ಅಮ್ಮನ ಮನೆಯಲ್ಲಿ ನಾನಿದ್ದರೆ ತಪ್ಪೇ?

ಪ್ರ : ನಮ್ಮದು ಲವ್ ಮ್ಯಾರೇಜ್. ಮೊದಲು ಅವನೂ ನಮ್ಮ ಆಫೀಸಿನಲ್ಲಿಯೇ ಕೆಲಸ ಮಾಡುತ್ತಿದ್ದ. ನಮ್ಮ ಸೆಕ್ಷನ್ನಿನಲ್ಲಿಯೇ ಅವನು ಕೆಲಸ ಮಾಡುತ್ತಿದ್ದರಿಂದ ದೋಸ್ತಿ ಬೆಳೆಯಿತು. ಇಬ್ಬರೂ ಒಬ್ಬರಿಗೊಬ್ಬರು ಇಷ್ಟವಾದೆವು. ಪ್ರೀತಿ ಬೆಳೆದು ಡೇಟಿಂಗ್ ಪ್ರಾರಂಭಿಸಿದೆವು. ಜಾತಿಯಲ್ಲಿ ಸ್ವಲ್ಪ ವ್ಯತ್ಯಾಸವಿದ್ದರಿಂದ ಮನೆಯವರ ವಿರೋಧವಿತ್ತು. ಹೇಗೋ ಅವರನ್ನು ಒಪ್ಪಿಸಿ ಅವರ ಉಪಸ್ಥಿತಿಯಲ್ಲಿಯೇ ಅವರ ಆಶೀರ್ವಾದ ಪಡೆದು ಮದುವೆಯಾದೆವು. ಮದುವೆಯಾದ ಕೆಲವು ತಿಂಗಳು ಇದೇ ಊರಿನಲ್ಲಿ ನನ್ನ ಅಮ್ಮನ ಮನೆಯ ಹತ್ತಿರವೇ ಮನೆ ಮಾಡಿಕೊಂಡು ಇದ್ದೆವು. ಈಗ ಅವನಿಗೆ ಅವನ ಊರಿಗೆ 30 ಕಿಲೋಮೀಟರ್ ದೂರವಿರುವ ಆಫೀಸಿನಲ್ಲಿ ಒಳ್ಳೆಯ ಕೆಲಸ ಸಿಕ್ಕಿರುವುದರಿಂದ ಅವನು ಅವನ ಮನೆಯಿಂದಲೇ ಕೆಲಸಕ್ಕೆ ಹೋಗುತ್ತಾನೆ. ನನಗೆ ಇಲ್ಲಿಯೇ ಒಳ್ಳೆಯ ನೌಕರಿ ಇರುವುದರಿಂದ ನಾನೀಗ ಅಮ್ಮನ ಮನೆಯಲ್ಲಿಯೇ ಇದ್ದೇನೆ. ನನ್ನ ತಂದೆ, ತಾಯಿಗೆ ನಾನು ಇಲ್ಲಿ ಇರುವುದು ಅಭ್ಯಂತರವಿಲ್ಲ. ನನಗಿರುವ ಒಬ್ಬನೇ ತಮ್ಮನಿಗೆ ಇನ್ನೂ ಮದುವೆಯಾಗಿಲ್ಲ. ಆದರೆ ನನ್ನ ಅತ್ತೆ ಮನೆಯವರಿಗೆ ನಾನು ಇಲ್ಲೇ ಇರುವುದು ಇಷ್ಟವಿಲ್ಲ. ಅಲ್ಲಿಗೇ ಬಾ ಅನ್ನುತ್ತಿದ್ದಾರೆ. ಅವರ ಸಂಪ್ರದಾಯಕ್ಕೂ ನಮ್ಮದಕ್ಕೂ ಹೋಲಿಕೆಯೇ ಇಲ್ಲ. ನನಗೆ ಅಲ್ಲಿ ಇರುವುದು ತುಂಬಾ ಕಷ್ಟ. ಗಂಡ ಪ್ರತೀ ವಾರ ಇಲ್ಲಿಗೆ ಬಂದು ಹೋಗಿ ಮಾಡುತ್ತಾರೆ. ಅವರಿಗೆ ನಾನಿಲ್ಲಿ ಇರುವುದು ತೊಂದರೆಯಿಲ್ಲ. ಆದರೆ ಅವರ ಅಪ್ಪ, ಅಮ್ಮನ ಬಲವಂತ ಜಾಸ್ತಿಯಾಗುತ್ತಿದೆ. ಅಲ್ಲಿ ನನಗೆ ಸರಿಯಾದ ಕೆಲಸವೂ ಸಿಗಲಿಕ್ಕಿಲ್ಲ. ಹೇಗೆ ಅವರಿಗೆ ಈ ವಿಷಯವನ್ನು ಮನವರಿಕೆ ಮಾಡಿಕೊಡಲಿ? ನಾನು ಅಮ್ಮನ ಮನೆಯಲ್ಲಿ ಇರುವುದು ತಪ್ಪಾ?

