ಬೀದಿನಾಯಿಗಳಿಗೆ ಆಹಾರ ಕೊಡೋದು ಕಾಯಿದೆ ಬಾಹಿರವೆ?

ಜನರು ಹೆಚ್ಚು ಓಡಾಡುವ ಕಡೆಗೆ ಬೀದಿ ನಾಯಿಗಳಿಗೆ ಆಹಾರ ಕೊಡುವಂತಿಲ್ಲ. ಅಲ್ಲದೆ ಜನರು ಕಡಿಮೆ ಇರುವ ಸಮಯದಲ್ಲಿ ಕೊಡಬೇಕು.

ಮಾರ್ಚ್ 24ರ ಅಪರಾಹ್ನದಂದು ಬೆಂಗಳೂರು ನಿವಾಸಿ 34 ವರ್ಷದ ರೋಹಿತ್ ಚಂದ್ರಶೇಖರ್ ಅವರನ್ನು ಮತ್ತೆ ಮೂರನೇ ಬಾರಿ ಪೊಲೀಸರು ಬಂಧಿಸಿದ್ದರು. ಕಾರಣ ಮಾತ್ರ ಒಂದೇ. ಬೆಂಗಳೂರು ಮೂಲದ ಇಂಜಿನಿಯರ್ ನಾಲ್ಕು ವರ್ಷಗಳಿಂದ ತಮ್ಮ ನಿವಾಸದ ಬಳಿ ಎಂಟು ಬೀದಿ ನಾಯಿಗಳಿಗೆ ಆಹಾರ ಕೊಡುತ್ತಿದ್ದಾರೆ. ಇದೇ ಅವರ ನೆರೆಯ ಬಹಳಷ್ಟು ಮಂದಿಗೆ ಇಷ್ಟವಾಗದ ಕೆಲಸ. “ನನ್ನನ್ನು ಬಂಧಿಸಿ ಶೂಗಳನ್ನು ಬಿಚ್ಚಿಸಿ ಸಂಜೆ 3.30ರಿಂದ ರಾತ್ರಿ 8.30ರವರೆಗೆ ಜೈಲಿನಲ್ಲಿಟ್ಟಿದ್ದರು. ಕುಟುಂಬವನ್ನು ಸಂಪರ್ಕಿಸಲು ಫೋನನ್ನೂ ಕೊಡಲಿಲ್ಲ. ನಾನು ಬೀದಿ ನಾಯಿಗಳಿಗೆ ಆಹಾರ ಹಾಕುವುದಿಲ್ಲ ಎಂದು ಲಿಖಿತವಾಗಿ ಬರೆದು ಕೊಡಲು ಒತ್ತಡ ಹೇರಿದ್ದಾರೆ” ಎನ್ನುತ್ತಾರೆ ರೋಹಿತ್. ಆರಂಭದಲ್ಲಿ ರೋಹಿತ್ ಪತ್ರ ಬರೆದರೂ ನಂತರ ತಂದೆ ಮತ್ತು ಸೋದರ ಸಂಬಂಧಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಬಂದ ಮೇಲೆ ಅದನ್ನು ಹರಿದು ಹಾಕಿದರು.

ರೋಹಿತ್ ನೆಲೆಸಿರುವ 35 ಎಕರೆ ಕಾಲನಿಯಲ್ಲಿ 40-45 ಬೀದಿ ನಾಯಿಗಳಿವೆ. ಅವುಗಳಲ್ಲಿ ತಮ್ಮ ಮನೆ ಮುಂದಿರುವ ಎಂಟು ನಾಯಿಗಳಿಗೆ ಅವರು ಪ್ರತಿದಿನ ಆಹಾರ ಹಾಕುತ್ತಿದ್ದರು. ಬೆಳಗಿನ ಜಾವ 5 ಗಂಟೆಗೆ ಮೊದಲು ಅಥವಾ ರಾತ್ರಿ 11.30 ನಂತರ ಆಹಾರ ಹಾಕಿ ಇತರರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಹಾಗಿದ್ದರೂ ನಿವಾಸಿಗಳ ಸಂಘಟನೆ (ಆರ್‍ಡಬ್ಲ್ಯುಎ) ಮತ್ತು ಕೆಲವು ನೆರೆಹೊರೆಯವರು ಪೊಲೀಸರಿಗೆ ದೂರು ಕೊಟ್ಟಿದ್ದರು.

ಆರ್‍ಡಬ್ಲ್ಯುಎ ಈ ನಾಯಿಗಳನ್ನು ಬೇರೆಡೆಗೆ ಕೊಂಡೊಯ್ಯಲು ಬಯಸಿತ್ತಾದರೂ ರೋಹಿತ್ ಅದನ್ನು ಅಕ್ರಮ ಎಂದಿದ್ದರು. ನಾಲ್ಕು ತಿಂಗಳ ಹಿಂದೆ ನಿವಾಸಿಗಳು ನಾಯಿಗಳನ್ನು ಬೇರೆಡೆಗೆ ಕೊಂಡೊಯ್ಯಲು ಸಹಿ ಅಭಿಯಾನ ಮಾಡಿದಾಗ ಮೊದಲ ಬಾರಿಗೆ ಪೊಲೀಸರು ಆಹಾರ ಕೊಡುವ ವಿರುದ್ಧ ಚಂದ್ರಶೇಖರಗೆ ಎಚ್ಚರಿಕೆ ಕೊಟ್ಟಿದ್ದರು. ಮಾರ್ಚ್ ತಿಂಗಳ ಆರಂಭದಲ್ಲಿ ನೆರೆಮನೆಯ ಸಣ್ಣ ಬಾಲಕಿಯನ್ನು ನಾಯಿಯೊಂದು ಹಿಂಬಾಲಿಸಿ ಬಂದು ಆಕೆ ಓಡಿ ಬಿದ್ದಾಗ ಮತ್ತೊಂದು ಬಾರಿ ಪೊಲೀಸರು ಎಚ್ಚರಿಸಿ ಹೋಗಿದ್ದರು. ಆದರೆ ನೆರೆಮನೆಯ ವ್ಯಕ್ತಿ ನೋಲನ್

