ಕಷ್ಟದಲ್ಲಿರುವ ಗೆಳೆಯನ ಹೆಂಡತಿಯನ್ನು ವರಿಸಿದರೆ ತಪ್ಪೇ ?

ಪ್ರ : ಅವನೂ ನಾನೂ ಒಟ್ಟಿಗೇ ಆಡಿ ಬೆಳೆದವರು. ಕಾಲೇಜಿಗೆ ಬಂದ ನಂತರ ನಮ್ಮಿಬ್ಬರ ಆಸಕ್ತಿಯ ವಿಷಯಗಳು ಬೇರೆಯಾದ್ದರಿಂದ ಕಾಲೇಜು ಒಂದೇ ಆಗಿದ್ದರೂ ಕ್ಲಾಸ್ ಬೇರೆ ಬೇರೆಯಾಗಿತ್ತು. ಆದರೂ ಕ್ಲಾಸ್ ಮುಗಿದ ತಕ್ಷಣ ಇಬ್ಬರೂ ಜೊತೆಯಾಗುತ್ತಿದ್ದೆವು. ಎಲ್ಲರೂ ನಮ್ಮನ್ನು ರಾಮ-ಲಕ್ಷ್ಮಣ ಅಂತ ತಮಾಷೆ ಮಾಡುತ್ತಿದ್ದರು. ಅದೇನು ಕಾಕತಾಳೀಯವೋ ಗೊತ್ತಿಲ್ಲ, ನಾವಿಬ್ಬರೂ ಒಂದೇ ಹುಡುಗಿಯನ್ನು ಇಷ್ಟಪಡುತ್ತಿದ್ದೆವು. ಆದರೆ ಆ ಹುಡುಗಿ ಲೈಕ್ ಮಾಡುತ್ತಿದ್ದುದು ನನ್ನ ಸ್ನೇಹಿತನನ್ನು. ನಾನು ಅವರ ಮಧ್ಯೆ ಬರಬಾರದೆಂದು ನನಗೆ ಅವಳ ಮೇಲಿನ ಪ್ರೀತಿಯನ್ನು ನಾನು ಯಾರಿಗೂ ತಿಳಿಸಲೇ ಇಲ್ಲ. ಅವರಿಬ್ಬರಿಗೂ ನಾನೇ ಮುತುವರ್ಜಿ ವಹಿಸಿ ಮದುವೆಯನ್ನೂ ಮಾಡಿದೆ. ಬಿಡುವಿದ್ದಾಗೆಲ್ಲ ಅವರ ಮನೆಗೆ ನಾನು ಹೋಗುತ್ತಿರುತ್ತೇನೆ. ಒಮ್ಮೊಮ್ಮೆ ನಾನು ಹೋದಾಗ ಅವಳು ಒಬ್ಬಳೇ ಇರುತ್ತಾಳೆ. ಅವಳು ತನ್ನ ಸಂಸಾರದ ಸಮಸ್ಯೆಯನ್ನೆಲ್ಲ ನನ್ನ ಜೊತೆ ಹಂಚಿಕೊಳ್ಳುತ್ತಾಳೆ. ನನ್ನ ಆ ಸ್ನೇಹಿತ ಮದುವೆಗಿಂತ ಮೊದಲು ಅವಳನ್ನು ಅಷ್ಟು ಪ್ರೀತಿಸುತ್ತಿದ್ದರೂ ಈಗ ಅವಳನ್ನು ಗೋಳುಹೊಯ್ದುಕೊಳ್ಳುತ್ತಾನಂತೆ. ಅವಳು ಮಾಡಿದ ಕೆಲಸದಲ್ಲೆಲ್ಲ ತಪ್ಪು ಹುಡುಕಿ ಹಂಗಿಸುತ್ತಾನಂತೆ. ನಾನು ಪ್ರೀತಿಸುತ್ತಿದ್ದ ಹುಡುಗಿ ಈ ರೀತಿ ನನ್ನ ಸ್ನೇಹಿತನಿಂದಲೇ ಕಷ್ಟ ಅನುಭವಿಸುವುದು ಸಹಿಸಲು ಕಷ್ಟವಾಗುತ್ತಿದೆ. ಒಂದೆರಡು ಬಾರಿ ಸ್ನೇಹಿತನ ಹತ್ತಿರ ಈ ವಿಷಯ ಪ್ರಸ್ತಾಪಿಸಿದಾಗ ಅವನು `ಗಂಡ-ಹೆಂಡತಿ ಮಧ್ಯೆ ಬರಬೇಡ’ ಅಂತ ಸ್ಟ್ರಿಕ್ಟಾಗಿ ಹೇಳಿಬಿಟ್ಟ. ನನಗೆ ಅವಳ ಬಾಡಿದ ಮುಖ ನೋಡಲು ಕಷ್ಟವಾಗುತ್ತಿದೆ. ನನ್ನನ್ನು ನೋಡಿದ ಕೂಡಲೇ ಅರಳುವ ಅವಳ ಮುಖ ನೋಡಿದರೆ ನನ್ನನ್ನು ಅವಳು ಇಷ್ಟಪಡುತ್ತಿದ್ದಾಳೆ ಅಂತ ಅನಿಸುತ್ತಿದೆ. ನನ್ನ ಸ್ನೇಹಿತನಿಂದ ಡೈವೋರ್ಸ್ ಕೊಡಿಸಿ ನಾನೇ ಅವಳನ್ನು ಮದುವೆಯಾಗಿಬಿಡೋಣ ಅನ್ನುವ ಆಸೆ ಮೂಡುತ್ತಿದೆ. ಈಗಾದರೂ ನನ್ನ ಪ್ರೀತಿಯನ್ನು ಪಡೆಯಲು ಇದೊಂದು ಅವಕಾಶವಾಗಿದೆ. ನಿಮ್ಮ ಅಭಿಪ್ರಾಯವೇನು ಈ ವಿಷಯದಲ್ಲಿ?