: ನೀನು ಅಮ್ಮನ ಮನೆಯಲ್ಲಿ ಇರುವುದು ತಪ್ಪೂ ಅಂತಲ್ಲ. ಆದರೆ ಸಾಮಾನ್ಯವಾಗಿ ಮದುವೆಯಾದ ನಂತರ ಗಂಡನ ಜೊತೆ ಹೆಂಡತಿ ಇರುವುದು ವಾಡಿಕೆ ಮತ್ತು ಎಲ್ಲ ದೃಷ್ಟಿಯಿಂದ ಸರಿ ಕೂಡಾ. ನಿಮ್ಮದು ಲವ್ ಮ್ಯಾರೇಜ್ ಆಗಿರುವ ಕಾರಣ ನಿಮ್ಮ ಗಂಡನಿಗೆ ನಿಮ್ಮ ನೇಚರ್ ಸರಿಯಾಗಿ ಗೊತ್ತಿದೆ. ನೀವು ಅವರ ಮನೆಗೆ ಹೊಂದಿಕೊಳ್ಳಲಾರಿರಿ ಅನ್ನುವ ಸತ್ಯವೂ ಅವರಿಗೆ ಅರಿವಿದೆ. ಅದಕ್ಕಾಗಿಯೇ ಅವರು ನಿಮ್ಮನ್ನು ಅಲ್ಲಿಗೆ ಬರುವಂತೆ ಬಲವಂತ ಮಾಡುತ್ತಿಲ್ಲ. ಆದರೂ ನೀವಾಗಿಯೇ ಅಲ್ಲಿಗೆ ಹೋಗಲು ತಯಾರಾದರೆ ಖಂಡಿತಾ ಅವರೂ ಖುಶಿಪಡುತ್ತಾರೆ. ಪ್ರೀತಿಸಿದ ಹೆಂಡತಿ ವಾರಪೂರ್ತಿ ದೂರ ಇರುವುದು ಅವರಿಗೆ ಸಂತೋಷ ಕೊಡುವ ಸಂಗತಿಯಂತೂ ಅಲ್ಲ. ಅದೂ ಅಲ್ಲದೇ ಅವರೂ ಎಷ್ಟು ಸಮಯ ಅಂತ ಪ್ರತೀ ವಾರ ನಿಮಗಾಗಿ ಮಾವನ ಮನೆಗೆ ಬರುತ್ತಾರೆ? ನನಗನಿಸುತ್ತದೆ ನೀವು ನಿಮ್ಮ ಗಂಡನ ಮನೆಯಲ್ಲಿ ಹೊಂದಿಕೊಳ್ಳುವುದು ಕಷ್ಟ ಅಂತ ನಿಮ್ಮಷ್ಟಕ್ಕೆ ನೀವೇ ಅಂದುಕೊಂಡುಬಿಟ್ಟಿದ್ದೀರಿ. ಕೊನೇಪಕ್ಷ ಕೆಲವು ದಿನ ರಜೆ ಹಾಕಿಯಾದರೂ ಅಲ್ಲಿದ್ದು ಪ್ರಯತ್ನಿಸಬಹುದಲ್ಲಾ. ಒಂದುವೇಳೆ ಅವರ ಮನೆಯಲ್ಲಿ ಖಾಯಂ ಆಗಿ ಇರುವುದು ತೊಂದರೆಯಾದರೆ ನೀವು ಪ್ರತ್ಯೇಕ ಮನೆ ಮಾಡಿ ಇರಬಹುದು. ಸಮಯ ಸಿಕ್ಕಾಗ ಎರಡೂ ಮನೆಗಳಿಗೆ ಹೋಗಿಬರಬಹುದು. ನೀವಾದರೂ ಎಷ್ಟು ದಿನ ತವರಿನಲ್ಲಿಯೇ ಇರುತ್ತೀರಿ? ಮುಂದೆ ನಿಮ್ಮ ತಮ್ಮನಿಗೂ ಮದುವೆಯಾದರೆ ಅಲ್ಲಿ ನಿಮಗೆ ಮನ್ನಣೆ ಸಿಗದೇ ಇರಬಹುದು. ಅದಕ್ಕಾಗಿ ನೀವು ನಿಮ್ಮ ಗಂಡ ಕೆಲಸ ಮಾಡುವ ಊರಿನಲ್ಲಿಯೇ ಯಾವುದಾದರೂ ಕೆಲಸಕ್ಕೆ ಸೇರಿಕೊಳ್ಳುವುದು ಉತ್ತಮ. ಅನಿವಾರ್ಯವಲ್ಲದ ಹೊರತು ಯಂಗ್ ಕಪಲ್ಸ್ ದೂರ ಇರುವುದು ಅಷ್ಟು ಶ್ರೇಯಸ್ಕರವಲ್ಲ.