ದ ಭಾರತದ ರಾಜ್ಯಗಳ ಒಕ್ಕೂಟ ಸಾಧ್ಯವೇ ?

ಸಂಪತ್ತು ಮತ್ತು ಕೊಡುಗೆಗೆ ಪ್ರತಿಯಾಗಿ ಅಭಿವೃದ್ಧಿ ಪ್ರತಿಫಲ ಪಡೆಯುವ ನಿಟ್ಟಿನಲ್ಲಿ ದಕ್ಷಿಣ ರಾಜ್ಯಗಳ ಒಕ್ಕೂಟ ರಚನೆ ಒಂದು ಉತ್ತಮ ಆಯ್ಕೆಯಾಗಬಹುದು.

  • ತಾರಾ ಕೃಷ್ಣಸ್ವಾಮಿ

ಭಾರತದ ಅರ್ಥವ್ಯವಸ್ಥೆಯ ಶೇ 30ರಷ್ಟು ಆದಾಯ ದಕ್ಷಿಣ ಭಾರತದ ಶೇ 20ರಷ್ಟು ಜನಸಂಖ್ಯೆಯಿಂದ ಬರುತ್ತದೆ.  ದೇಶದ ಜಿಡಿಪಿಯ ಶೇ 25ರಷ್ಟು ದಕ್ಷಿಣ ಭಾರತದಿಂದಲೇ ಉತ್ಪಾದನೆಯಾಗುತ್ತದೆ.  ಕಡಿಮೆ ನಿರುದ್ಯೋಗ, ಹೆಚ್ಚಿನ ಔದ್ಯಮೀಕರಣ ಮತ್ತು ತಲಾ ಜಿಡಿಪಿಯಲ್ಲಿ ಇತರ ಪ್ರಾಂತ್ಯಗಳಿಗಿಂತಲೂ ಹೆಚ್ಚಿನ ಪ್ರಗತಿ ಸಾಧಿಸಿರುವ ದಕ್ಷಿಣ ಭಾರತ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲೂ ಮುಂದಿದೆ.  ಶಿಶು ಅಭಿವೃದ್ಧಿ ಸೂಚ್ಯಂಕ ಉತ್ತರ ಭಾರತಕ್ಕಿಂತಲೂ ಏಳುಪಟ್ಟು ಹೆಚ್ಚಾಗಿದೆ. ಸಾಕ್ಷರತೆ ಶೇ 80ರಷ್ಟಿದೆ. ಶಿಶು ಜನನ ಪ್ರಮಾಣ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಸಮನಾಗಿದೆ. ಇಲ್ಲಿನ ಅಭಿವೃದ್ಧಿ ರಾಜಕಾರಣದ ಫಲವಾಗಿ ಇಂದು ದಕ್ಷಿಣಭಾರತವನ್ನು ಹಾಂಕಾಂಗ್‍ಗೆ ಸಮನಾಗಿಸಿದೆ.

ಇದೇ ವೇಳೆ ಕಳೆದ ಆರು ದಶಕಗಳಲ್ಲಿ ಉತ್ತರ ಭಾರತ ಹಿನ್ನಡೆ ಕಾಣುತ್ತಲೇ ಇದೆ.  ತಲಾ ಆದಾಯದಲ್ಲಿ ದಕ್ಷಿಣ ಭಾರತ ದೇಶವವನ್ನು ಮೇಲ್ಮಟ್ಟಕ್ಕೆ ಏರಿಸಿದ್ದು ಮೊದಲ ಹತ್ತು ಸ್ಥಾನಗಳಲ್ಲಿ ಒಂದಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿನ ಬಡತನ ಉತ್ತರದ ಅರ್ಧದಷ್ಟೂ ಕಾಣುವುದಿಲ್ಲ.

ಇಷ್ಟೆಲ್ಲಾ ಕೊಡುಗೆ ನೀಡುತ್ತಿದ್ದರೂ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರದಿಂದ ಒದಗುವ ನೆರವು ಕೇವಲ ಶೇ 18ರಷ್ಟು ಮಾತ್ರ.

ಹಾಗಾಗಿಯೇ ಹಲವು ವರ್ಷಗಳಿಂದಲೇ ದಕ್ಷಿಣ ಭಾರತದ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ವಿರುದ್ಧ ತಾರತಮ್ಯದ ಆರೋಪ ಮಾಡುತ್ತಲೇ ಬಂದಿದ್ದಾರೆ. ಇದನ್ನು ಸರಿದೂಗಿಸಲು ಜನಸಂಖ್ಯೆ ಹೆಚ್ಚಿಸುವುದೇ ಪರಿಹಾರ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿಯೊಬ್ಬರು ಆಗ್ರಹಿಸಿದ್ದು ವ್ಯಾಪಕ ಚರ್ಚೆಗೀಡಾಗಿತ್ತು.