ಪಿಂಟೋ ಹೇಳುವ ಪ್ರಕಾರ ಅವರ ಮಗಳಿಗೆ ನಾಯಿ ಕಚ್ಚಿದೆ.

ರೋಹಿತ್ ಅವರ ಕುಟುಂಬವೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದೆ. ನಾಯಿ ಪ್ರೇಮಿಗಳು ಬೀದಿ ನಾಯಿಗಳಿಗೆ ಆಹಾರ ಹಾಕುವಾಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿರುವುದು ಇದೇ ಮೊದಲೇನಲ್ಲ. ಬೀದಿ ನಾಯಿಗಳಿಗೆ ಆಹಾರ ಹಾಕಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎನ್ನುವ ಆರೋಪವಿದೆ.

ಆದರೆ ಬೀದಿ ನಾಯಿಗಳಿಗೆ ಆಹಾರ ಕೊಡುವ ಹಕ್ಕು ಪ್ರಾಣಿಪ್ರಿಯರಿಗಿಲ್ಲವೆ?  ಪೊಲೀಸರು ಅವರನ್ನು ಬಂಧಿಸಿ ಜೈಲಿನಲ್ಲಿಡಬಹುದೆ ? ಭಾರತೀಯ ಹ್ಯೂಮನ್ ಸೊಸೈಟಿ ಇಂಟರ್ನಾಷನಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ವಕೀಲ ಜಯಂಸಿಂಹ ನುಗ್ಗೇಹಳ್ಳಿ ಪ್ರಕಾರ ಬೀದಿ ನಾಯಿಗಳಿಗೆ ಆಹಾರ ಕೊಡುವುದು ಕಾನೂನು ಬಾಹಿರವಲ್ಲ. ಆದರೆ ಕೆಲವು ನಿಯಮಗಳನ್ನು ಪಾಲಿಸಬೇಕು. `ದೆಹಲಿ ಹೈಕೋರ್ಟ್ 2009ರಿಂದ 2010ರ ನಡುವೆ ನೀಡಿರುವ ತೀರ್ಪುಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ಕೊಡುವುದು ಕಾನೂನಿನ ಪರಿಧಿಯೊಳಗಿನ ಕೆಲಸ ಎಂದಿದೆ. ಎಲ್ಲಾ ಜೀವಿಗಳಿಗೂ ಅಕ್ಕರೆ ತೋರಿಸುವುದು ಸಂವಿಧಾನದ ಮೂಲಭೂತ ಕರ್ತವ್ರ್ಯಗಳಲ್ಲಿ ಒಂದು’ ಎನ್ನುತ್ತಾರೆ ಜಯಂಸಿಂಹ.

ಆದರೆ ಜನರು ಹೆಚ್ಚು ಓಡಾಡುವ ಕಡೆಗೆ ಬೀದಿ ನಾಯಿಗಳಿಗೆ ಆಹಾರ ಕೊಡುವಂತಿಲ್ಲ. ಅಲ್ಲದೆ ಜನರು ಕಡಿಮೆ ಇರುವ ಸಮಯದಲ್ಲಿ ಕೊಡಬೇಕು. ಪ್ರಾಣಿ ಕಲ್ಯಾಣ ಮಂಡಳಿಯಿಂದ ಫೀಡರ್ ಕಾರ್ಡ್‍ಗಳನ್ನೂ ಪಡೆದುಕೊಳ್ಳಬಹುದು. ರೋಹಿತ್ ಅಂತಹ ಕಾರ್ಡ್ ಪಡೆದುಕೊಳ್ಳುವ ಬಗ್ಗೆ ಈಗ ಯೋಚಿಸುತ್ತಿದ್ದಾರೆ. ಅದನ್ನು ಪಡೆದ ಮೇಲೆ ಅದು ಹೇಳುವ ನಿಯಮಗಳನ್ನೂ ಪಾಲಿಸಬೇಕಾಗುತ್ತದೆ.

ಹಾಗೆಯೇ ಬೀದಿ ನಾಯಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸುವುದು ಅಕ್ರಮ ಎಂದು 2001ರ ನಿಯಮ ಹೇಳುತ್ತದೆ. ನಾಯಿಯನ್ನು ಸಂತಾನ ಶಕ್ತಿಹರಣಕ್ಕೆ ಕೊಂಡೊಯ್ದ ಮೇಲೆ ಅದೇ ಸ್ಥಳದಲ್ಲಿ ತಂದುಬಿಡಬೇಕು ಎನ್ನುವ ನಿಯಮವಿದೆ.