ಎಂಗೇಜ್ಮೆಂಟ್ ಆದಮೇಲೆ ಸೆಕ್ಸ್ ಮಾಡಬಹುದೆ?

ಪ್ರ : ನಾನು 23 ವರ್ಷದ ಯುವತಿಯಾಗಿದ್ದು ನನಗೆ ಕಳೆದ ತಿಂಗಳು ನಿಶ್ಚಿತಾರ್ಥವಾಗಿದೆ. ಮೇ ಕೊನೆ ವಾರದಲ್ಲಿ ಮದುವೆ ಫಿಕ್ಸ್ ಆಗಿದೆ. ನಮ್ಮದು ಅರೇಂಜ್ಡ್ ಮದುವೆ. ನನ್ನ ಭಾವೀಪತಿ ಬಹಳ ರಸಿಕರಿದ್ದಂತೆ ತೋರುತ್ತದೆ. ಸದಾ ಫೋನಿನಲ್ಲಿ ಸೆಕ್ಸ್ ಬಗ್ಗೆಯೇ ಮಾತನಾಡುತ್ತಾರೆ. ಒಮ್ಮೊಮ್ಮೆಯಂತೂ ಫೋನಿನಲ್ಲೇ ನನ್ನನ್ನು ಅನುಭವಿಸಿಬಿಡುತ್ತಾರೆ. ಇವೆಲ್ಲಾ ನನಗೆ ಹೊಸದಾದ್ದÀರಿಂದ ಬಹಳ ಖುಷಿ ಕೊಡುತ್ತದೆ. ರೋಚಕವೆನಿಸುತ್ತದೆ. ಆದರೆ ಇತ್ತೀಚೆಗೆ ನನ್ನನವರು ನೇರವಾಗಿ ಸೆಕ್ಸ್ ಮಾಡೋಣವೆಂದು ಕರೆಯುತ್ತಿದ್ದಾರೆ. ನನಗೇ ಖುಷಿಯಿದ್ದರೂ ಏನೋ ಭಯ. ಈಗೀಗ ಅವರು ಕೋಪ ಬೇರೆ ಮಾಡಿಕೊಳ್ಳುತ್ತಿದ್ದಾರೆ. ಏನು ಮಾಡಲಿ?

ಉತ್ತರ : ಮದುವೆ ನಿಶ್ಚಯವಾದ ಬಳಿಕ ಭಾವಿ ಪತಿ ಪತ್ನಿ ಮಧ್ಯೆ ಈ ರೀತಿ ಸರಸ ಸಲ್ಲಾಪಗಳು, ರಸಿಕತನಗಳು ಸರ್ವೇ ಸಾಮಾನ್ಯ. ಮದುವೆ ನಂತರದ ಸಂಬಂಧಗಳಿಗೆ ನಿಮ್ಮ ಮನಸ್ಸುಗಳು ಹೀಗೆಯೇ ಪರಿಪಕ್ವವಾಗುವುದು. ನಿಶ್ಚಿತಾರ್ಥದ ಉದ್ದೇಶವೂ ಕೂಡ ಅದೇ ಆಗಿದೆ. ಎಲ್ಲಾ ರೀತಿಯಲ್ಲೂ ಒಬ್ಬರನ್ನೊಬ್ಬರು ಅರಿತು ಮದುವೆಗೆ ಸಿದ್ಧವಾಗಿ ಎನ್ನುವ ಸಂದೇಶ ನಿಶ್ಚಿತಾರ್ಥದಲ್ಲಿದೆ. ಆದರೆ ವಿವಾಹಪೂರ್ವ ಲೈಂಗಿಕ ಸಂಬಂಧಗಳಿಗೆ ಮಾತ್ರ ಆಸ್ಪದವಿಲ್ಲ. ನೀವು ಭಾವೀ ಪತಿಯ ಒತ್ತಾಯಕ್ಕೆ ಮಣಿದು ನಿಮ್ಮ ಮೈಮನವನ್ನು ಅವರಿಗೆ ಅರ್ಪಿಸಿಕೊಳ್ಳುತ್ತೀರಾ ಎಂದಿಟ್ಟುಕೊಳ್ಳಿ. ನಾಳೆ ದಿನ ಏನೋ ಸಮಸ್ಯೆಯಾಗಿ ಮದುವೆಯೇ ನಿಂತು ಹೋದರೆ ಏನಾಗಬಹುದು ಯೋಚಿಸಿ. ಅದೂ ಅಲ್ಲದೆ ನೀವು ಈಗಲೇ ಸೆಕ್ಸ್ ಮಾಡಲು ಒಪ್ಪಿಕೊಂಡರೆ ಅದನ್ನು ನಿಮ್ಮವರು ಅಪಾರ್ಥ ಮಾಡಿಕೊಳ್ಳುವ ಸಂದರ್ಭವೂ ಇದೆ. ಇವಳು ಮದುವೆಗೆ ಮೊದಲೇ ನನ್ನೊಂದಿಗೆ ಸೆಕ್ಸ್ ಮಾಡಲು ಒಪ್ಪಿದ್ದಾಳೆ, ಹಾಗಾದರೆ ಬೇರೆಯವರ ಜೊತೆ ಸೆಕ್ಸ್ ಮಾಡಿಲ್ಲ ಎಂದು ಏನು ಗ್ಯಾರೆಂಟಿ ಎಂಬ ಸಂಶಯ ಪಿಶಾಚಿ ಅವರ ತಲೆಗೆ ಹೊಕ್ಕಿದರೆ ನಿಮ್ಮ ಬಾಳು ಅಧೋಗತಿಯಾದೀತು. ಹಾಗಾಗಿ ವಿವಾಹಪೂರ್ವ ಲೈಂಗಿಕತೆ ಸಭ್ಯವೂ ಅಲ್ಲ, ನೈತಿಕವೂ ಅಲ್ಲ, ಸುರಕ್ಷಿತವೂ ಅಲ್ಲ. ಹಾಗಾಗಿ ಅದಕ್ಕೆ ಅವಕಾಶ ಮಾಡಿಕೊಡಬೇಡಿ. ಸಾಧ್ಯವಾದಷ್ಟು ಅವರನ್ನು ಏಕಾಂಗಿಯಾಗಿ ಖಾಸಗಿ ಸ್ಥಳಗಳಲ್ಲಿ ಭೇಟಿ ಮಾಡುವುದನ್ನು ತಪ್ಪಿಸಿರಿ. ಉಳಿದಂತೆ ನಿಮ್ಮ ಫೋನ್ ರಸಿಕತನ ಮುಂದುವರಿಯಲಿ. ಹೇಗೋ ಇನ್ನೊಂದು ತಿಂಗಳಿರುವುದಲ್ಲವೇ, ತಾಳ್ಮೆಯಿಂದ ಇರಲು ಹೇಳಿ.