ತೆಲಂಗಾಣ ಮುಖ್ಯಮಂತ್ರಿ ತಮ್ಮ ರಾಜ್ಯ ಎದುರಿಸುತ್ತಿರುವ ಪರಿಸ್ಥಿತಿಯನ್ನು ದೈನ್ಯತೆಯಿಂದ ವಿವರಿಸಿ ನೆರವು ಪಡೆದರೆ ತಮಿಳುನಾಡು ಮುಖ್ಯಮಂತ್ರಿ ಜಿ ಎಸ್ ಟಿ ಕುರಿತು ತನ್ನ ಹಠಮಾರಿ ಧೋರಣೆ ವ್ಯಕ್ತಪಡಿಸಿದ್ದನ್ನು ಗಮನಿಸಬಹುದು.

ತನ್ನ ಪ್ರಾದೇಶಿಕ ಹಿತಾಸಕ್ತಿಗಳನ್ನು ಮರೆತು, ಅತಿ ಹೆಚ್ಚಿನ ತೆರಿಗೆ ಹಣವನ್ನು ಸಂಗ್ರಹಿಸಿ ಉತ್ತರದ ರಾಜ್ಯಗಳಾದ ಉತ್ತರಪ್ರದೇಶ, ದೆಹಲಿ, ಮಧ್ಯಪ್ರದೇಶ, ಬಿಹಾರ ಮತ್ತಿತರ ಹಿಂದುಳಿದ ರಾಜ್ಯಗಳಿಗೆ ರವಾನಿಸುವ ಮೂಲಕ ದಕ್ಷಿಣದ ರಾಜ್ಯಗಳು ಅತಿಯಾದ ಹೊರೆ ಹೊರುತ್ತಿವೆ.  ಇದಕ್ಕೆ ಪ್ರತಿಯಾಗಿ ದಕ್ಷಿಣದ ರಾಜ್ಯಗಳಿಗೆ ದೊರೆಯುತ್ತಿರುವುದು ಕಡಿಮೆ ಅನುದಾನ ಮತ್ತು ಕೇಂದ್ರದ ನಿರ್ಲಕ್ಷ್ಯ. ಇದರರ್ಥ ಕಡಿಮೆ ತಲಾ ಆದಾಯ ಮತ್ತು ಹೆಚ್ಚಿನ ಜನಸಂಖ್ಯೆ ಇದ್ದರೆ ಹೆಚ್ಚಿನ ಅನುದಾನ ಮತ್ತು ಬಹುಮಾನ. ಇದು ಭಾರತ ಸರ್ಕಾರದ ನೀತಿ. ಇದನ್ನು ದಕ್ಷಿಣ ಭಾರತ ಶುಲ್ಕ ಎನ್ನಲೂಬಹುದು.

ಗಾಯಕ್ಕೆ ಉಪ್ಪು ಸವರಿದಂತೆ ದಕ್ಷಿಣದ ರಾಜ್ಯಗಳು ಕೇಂದ್ರದಿಂದ ಸದಾ ಮಲತಾಯಿ ಧೋರಣೆಯನ್ನೇ ಕಾಣುವಂತಾಗಿದೆ. ಈ ರಾಜ್ಯಗಳ ವೈಶಿಷ್ಟ್ಯತೆಯನ್ನು ಉಳಿಸಿಕೊಳ್ಳಲು ಕೇಂದ್ರದ ನೆರವು ನಗಣ್ಯ ಎನ್ನಬಹುದು. ದಕ್ಷಿಣ ಭಾರತದಿಂದ ದೇಶದ ಅಭಿವೃದ್ಧಿಗೆ ಸಲ್ಲುವ ಕೊಡುಗೆಗೆ ಸಮಾನವಾಗಿ ನಾಲ್ಕು ರಾಜ್ಯಗಳಿಗೆ ಕೇಂದ್ರದಿಂದ ಸ್ವಾಯತ್ತತೆಯ ಆಶ್ವಾಸನೆಯಾಗಲೀ, ಅನುದಾನವಾಗಲೀ ದೊರೆಯುತ್ತಿಲ್ಲ.