: ನಿಮ್ಮ ಸುಪ್ತಮನಸಿನ ಆಸೆ (ದುರಾಸೆ) ಇದರಿಂದ ಸ್ಪಷ್ಟವಾಗುತ್ತಿದೆ. ನಿಮ್ಮ ಬಾಲ್ಯಸ್ನೇಹಿತನ ಬೆನ್ನಿಗೇ ಚೂರಿ ಇರಿಯುವ ಕೆಲಸದ ಬಗ್ಗೆ ಯೋಚಿಸುತ್ತಿದ್ದೀರಲ್ಲ. ನೀವು ಈ ರೀತಿಯ ಗೋಮುಖ ವ್ಯಾಘ್ರ ಅನ್ನುವುದು ಆ ನಿಮ್ಮ ಸ್ನೇಹಿತನಿಗೆ ಗೊತ್ತಾದರೆ ಅವನೆಷ್ಟು ನೊಂದುಕೊಳ್ಳಬಹುದು? ಮೊದಲು ತಾನೊಬ್ಬ ದೊಡ್ಡ ತ್ಯಾಗಿ ಅಂತ ನಿಮಗೆ ನೀವೇ ಸರ್ಟಿಫಿಕೇಟ್ ಕೊಟ್ಟುಕೊಳ್ಳಲು ಅವರಿಬ್ಬರನ್ನೂ ಒಂದು ಮಾಡಿದಿರಾ? ಈಗ ನಿಮ್ಮ ಒಳಮನಸ್ಸು ಅವಳನ್ನು ಬಯಸುತ್ತಿದೆಯಲ್ಲವೇ? ಚಿಕ್ಕ ಪುಟ್ಟ ವೈಮನಸ್ಸು, ಅಸಹನೆ ಯಾವ ಸಂಸಾರದಲ್ಲಿ ಇರುವುದಿಲ್ಲ ಹೇಳಿ? ಮದುವೆಯಾದ ಹೊಸತರಲ್ಲಿ ಸ್ವಲ್ಪ ಹೊಂದಾಣಿಕೆಯ ಸಮಸ್ಯೆ ಎಲ್ಲರಿಗೂ ಇರುತ್ತದೆ. ಅದನ್ನೇ ದೊಡ್ಡದು ಮಾಡಿ ಮನೆ ಒಡೆಯುವ ಕೆಲಸಕ್ಕೆ ಕೈಹಾಕುತ್ತಿದ್ದೀರಲ್ಲ ನೀವು ನಿಜವಾದ ಸ್ನೇಹಿತರಾ ಅವರಿಗೆ? ಸಂಸಾರದಲ್ಲಿ ತಮಗಾದ ಸಮಸ್ಯೆಯನ್ನು ನೀವೊಬ್ಬರು ಸ್ನೇಹಿತರು ಅಂತ ನಿಮ್ಮ ಜೊತೆ ಆಕೆ ಹಂಚಿಕೊಂಡು ಮನಸ್ಸನ್ನು ಹಗುರಮಾಡಿಕೊಳ್ಳುತ್ತಿರಬಹುದು. ಅವಳಿಗೆ ನೀವು ಸಾಂತ್ವಾನ ಹೇಳಿ ಅವರಿಬ್ಬರನ್ನು ಹತ್ತಿರ ಸೇರಿಸುವುದು ಬಿಟ್ಟು ಅವಳ ಮೇಲೆಯೇ ಕಣ್ಣಿಡುತ್ತಿದ್ದೀರಲ್ಲಾ. ನಿಮಗೆ ಈ ರೀತಿಯ ಭಾವನೆ ಇದೆ ಅಂತ ಗೊತ್ತಾದರೆ ಆಕೆ ಖಂಡಿತಾ ನಿಮ್ಮನ್ನು ಮನೆಗೆ ಸೇರಿಸುತ್ತಿರಲಿಲ್ಲ. ಅವರಿಬ್ಬರ ನಡುವಿನ ಸಣ್ಣ ಬಿರುಕನ್ನೇ ದೊಡ್ಡದು ಮಾಡಿ ಬೆಂಕಿಗೆ ತುಪ್ಪ ಸುರಿಯುವ ಮನೆಹಾಳು ಕೆಲಸವನ್ನು ಮಾಡಲು ಬಿಲ್‍ಕುಲ್ ಹೋಗಬೇಡಿ. ನೀವು ಒಳ್ಳೆಯ ಮನಸ್ಸನ್ನಿಟ್ಟುಕೊಂಡು ಅವರ ಮನೆಗೆ ಹೋಗುವುದಿದ್ದರೆ ಓಕೆ. ಇಲ್ಲವಾದರೆ ಆ ಕಡೆ ಮುಖ ಹಾಕದಿರುವುದೇ ಉತ್ತಮ. ಅವರಿಬ್ಬರೇ ಕ್ರಮೇಣ ಸರಿಹೋಗುತ್ತಾರೆ.