ಅನಂತ ಹೆಗಡೆ ಅವತಾರ ಪುರುಷನೇ ?

ಶಿರಸಿಯಲ್ಲಿ ಪ್ರಕಾಶ ರೈ ಪ್ರಶ್ನೆ

ನಮ್ಮ ಪ್ರತಿನಿಧಿ ವರದಿ

ಶಿರಸಿ : “ಮುಗ್ಧರ ಸಾವಿನ ಮೇಲೆ ನಿಂತು ರಾಜಕೀಯ ಮಾಡಲಾಗುತ್ತಿದೆ. ಎಲ್ಲ ಪಕ್ಷಗಳನ್ನು ಧಿಕ್ಕರಿಸಬೇಕು. ಎಲ್ಲ ನಾಯಕರನ್ನು ಧಿಕ್ಕರಿಸಬೇಕು. ಬರುವ ಚುನಾವಣೆಯಲ್ಲಿ ದೊಡ್ಡ ರೋಗ ಹಬ್ಬಿಸುವವರನ್ನು ಮೊದಲು ಓಡಿಸಬೇಕು. ಸಣ್ಣ ರೋಗ ಹಬ್ಬಿಸುವವರನ್ನು ನಂತರ ಓಡಿಸಲೇಬೇಕಾಗಿದೆ” ಎಂದು ನಟ, ಚಿಂತಕ ಪ್ರಕಾಶ ರೈ ಹೇಳಿದರು.

ಅವರು ಶನಿವಾರ ಪ್ರೀತಿ ಪದಗಳ ಪಯಣ ಸೌಹಾರ್ದತಾ ನಡಿಗೆ ಹಾಗೂ `ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ರಾಜ್ಯಮಟ್ಟದ ಸಮಾವೇಶದ ಅತಿಥಿಯಾಗಿ ಮಾತನಾಡಿ, “ಹೋದ ವಾರ 2 ಕೊಲೆಗಳು ನಡೆದವು. ಎರಡೂ ಕಡೆಯಿಂದ ಒಟ್ಟೂ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲ ಪಕ್ಷಗಳ ಮುಖಂಡರು ಅವರ ಮನೆಗೆ ಹೋಗುತ್ತಿದ್ದಾರೆ. ಆ ಕುಟುಂಬದವರ ಗೋಳು ಹೇಳತೀರದಾಗಿದೆ. ಆದರೆ ರಾಜಕಾರಣಿಗಳ ನಾಟಕ ಇಲೆಕ್ಷನ್ ಮುಗಿಯುವರೆಗೆ ಮಾತ್ರ ಇರುತ್ತದೆ. ಯಾವ ರಾಜಕೀಯ ನಾಯಕರೂ ಸರಿಯಿಲ್ಲ. ನಾವು ಸರ್ಕಾರವನ್ನು ಪ್ರಶ್ನಿಸುವ ಹಕ್ಕನ್ನು ತೆಗೆದುಕೊಳ್ಳಬೇಕಾಗಿದೆ. ನಾವು ಕೋಮು ಪ್ರಚೋದನೆ ಮಾಡಲು ಬಂದಿಲ್ಲ. ಅದನ್ನು ಮಾಡುವವರು ಬೇರೆಯವರಿದ್ದಾರೆ” ಎಂದರು.

“ಉ ಕ ಸಂಸದ ಮತ್ತು ಕೇಂದ್ರ ಸಚಿವರಿಗೆ ಸಂವಿಧಾನ ಎಂದರೇನು ಗೊತ್ತಿಲ್ಲ. ಸಂವಿಧಾನದಲ್ಲಿ ಆಶಯಗಳಲ್ಲಿ ಸ್ಪಷ್ಟವಾಗಿ ಹಾಕಿದ್ದಾರೆ. ಸಂಸದರು ಕ್ರಿಕೆಟ್ ಆಡಲು ಹೋಗಿ ಫುಟ್ಬಾಲ್ ಆಡುತ್ತಿದ್ದಾರೆ. ಅವರಿಗೆ ಬೇಸಿಕ್ ಎಜ್ಯುಕೇಶನ್ ಇಲ್ಲ. ಇವರನ್ನು ವಿರೋಧಿಸಿದರೆ ನಾನು ಹಿಂದೂ ವಿರೋಧಿ ಅನ್ನುತ್ತಾರೆ, ಇವರೇನು ಅವತಾರ ಪುರುಷರೇ ? ಇವರು ನಿಜವಾಗಿ ಹಿಂದೂಗಳೇ ಎಂಬ ಪ್ರಶ್ನೆ ಕಾಡುತ್ತಿದೆ. ಈ ಭೂಮಿಯ ಮೇಲೆ ಒಂದು ನಂಬಿಕೆಗೆ ಸೇರಿದವರು ಇರಬಾರದು ಎನ್ನುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಇಂತಹ ನಾಲ್ಕೈದು ನಾಯಕರ ವಿರುದ್ಧ ಮಾತನಾಡಿದರೆ ಹಿಂದೂ ವಿರೋಧಿಗಳೆಂದು ಬಿಂಬಿಸಲಾಗುತ್ತಿದೆ. ಕಾಂಗ್ರೆಸ್ ಪರ ಎನ್ನುತ್ತಾರೆ. ಇವರ ಮೇಲೆ ನೈತಿಕ ಸಿಟ್ಟು ಬರುತ್ತದೆ. ಪ್ರತಿಯೊಬ್ಬರೂ ಪ್ರತಿದಿನ ಪ್ರತಿಕ್ಷಣ ಧೈರ್ಯವಾಗಿ ಮಾತನಾಡಬೇಕು. ಮೌನ ನಮ್ಮನ್ನು ಕೊಲ್ಲುತ್ತದೆ. ಹೌದು ಸೌಹಾರ್ದತೆ ಬೇಕು. ಹಾಸ್ಯಪ್ರಜ್ಞೆಯಿಂದ ಅಣುಕಿಸುತ್ತಾ ಇರಬೇಕು. ಇಂದು ದೇಶದಲ್ಲಿನ ಪರಿಸ್ಥಿತಿ ನೋಡಿ ಯುವಕರು ಪ್ರತಿಭಾ ಪಲಾಯನ ಮಾಡುತ್ತಿದ್ದಾರೆ. ಯುವಕರನ್ನು ಅನಗತ್ಯ ರಾಜಕಾರಣಕ್ಕೆ ಬಲಿಯಾಗಿಸುವುದು ನಿಲ್ಲಬೇಕು” ಎಂದರು.

LEAVE A REPLY