ಚಿತ್ರಾಪುರ ದುರ್ಗಾಪರಮೇಶ್ವರಿ ದೇವಳದಲ್ಲಿ ಭಾರೀ ಅವ್ಯವಹಾರ

ಡೀಸಿಗೆ ಭಕ್ತರ ದೂರು

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಚಿತ್ರಾಪುರದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ನಡೆಯುತ್ತಿದೆಯೆನ್ನಲಾದ ಭಾರೀ ಅವ್ಯವಹಾರಗಳ ಬಗ್ಗೆ ಭಕ್ತಾದಿಗಳ ನಿಯೋಗವೊಂದು ಜಿಲ್ಲಾಧಿಕಾರಿಗೆ ದೂರಿದೆ. ಈ ಒಂದು ಶತಮಾನದಷ್ಟು ಹಳೆಯದಾದ ದೇವಳದಲ್ಲಿ ನೂರು ಕೋಟಿ ರೂಪಾಯಿಗೂ ಅಧಿಕ ಹಣ ದುರುಪಯೋಗವಾಗಿದೆಯೆಂದು ಆರೋಪಿಸಲಾಗಿದೆ.

ದೇವಳಕ್ಕೆ ಸೇರಿದ  ಹಲವಾರು ಕೋಟಿ ಮೌಲ್ಯದ ಆಸ್ತಿಯನ್ನು ದೇವಳದ ಆಡಳಿತದ ಮೇಲೆ ನಿಯಂತ್ರಣ ಹೊಂದಿದ ಮಹಿಳೆಯೊಬ್ಬರು ಮಾರಾಟ ಮಾಡಿದ್ದಾರೆಂದು ನರೇಂದ್ರ ಕುಲಾಲ್ ಎಂಬವರ ನೇತೃತ್ವದ ನಿಯೋಗ ತನ್ನ ದೂರಿನಲ್ಲಿ ಆರೋಪಿಸಿದೆ.

“ಜಿಲ್ಲೆಯ ಏಳು ದುರ್ಗಾ ದೇವಸ್ಥಾನಗಳಲ್ಲಿ ಒಂದಾದ ಈ ದೇವಸ್ಥಾನದ ಬಳಿ ಒಂದು ಕಾಲದಲ್ಲಿ ನೂರಾರು ಎಕರೆ ಜಮೀನಿತ್ತು. ಆದರೆ ಈಗ ಮದುವೆ ಹಾಲ್ ಕಟ್ಟಿಸಲೂ ಭೂಮಿಯಿಲ್ಲವಾಗಿದೆ. ದೇವಳದ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.

“ನಕಲಿ ರಶೀದಿ ಮೂಲಕವೂ ಅವ್ಯವಹಾರ ನಡೆಸಲಾಗಿದೆ. ದೇಣಿಗೆ ನೀಡುವರಿಗೆ ರಶೀದಿ ನೀಡಲಾಗುತ್ತಿದ್ದರೂ ಕಂಪ್ಯೂಟರೀಕೃತ ಬಿಲ್ಲಿಂಗ್ ವ್ಯವಸ್ಥೆಯಿಲ್ಲ. ದೇವಳಕ್ಕೆ ಯಾವುದೇ  ರೀತಿಯ ಸಂಬಂಧವಿಲ್ಲದ ಮಹಿಳೆಯೊಬ್ಬರು ತಮ್ಮ ಸಂಬಂಧಿಯೊಬ್ಬರನ್ನೇ ದೇವಳದ ವ್ಯವಹಾರ ನೋಡಿಕೊಳ್ಳಲು ನೇಮಿಸಿದ್ದಾರೆ. ಆಕೆಯ ಉದ್ಧಟತನದ ಧೋರಣೆಯಿಂದಾಗಿ ದೇವಳದಲ್ಲಿ ನಡೆಯಬೇಕಾದ ಹಲವಾರು ಆಚರಣೆಗಳು ನಡೆಯುತ್ತಿಲ್ಲ, ನವರಾತ್ರಿ ಸಂದರ್ಭ ಚಂಡಿಕಾಯಾಗ ಮತ್ತು ಅನ್ನಸಂತರ್ಪಣೆ ಹೊರತಾಗಿ ಯಾವುದೇ ವಿಶೇಷ ಕಾರ್ಯಕ್ರಮಗಳು ನಡೆದಿಲ್ಲ. ದೇವಳದ ದೀಪಾಲಂಕಾರಕ್ಕೆ  ಹಾಗೂ ಹೂವಿನ ಅಲಂಕಾರಕ್ಕೆ ಭಕ್ತಾದಿಗಳಿಂದಲೇ ಬಲವಂತವಾಗಿ ಹಣ ಸಂಗ್ರಹಿಸಲಾಗುತ್ತಿದೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.

“ಮುಜರಾಯಿ ಇಲಾಖೆಯು ಈ ದೇವಳವನ್ನು `ಎ’ ಕೆಟಗರಿ ದೇವಸ್ಥಾನವೆಂದು ಪರಿಗಣಿಸಿದೆ. ದೇವಳದಲ್ಲಿ ಆಡಳಿತ ಮಂಡಳಿಯಿಲ್ಲ, ವಾರ್ಷಿಕ ಮಹಾಸಭೆಯೂ ನಡೆಯುತ್ತಿಲ್ಲ. ಯಾವದೇ ಅಭಿವೃದ್ಧಿ ಕಾರ್ಯವೂ ನಡೆಯುತ್ತಿಲ್ಲ. ದೇವಳದ  ಹಲವಾರು ನವೀಕರಣ ಸಂಬಂಧಿತ ಕಾಮಗಾರಿಗಾಗಿ ರೂ 2 ಕೋಟಿ ಪ್ರಸ್ತಾವನೆ ಮಾಡಲಾಗಿದೆಯಾದರೂ ದೇವಳದ ಮುಖ್ಯಸ್ಥ  ಹಣದ ಕೊರತೆಯಿದೆಯೆಂದು ಹೇಳಿ ಅದನ್ನು ತಿರಸ್ಕರಿಸಿದ್ದಾರೆ” ಎಂದು ಆರೋಪಿಸಲಾಗಿದೆ.

ಈ ಬಗ್ಗೆ  ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತೆ ಪ್ರಮೀಳಾ ಅವರನ್ನು ಸಂಪರ್ಕಿಸಿದಾಗ ಹಲವಾರು ದೂರುಗಳು ಬಂದಿವೆಯೆಂದು ಹೇಳಿದ ಅವರು ಸ್ಥಳೀಯ ಪೊಲೀಸರಿಗೆ   ದೂರಿನ ಸತ್ಯಾಸತ್ಯತೆಯನ್ನು ಪರಾಮರ್ಶಿಸಲು ಹೇಳಲಾಗಿದ್ದು ಆದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.