ್ಜಾತಿಯ ಕುಟುಂಬದವರಾದ್ದರಿಂದ ಬೇರೆ ಜಾತಿಯ ಹುಡುಗಿಯನ್ನು ತಂದರೆ ಅವಳು ತಮ್ಮ ಸಂಪ್ರದಾಯಕ್ಕೆ ಹೊಂದಿಕೊಳ್ಳದಿದ್ದರೆ ಅನ್ನುವ ಆತಂಕ.

ಪ್ರ : ನಾನು ಅಪ್ಪ, ಅಮ್ಮನ ಮುದ್ದಿನ ಮಗಳು. ಚಿಕ್ಕಂದಿನಿಂದಲೂ ಅವರ ಅಕ್ಕರೆಯಲ್ಲಿಯೇ ಬೆಳೆದೆ. ಅಮ್ಮ ಕೊಡುತ್ತಿದ್ದ ಕೈತುತ್ತು, ಮೊದಲ ಬಾರಿಗೆ ಸೈಕಲ್ ತೆಗೆದುಕೊಂಡಾಗ ಅಪ್ಪ ನನ್ನ ಹಿಂದೆ ಓಡುತ್ತಾ ಅದನ್ನು ಕಲಿಸಿಕೊಟ್ಟಿದ್ದು ಯಾವುದನ್ನೂ ಮರೆತಿಲ್ಲ ನಾನು . ಇಲ್ಲಿಯವರೆಗೆ  ಅವರಿಗೆ ಬೇಸರವಾಗುವಂತಹ ಕೆಲಸ ನಾನೆಂದೂ ಮಾಡಿಲ್ಲ. ಅವರ ಇಷ್ಟದ ಕೋರ್ಸಿಗೇ ಸೇರಿ ಒಳ್ಳೆಯ ಮಾಕ್ರ್ಸ್ ಪಡೆದು ಕೆಲಸ ಗಿಟ್ಟಿಸಿದ್ದೇನೆ. ನನಗೀಗ ಮದುವೆಯ ವಯಸ್ಸು. ಮನೆಯವರು ನಮ್ಮ ಅಂತಸ್ತಿಗೆ ಮತ್ತು ಕುಟುಂಬಕ್ಕೆ ಸರಿಹೊಂದುವ ಹುಡುಗನನ್ನು ನೋಡುತ್ತಿದ್ದಾರೆ. ಆದರೆ ನಾನು ನನ್ನ ಮನಸ್ಸನ್ನು ಬೇರೆಯವರಿಗೆ ಕೊಟ್ಟಿದ್ದೇನೆ. ಅವನು ಪಿಯುಸಿಯಿಂದಲೂ ನನ್ನ ಕ್ಲಾಸ್‍ಮೇಟ್. ನಮ್ಮಿಬ್ಬರ ಹೆಸರೂ ಒಂದೇ ಅಕ್ಷರದಿಂದ ಪ್ರಾರಂಭವಾಗುವುದರಿಂದ ಅವನು ಪ್ರಾಕ್ಟಿಕಲ್ಸಿಗೂ ನನ್ನ ಪಾರ್ಟನರ್ ಆಗಿದ್ದ. ನಮ್ಮ ನಡುವೆ ತುಂಬಾ ಒಳ್ಳೆಯ ಅಂಡರ್‍ಸ್ಟಾಂಡಿಗ್ ಇದೆ. ಅವನೂ ಈಗ ನನ್ನ ಜೊತೆಯೇ ಕೆಲಸ ಮಾಡುತ್ತಿದ್ದಾನೆ. ಆದರೆ ಎಲ್ಲ ಪ್ರೀತಿಯಲ್ಲೂ ಅಡ್ಡ ಬರುವಂತೆ ನಮ್ಮದೂ ಜಾತಿ ಬೇರೆಬೇರೆ. ಅವನದು ಗೌರವಸ್ಥ ಮೇಲ್ಜಾತಿಯ ಕುಟುಂಬ. ನಾನು ಮೀನುಗಾರಳು. ಅವನು ತನ್ನ ಮನೆಬಿಟ್ಟು ಹೊರಬಂದು ನನ್ನ ಜೊತೆ ಸಂಸಾರ ಮಾಡಲು ತಯಾರಿದ್ದಾನೆ. ಆದರೆ ನಾನು ಅಪ್ಪ, ಅಮ್ಮನ  ಪರ್ಮಿಶನ್ ಇಲ್ಲದೇ ಮದುವೆಯಾಗಲು ತಯಾರಿಲ್ಲ. ನನ್ನ ಹೆತ್ತವರದು ಒಂದೇ ಕಂಡೀಷನ್. ಹುಡುಗನ ಅಪ್ಪ, ಅಮ್ಮ ನನ್ನನ್ನು ಸೊಸೆ ಅಂತ ಮನೆತುಂಬಿಸಿಕೊಳ್ಳುವುದಾದರೆ ನಮ್ಮ ಮನೆಯವರು ಮದುವೆಮಾಡಿಕೊಡಲು ತಯಾರಿದ್ದಾರೆ. ನನಗೂ ಅದೇ ಇಷ್ಟ. ಆದರೆ ಹುಡುಗನ ಪಾಲಕರು ನಮ್ಮ ಮದುವೆಗೆ ಖಂಡಿತಾ ಗ್ರೀನ್ ಸಿಗ್ನಲ್ ಕೊಡುವುದಿಲ್ಲ ಅಂತ ಅವನು ಹೇಳುತ್ತಿದ್ದಾನೆ. ಅವನಿಲ್ಲದೇ ನನಗೆ ಬದುಕುವುದು ಸಾಧ್ಯವೇ ಇಲ್ಲ. ಮನೆಯವರನ್ನು ಧಿಕ್ಕರಿಸಿ ಮದುವೆಯಾಗಿ ಸಂತೋಷ ದಿಂದಿರುವುದೂ ಅಸಾಧ್ಯ. ಮದುವೆಯೇ ಆಗುವುದಿಲ್ಲ ಅಂತ ಹೇಳಿದರೂ ಮನೆಯವರು ಕೇಳುವುದಿಲ್ಲ. ನನ್ನ ಜೀವನವೇ ಗೊಂದಲಮಯವಾಗಿದೆ. ನಮ್ಮ ಪ್ರೀತಿಗೆ ಭವಿಷ್ಯ ಇದೆಯಾ?

