ಆರ್ಥಿಕ ಅವ್ಯವಸ್ಥೆಯೋ ಆಸೆಯ ಸುಳಿಯೋ

ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಜಮಾ ಆಗಿರುವ ಕಪ್ಪು ಹಣವನ್ನು ತಂದು ನಮಗೆಲ್ಲಾ ತಲಾ 15 ಲಕ್ಷ ರೂ ಹಂಚಲಾಗುತ್ತದೆ ಎಂಬ ಚುನಾವಣಾ ಆಶ್ವಾಸನೆಯಿಂದ ಪ್ರಾರಂಭವಾದ ರಾಜಕೀಯ ಗುರಿ ಈಗಾಗಲೇ ನೋಟುಗಳನ್ನು ರದ್ದುಪಡಿಸಿ ಸಾಮಾನ್ಯ ಜೀವನವನ್ನೇ ಸಂಕಷ್ಟಕ್ಕೆ ಸಿಲುಕಿಸಿರುವುದು ಎಲ್ಲ ಅನುಭವವಾಗಿದೆ. ಅಕ್ರಮ ತೆರಿಗೆದಾರರ ವಿರುದ್ಧ ಸರಕಾರದ ಕಾಳಗಕ್ಕೆ ಅನೇಕರು ಬಲಿಯಾಗಿದ್ದಾರೆ. ಈ ಕದನ ಎಂದಿಗೂ ನಿಲ್ಲದು. ತೆರಿಗೆ ವಂಚಿತ ಕಪ್ಪು ಹಣದ ಸಮಸ್ಯೆಯನ್ನು ಸರಕಾರ ಎದುರಿಸಬೇಕಾದದ್ದು. ಆದರೆ ಇದರ ಹೆಸರಿನಲ್ಲಿ ಅಮಾಯಕರನ್ನು ಸದೆ ಬಡಿಯುವುದು ಸಾಧುವಲ್ಲ.  ನಮ್ಮ ಒಂದು ಕಣ್ಣು ಹೋದರೆ ಕಪ್ಪು ಹಣವಂತರ ಎರಡು ಕಣ್ಣಗಳೂ ಹೋಗುತ್ತವೆ  ಎಂಬ ಅತಿರೇಕದ ಸಿದ್ಧಾಂತ ಸರಿಯಲ್ಲ. ಇದರಿಂದ ಕಾಳ ಸಂತೆಯ ಶ್ರೀಮಂತರು ನಷ್ಟ ಹೊಂದಿದ್ದು ಬಿಟ್ಟರೆ ಇನ್ನೇನೂ ತೊಂದರೆ ಪಟ್ಟಂತೆ ಕಾಣುವುದಿಲ್ಲ. ಕಪ್ಪು ಹಣದ ಸಂಗ್ರಹಕ್ಕೆ ಅನುಕೂಲವಾಗುವಂತೆ ಎರಡು ಸಾವಿರದ ನೋಟುಗಳ ಕಂತೆ  ಕಂತೆಯಾಗಿ ಅಕ್ರಮವಾಗಿ ಶೇಖರಿಸಿರುವುದನ್ನು ದಿನಾ ಟೀವಿ ಪತ್ರಿಕೆಯಲ್ಲಿ ಕಾಣುತ್ತೇವೆ ಅಲ್ಲವೇ
ಅತ್ಯಂತ ಹಳೆಯ  ಅತಿ ಶ್ರೀಮಂತ ಮತ್ತು ಸುಶಿಕ್ಷಿತ ಪ್ರಜಾಪ್ರಭುತ್ವದ ಅಮೆರಿಕದಲ್ಲಿ ಈಗಲೂ ಅತಿ ಕನಿಷ್ಠ ಒಂದು ಸೆಂಟಿನ ನಾಣ್ಯದಿಂದ ಹಿಡಿದು ಇತರೆ ನಾಣ್ಯಗಳ ಮತ್ತು ಹೆಚ್ಚಿನ ಮೌಲ್ಯದ ನೋಟುಗಳ ಚಲಾವಣೆ ಇದೆ. ಅದರೊಂದಿಗೆ ಅಂತರ್ಜಾಲದ ವ್ಯವಹಾರಗಳೂ ನಡೆಯುತ್ತಿವೆ ಹಿಂದುಳಿದ  ಹೆಚ್ಚು ಅನಕ್ಷರಸ್ಥ ಮತ್ತು ಬಡ ಹಳ್ಳಿ ವಾಸಿಗಳ ನಮ್ಮ ದೇಶದಲ್ಲಿ ಇಂತಹ ಕ್ಯಾಶ್ ಲೆಸ್ ಪದ್ಧತಿಯನ್ನು ಅವಲಂಬಿಸುವುದು ವಿವೇಕವಲ್ಲ. ಸಂಪದ್ಭರಿತ ವಹಿವಾಟಿಗೆ ಎಲ್ಲಾ ರೀತಿಯ ವ್ಯವಸ್ಥೆ ಅತ್ಯವಶ್ಯಕ. ಒಂದೇ ಮಂತ್ರದಿಂದ ನಿಶ್ಚಯಿಸುವುದು ಆರ್ಥಿಕ ಮುಗ್ಗಟ್ಟಿಗೆ ಮಾರ್ಗವಾಗುತ್ತದೆ  ಇನ್ನೂ ಸಮಸ್ಯೆಗಳಿರುವ ಡಿಜಿಟಲ್ ತಂತ್ರಜ್ಞಾನವನ್ನು ಪ್ರಚುರಪಡಿಸಿ ಬಲವಂತದಿಂದ ಮುಗ್ಧ ಹಾಗೂ ಅಶಿಕ್ಷಿತ ಬಡವರ ಪರದಾಟಕ್ಕೆ ಎಡೆ ಮಾಡುವುದು ಸಾರ್ಥಕ ಸಾಧನೆಯಾಗಲಾರರು

  • ಅಶೋಕ್ ಸುವರ್ಣ ಎಂ  ಕಡಬ