ಭಾರತ ಒಂದು ಪವಿತ್ರ ರಾಷ್ಟ್ರ.  ಸಮಸ್ತ ಭಾರತೀಯರಿಗೂ ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಸಾಮಾಜಿಕ ಘನತೆ ದೊರೆತರೆ ದೇಶ ಸುಭಿಕ್ಷವಾಗಿರುತ್ತದೆ. ಮಹಿಳೆಯರು, ದಲಿತರು, ಮುಸ್ಲಿಮರು, ಕ್ರೈಸ್ತರು, ದಕ್ಷಿಣದವರು, ಉತ್ತರದವರು, ಈಶಾನ್ಯದ ಜನತೆ, ಪಶ್ಚಿಮ ರಾಜ್ಯಗಳ ಜನತೆ, ಉತ್ತರ ಭಾರತದ ಜನತೆ ಎಲ್ಲರೂ ಒಂದುಗೂಡಿ ಮುನ್ನಡೆದರೆ ದೇಶ ಸ್ವರ್ಗವಾಗುತ್ತದೆ.

ಆದರೆ ಈ ದೇಶದಲ್ಲಿ ಸಂಪನ್ಮೂಲಗಳ ಹಂಚಿಕೆ ಸಮಾನವಾಗಿಲ್ಲ. ಇಂದಿಗೂ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ. ತಾರತಮ್ಯದ ರಾಜಕೀಯ, ಅದಕ್ಷ ಆಡಳಿತ ವ್ಯವಸ್ಥೆ ಮತ್ತು ಪೂರ್ವಗ್ರಹಗಳ ಪರಿಣಾಮವಾಗಿ ರಾಜ್ಯಗಳು ಅಭಿವೃದ್ಧಿಯಿಂದ ವಂಚಿತವಾಗುತ್ತಿವೆ.

ನಗರ ಕೇಂದ್ರೀಕರಣ ಪರಾಕಾಷ್ಠೆ ತಲುಪುತ್ತಿದ್ದು ಎಲ್ಲವೂ ಸಹ ದೆಹಲಿಯತ್ತಲೇ ಬೆಟ್ಟು ಮಾಡುವ ನೀತಿ ಅನುಸರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಬಲ ಪ್ರಾದೇಶಿಕ ಸರ್ಕಾರಗಳ ಅವಶ್ಯಕತೆ ಹೆಚ್ಚಾಗಿಯೇ ಇದೆ.

ಸಂಯುಕ್ತ ರಾಜ್ಯ ವ್ಯವಸ್ಥೆಯನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ಭಾರತದ ಪ್ರಭುತ್ವ ಮತ್ತು ಸರ್ಕಾರಗಳು ವಿಫಲವಾಗಿರುವುದು ಸ್ಪಷ್ಟವಾಗಿದೆ. ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ, ರಾಜ್ಯಗಳ ಅಖಂಡತೆ, ಕಾಶ್ಮೀರದಂತಹ ವಿವಾದ ಮತ್ತು ಈಶಾನ್ಯ ರಾಜ್ಯಗಳ ಕೆಲವು ಸಮಸ್ಯೆಗಳನ್ನು ಹೊರತುಪಡಿಸಿದಂತೆ ರಾಜ್ಯಗಳಿಗೆ ತಮ್ಮದೇ ಆದ ಆಡಳಿತ ನಡೆಸಲು ಮತ್ತು ಸಂಪನ್ಮೂಲಗಳನ್ನು ಬಳಸಲು ಅವಕಾಶ ನೀಡುವುದು ಉಚಿತ.

ಈ ಸಂದರ್ಭದಲ್ಲಿ ದಕ್ಷಿಣದ ಐದೂ ರಾಜ್ಯಗಳು ಒಂದು ಒಕ್ಕೂಟವನ್ನು ಸ್ಥಾಪಿಸುವ ಅವಶ್ಯಕತೆ ಇದೆ. ತಮ್ಮದೇ ಆದ ರಾಜಕೀಯ ಪಕ್ಷ ಮತ್ತು ಅಧಿಕಾರ ರಾಜಕಾರಣವನ್ನು ಹೊಂದಿದ್ದರೂ ದಕ್ಷಿಣದ ರಾಜ್ಯಗಳು ಒಕ್ಕೂಟದ ಮೂಲಕ ತಮ್ಮ ಅಭಿವೃದ್ಧಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಬಹುದು. ದಕ್ಷಿಣ ರಾಜ್ಯಗಳ ಸಂಪತ್ತು ಮತ್ತು ಕೊಡುಗೆಗೆ ಪ್ರತಿಯಾಗಿ ಅಭಿವೃದ್ಧಿ ಪ್ರತಿಫಲ ಪಡೆಯುವ ನಿಟ್ಟಿನಲ್ಲಿ ದಕ್ಷಿಣ ರಾಜ್ಯಗಳ ಒಕ್ಕೂಟ ರಚನೆ ಒಂದು ಉತ್ತಮ ಆಯ್ಕೆಯಾಗಬಹುದು.