: ಕೆಲವೊಮ್ಮೆ ಅಕ್ಕಿಯೂ ಖರ್ಚಾಗಬಾರದು, ಅಕ್ಕನ ಮಕ್ಕಳೂ ದೊಡ್ಡವರಾಗಬೇಕು ಅಂದರೆ ಹೇಗೆ? ನಿಮಗೆ ಪ್ರೀತಿಸಿದವನ ಜೊತೆಯೇ ಬಾಳಬೇಕು, ಆದರೆ ಮನೆಯವರಿಗೆ ನೋವೂ ಆಗಬಾರದು ಅಂದರೆ ಸ್ವಲ್ಪ ಕಷ್ಟವೇ. ನಮ್ಮ ಸಮಾಜದಲ್ಲಿ ಹೀಗೆ ಅಂತರ್ಜಾತಿಯ ವಿವಾಹಕ್ಕೆ ವಿರೋಧ ಸಾಮಾನ್ಯ. ನಿಮ್ಮ ಹುಡುಗನ ಮನೆಯವರು ಮೇಲ್ಜಾತಿಯ ಕುಟುಂಬದವರಾದ್ದರಿಂದ ಬೇರೆ ಜಾತಿಯ ಹುಡುಗಿಯನ್ನು ತಂದರೆ ಅವಳು ತಮ್ಮ ಸಂಪ್ರದಾಯಕ್ಕೆ ಹೊಂದಿಕೊಳ್ಳದಿದ್ದರೆ ಅನ್ನುವ ಆತಂಕ. ಅದಕ್ಕಿಂತ ಹೆಚ್ಚಾಗಿ ತಮ್ಮ ನೆಂಟರಿಷ್ಟರೆದುರು ಮುಜುಗರ ಬೇರೆ. ಸಮಾಜ ಬಾಂಧವರು ತಮ್ಮ ಬಗ್ಗೆ ಆಡಿಕೊಂಡು ನಗುತ್ತಾರೆ ಅನ್ನುವುದೇ ಅವರು ನಿಮ್ಮನ್ನು ನಿರಾಕರಿಸಲು ಮುಖ್ಯ ಕಾರಣ. ಮೊದಲು ಹುಡುಗನ ಮನೆಯವರ ಜೊತೆ ಸಂಪರ್ಕ ಸಾಧಿಸಿ ಅವರ ಮನಗೆಲ್ಲಲು ನೋಡಿ. ಒಂದು ವೇಳೆ ಅವರು ಸಸ್ಯಹಾರಿಯಾಗಿದ್ದರೆ ಅದಕ್ಕೂ ಹೊಂದಿಕೊಳ್ಳುವ ಭರವಸೆ ಕೊಡಿ. ನಿಮ್ಮ ಹುಡುಗನೂ ಆದಷ್ಟು ಅವರ ತಂದೆತಾಯಿಯನ್ನು ಒಪ್ಪಿಸಲು ಪ್ರಯತ್ನಿಸಲಿ. ಅಷ್ಟಾಗಿಯೂ ಅವರು ತಮ್ಮ ಜಿದ್ದು ಬಿಡದಿದ್ದರೆ ನಿಮ್ಮ ಹುಡುಗ ಮನೆಯಿಂದ ಹೊರಬಂದು ನಿಮ್ಮನ್ನು ಕೈಹಿಡಿಯುವ ಧೈರ್ಯ ತೋರಿದರೆ ನೀವೂ ಅವನಿಗೆ ಸಾಥ್ ಕೊಡಿ. ನಿಮ್ಮ ಮನೆಯವರೂ ನಿಮ್ಮ ಸಂತೋಷವನ್ನೇ ಬಯಸುವುದರಿಂದ ದೊಡ್ಡ ರೀತಿಯಲ್ಲಿ ಮದುವೆ ಮಾಡಿಕೊಡದಿದ್ದರೂ ಆಶೀರ್ವದಿಸಿ ಕಳಿಸಬಹುದು. ನಿಮ್ಮ ಪ್ರೀತಿಯ ನಡೆವಳಿಕೆಯಿಂದ ಹುಡುಗನ ಮನೆಯವರ ಹೃದಯವನ್ನೂ ಕಾಲಕ್ರಮೇಣ ಗೆಲ್ಲಲು ಪ್ರಯತ್ನಿಸಿ. ಇಂದಲ್ಲ ನಾಳೆ ಅವರೂ ಕಿರಿಯರ ತಪ್ಪು ಮನ್ನಿಸಿ ಮನೆಗೆ ಕರೆಯಬಹುದು.