ಅಕ್ಕನನ್ನು ಬಿಟ್ಟು ಮದುವೆಯಾಗುವುದು ತಪ್ಪೇ ?

 

ಮದುವೆ ಎನ್ನುವುದು ಒತ್ತಾಯದಿಂದ ಮಾಡಿಮುಗಿಸುವ ಕಾರ್ಯವಲ್ಲ. ಆಕೆಯ ಜೀವನವನ್ನು ನಿರ್ಧರಿಸುವ ಹಕ್ಕು ಅವಳಿಗೆ ಇದೆ.

ಪ್ರ : ನನಗೀಗ 28 ವರ್ಷ. ಕಳೆದ ಎಂಟು ವರ್ಷಗಳಿಂದ ಒಬ್ಬಳನ್ನು ಪ್ರೀತಿಸುತ್ತಿದ್ದೇನೆ. ಅವಳಿಗೂ ನನ್ನಷ್ಟೇ ವಯಸ್ಸು. ಅವಳ ಮನೆಯವರು ಈ ವರ್ಷವೇ ಮದುವೆಯಾಗಲು ನಮ್ಮನ್ನು ಒತ್ತಾಯಿಸುತ್ತಿದ್ದಾರೆ. ನನಗೂ ಅವಳನ್ನು ಕೂಡಲೇ ಮದುವೆಯಾಗುವ ಆಸೆ ಇದೆ. ನನ್ನ ತಂದೆ, ತಾಯಿಗೂ ಅವಳನ್ನು ಸೊಸೆಯಾಗಿ ಸ್ವೀಕರಿಸಲು ಯಾವ ತೊಂದರೆಯೂ ಇಲ್ಲ. ಆದರೆ ಒಂದೇ ಪ್ರಾಬ್ಲೆಂ ಅಂದರೆ ನನ್ನ ಅಕ್ಕನಿಗೆ ಇನ್ನೂ ಮದುವೆಯಾಗದೇ ಇರುವುದು. ನನ್ನ ಅಕ್ಕ ನೋಡಲು ಸುಂದರವಾಗಿ ಇದ್ದಾಳೆ. ತುಂಬಾ ಬುದ್ಧಿವಂತಳು. ಕೈತುಂಬಾ ಸಂಬಳ ತರುವ ನೌಕರಿಯಲ್ಲೂ ಇದ್ದಾಳೆ. ಅನೇಕ ಹುಡುಗರನ್ನು ಅವಳಿಗೆ ತೋರಿಸಿದ್ದಾಯಿತು. ಒಂದಲ್ಲ ಒಂದು ಕಾರಣ ಹೇಳಿ ಅವರÀನ್ನು ತಿರಸ್ಕರಿಸಿದಳು. ಅವರೆಲ್ಲ ತನಗೆ ಸರಿಯಾದವರೇ ಅಲ್ಲ ಎನ್ನುವುದು ಆಕೆಯ ಅನಿಸಿಕೆ. ನನ್ನ ಪಾಲಕರು ಅಕ್ಕನಿಗೆ ಗಂಡು ನೋಡಿನೋಡಿ ಸುಸ್ತಾಗಿದ್ದಾರೆ. ತನಗೆ ಇಷ್ಟವಾಗುವ ಹುಡುಗ ಸಿಗದ ಹೊರತು ಮದುವೆಯನ್ನೇ ಆಗುವುದಿಲ್ಲ ಅಂತ ಹಠ ಹಿಡಿದು ಕುಳಿತಿದ್ದಾಳೆ. ಅಕ್ಕನಿಗೆ ಮದುವೆಯಾಗದ ಹೊರತು ನನಗೆ ಮದುವೆ ಮಾಡಲು ಮನೆಯವರಿಗೆ ಮನಸ್ಸಿಲ್ಲ. ಆದರೆ ನನ್ನ ಹುಡುಗಿಯ ಮನೆಯವರು ನಮ್ಮ ಮದುವೆಗೆ ಗಡಿಬಿಡಿ ಮಾಡುತ್ತಿದ್ದಾರೆ. ನಾನು ಈಗಲೇ ಮದುವೆಯಾದರೆ ಅಕ್ಕನಿಗೆ ಯಾವ ಸಮಸ್ಯೆ ಇಲ್ಲವಂತೆ. ನಮ್ಮ ರಿಲೇಟಿವ್ಸ್ ಏನಾದರೂ ಹೇಳುತ್ತಾರೆ ಅಂತ ಅಮ್ಮನ ಭಯ. ಅಕ್ಕನನ್ನು ಬಿಟ್ಟು ನಾನು ಈಗ ಮದುವೆಯಾದರೆ ತಪ್ಪೇ?

