ಬಜಗೋಳಿ ಸಿಎ ಬ್ಯಾಂಕಿನಲ್ಲಿ ಅವ್ಯವಹಾರ ಪ್ರಕರಣ : ದೂರು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಮಾಳ ವ್ಯವಸಾಯಿಕ ಸಹಕಾರಿ ಬ್ಯಾಂಕಿನ ಬಜಗೋಳಿ ಶಾಖೆಯಲ್ಲಿ ಕಳೆದ 2002ರಿಂದ 2016ರವರೆಗೆ ಗುಮಾಸ್ತನಾಗಿ ಕೆಲಸ ನಿರ್ವಹಿಸುತ್ತಿದ್ದ ಮಾಳ ಗ್ರಾಮದ ಮಂಜಲ್ತಾರ್ ನಿವಾಸಿ ಪುಷ್ಪರಾಜ್ ಶೆಟ್ಟಿ ಎಂಬವರು ಬ್ಯಾಂಕಿನಿಂದ ಸಮಾರು 2,87,78,812 ರೂ ವಂಚಿಸಿ ಬ್ಯಾಂಕಿಗೆ ನಷ್ಟವನ್ನುಂಟು ಮಾಡಿದ್ದಲ್ಲದೇ, ತನ್ನ ಅವ್ಯವಹಾರದ ದಾಖಲೆಗಳನ್ನು ಮರೆಮಾಚಲು ಬ್ಯಾಂಕಿನ ಕಂಪ್ಯೂಟರಗಳಲ್ಲಿನ ದಾಖಲೆಗಳನ್ನು ಅಳಿಸಿ ವಂಚಿಸಿದ್ದಾರೆ ಎಂದು ಮಾಳ ಸಿಎ ಬ್ಯಾಂಕಿನ  ಕೆರ್ವಾಶೆ ಶಾಖೆಯ ಮ್ಯಾನೇಜರ್ ಜಯಕುಮಾರ್ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಕಳೆದ ವರ್ಷ ಬಜಗೋಳಿ ಶಾಖೆಯಲ್ಲಿ ಸುಮಾರು ರೂ 3 ಕೋಟಿಗೂ ಅಧಿಕ ಹಣ ಅವ್ಯವಹಾರ ನಡೆದಿದೆ ಎಂದು ಆಂತರಿಕ ಲೆಕ್ಕ ಪರಿಶೋಧನೆಯಲ್ಲಿ ಬಯಲಾಗಿದ್ದು ಈ ಕುರಿತು ಕರಾವಳಿ ಅಲೆ ಪ್ರಥಮವಾಗಿ ವಿಸ್ತ್ರತವಾಗಿ ವರದಿ ಮಾಡಿತ್ತು. ಬಳಿಕ ಬ್ಯಾಂಕಿನ ವಾರ್ಷಿಕ

ಮಹಾಸಭೆಯಲ್ಲೂ ಆಡಳಿತ ಮಂಡಳಿಯ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅಂದಿನ ಸಭೆಯಲ್ಲಿ ಬ್ಯಾಂಕಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪುಷ್ಪರಾಜ್ ಶೆಟ್ಟಿಯನ್ನು ಅಮಾನತುಗೊಳಿಸಿ ಬಳಿಕ ತನಿಖೆಗೆ ಆದೇಶಿಸಲಾಗಿತ್ತು. ಆದರೆ ರೂ 3 ಕೋಟಿಗೂ ಮಿಕ್ಕಿ ನಡೆದಿದೆ ಎನ್ನಲಾದ ಈ ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ಸಾಗಿದೆ ಎನ್ನುವುದು ತಿಳಿದಿಲ್ಲ. ತನಿಖೆ ಎನ್ನುವುದು ಕೇವಲ ಬ್ಯಾಂಕಿನ ಗ್ರಾಹಕರ ಹಾಗೂ ಸಾರ್ವಜನಿಕರ ಕಣ್ಣೊರೆಸುವ ತಂತ್ರವೆಂದೇ ಹೇಳಲಾಗುತ್ತಿದೆ.