ಉ : ಬೆಳೆದ ಮಗಳು ಮನೆಯಲ್ಲಿರುವಾಗ ಗಂಡುಮಕ್ಕಳ ಮದುವೆ ಮಾಡುವುದು ಲೋಕಾ ರೂಢಿಯಲ್ಲದಿದ್ದರೂ ಕೆಲವೊಮ್ಮೆ ಪರಿಸ್ಥಿತಿಯ ಅನಿವಾರ್ಯತೆಗೆ ನಿಯಮ ಬದಲಿಸಲೇಬೇಕಾಗುತ್ತದೆ. ಈಗ ನಿಮ್ಮ ಅಕ್ಕ ಅವಳ ಮನಸ್ಸಿಗೆ ಬರದ ಗಂಡನ್ನು ಮದುವೆಯಾಗಿ ಜೀವನಪೂರ್ತಿ ಕಳೆಯಲು ಸಿದ್ಧಳಿಲ್ಲ. ಆದರೆ ಸ್ವಲ್ಪ ಮಟ್ಟಿನ ಕಾಂಪ್ರಮೈಸ್ ಮಾಡಿಕೊಳ್ಳದಿದ್ದರೆ ಜೀವನ ಸಂಗಾತಿ ಸಿಗುವುದು ಕಷ್ಟವೇ. ನೂರಕ್ಕೆ ನೂರು ಬಯಸಿದಂತೆ ಎಲ್ಲವೂ ಆಗುವುದೇ? ನಿಮ್ಮ ಅಕ್ಕನಿಗೆ ಎಲ್ಲರೂ ಸೇರಿ ಸ್ವಲ್ಪ ಬುದ್ಧಿ ಹೇಳಬಹುದು. ಆದರೆ ಮದುವೆ ಎನ್ನುವುದು ಒತ್ತಾಯದಿಂದ ಮಾಡಿಮುಗಿಸುವ ಕಾರ್ಯವಲ್ಲ. ಅವಳ ಜೀವನವನ್ನು ನಿರ್ಧರಿಸುವ ಹಕ್ಕು ಆಕೆಗಿದ್ದೇ ಇದೆ. ಅದೂ ಅಲ್ಲದೇ ಅವಳಿಗೂ ಮೆಚುರಿಟಿ ಇದೆ. ಒಳ್ಳೆಯ ಸಂಪಾದನೆ ಇದೆ. ಹಾಗಿರುವಾಗ ಆಕೆಯ ಇಷ್ಟವನ್ನು ಗೌರವಿಸಲೇಬೇಕು.ಅದೂ ಅಲ್ಲದೇ ನಿಮ್ಮ ಮದುವೆಗೆ ಅವಳ ಅಭ್ಯಂತರವೂ ಇಲ್ಲ. ಇನ್ನೊಂದು ಕಡೆ ನೀವು ಪ್ರೀತಿಸುತ್ತಿರುವ ಹುಡುಗಿಯ ಮನೆಯವರೂ ಇನ್ನೆಷ್ಟು ವರ್ಷ ಕಾಯುತ್ತಾರೆ? ಅವರ ತಾಳ್ಮೆಗೂ ಮಿತಿ ಇದೆ. ಸಂಬಂಧಿಕರು ಏನಾದರೂ ಹೇಳಬಹುದು ಅಂತ ನಿಮ್ಮ ಮದುವೆ ಮುಂದೂಡುವುದು ಸರಿಯಲ್ಲ. ನಿಮ್ಮ ಹೆತ್ತವರಿಗೆ ಈ ವಿಷಯ ಕನ್ವಿನ್ಸ್ ಮಾಡಿ. ನಿಮ್ಮ ಅಕ್ಕನೂ ನಿಮ್ಮ ಹೆತ್ತವರಲ್ಲಿ ಮಾತಾಡಿ ಅವರನ್ನು ಒಪ್ಪಿಸುವಂತೆ ಕೇಳಿಕೊಳ್ಳಿ. ಹಾಗಂತ ನಿಮ್ಮ ಮದುವೆಯಾದರೂ ನಿಮ್ಮ ಅಕ್ಕನ ಜವಾಬ್ದಾರಿ ಮಾತ್ರ ಮರೆಯಬೇಡಿ.