ಪ್ಲೇ-ಆಫ್ ಲೆಕ್ಕಾಚಾರಕ್ಕೆ ಸಂಕಟ ತಂದ ಕಿಂಗ್ಸ್ ಇಲೆವೆನ್ ಪಂಜಾಬ್

  • ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ಗ್ಲೇನ್ ಮ್ಯಾಕ್ಸವೆಲ್ ಸಾರಥ್ಯದ ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇ-ಆಫ್ ಲೆಕ್ಕಾಚಾರಕ್ಕೆ ಸಂಕಟ ತಂದಿದೆ. ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ 51ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಅವರದೇ ಗುಹೆಯಲ್ಲಿ  ಕಿಂಗ್ಸ್ ಪಂಜಾಬ್ ಹೆಡೆಮುರಿ ಕಟ್ಟಿ ಹಾಕಿ ಪ್ಲೇ-ಆಫ್ ಹಾದಿಯತ್ತ ಭರವಸೆ ಮೂಡಿಸಿದೆ. ಬಹುಶಃ  ನಿನ್ನೆಯ ಈ ಗೆಲುವು ಕಿಂಗ್ಸ್ ಪಂಜಾಬಗೆ ಮರುಜನ್ಮ ನೀಡಿದೆ.

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ತನ್ನ ಅಮೋಘ ಆಟದ ಮೂಲಕ  ಪ್ಲೇ-ಆಫ್ ಪ್ರವೇಶವನ್ನು ಮುಂಬೈ ಇಂಡಿಯನ್ಸ್ ಈಗಾಗಲೇ  ಖಚಿತಪಡಿಸಿಕೊಂಡಿದೆ.  ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮುಂಬೈ ತಂಡ ನಿನ್ನೆ  ನಡೆದ ಪಂದ್ಯದಲ್ಲೂ ಗೆಲುವನ್ನು ಪಡೆಯುವ ವಿಶ್ವಾಸದಲ್ಲಿತ್ತು. ಆದರೆ, ಕೊನೆಯ ಓವರ್ ನಲ್ಲಿ  ಪಂಜಾಬ್ ತಂಡದ ಭರವಸೆಯ ವೇಗದ ಬೌಲರ್ ಮೋಹಿತ್ ಶರ್ಮ ಅವರ ನಿಯಂತ್ರಿತ ಬೌಲಿಂಗ್ ಆತಿಥೇಯ ಮುಂಬೈ ತಂಡಕ್ಕೆ ಸೋಲನ್ನು ತಂದುಕೊಟ್ಟಿತು.

ಖಂಡಿತವಾಗಿಯೂ ಈ ಸೋಲನ್ನು ಮುಂಬೈ ಇಂಡಿಯನ್ಸ್ ನಿರೀಕ್ಷಿಸಿರಲಿಲ್ಲ. ಘಟಾನುಘಾಟಿ ಬ್ಯಾಟ್ಸಮನ್ನರ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಮುಂಬೈ ಇಂಡಿಯನ್ಸ್ ಹೋರಾಟಕಾರಿ ಮನೋಭಾವದಿಂದಲೇ ಹಲವು ಪಂದ್ಯಗಳನ್ನು ಗೆದ್ದಿದೆ. ಈ ಪಂದ್ಯವನ್ನು ಆಡುವ ಮೊದಲು 12 ಪಂದ್ಯಗಳ ಪೈಕಿ 9ರಲ್ಲಿ ಮುಂಬೈ ತಂಡ ಗೆದ್ದು ತನ್ನ ಬಲಿಷ್ಠತೆಯನ್ನು ಮೆರೆದಿತ್ತು.  ಹಾಗಾಗಿ  ಕಿಂಗ್ಸ್ ಪಂಜಾಬ್ ವಿರುದ್ಧವು ಗೆಲುವಿನ ಆಟ ಮುಂದುವರಿಸುವ ಮುಂಬೈ ಇಂಡಿಯನ್ಸ್ ಪ್ಲಾನ್ ಕೈಕೊಟ್ಟಿದೆ.

ಮುಂಬೈ ನಾಯಕ ರೋಹಿತ್ ಶರ್ಮ ಟಾಸ್ ಗೆದ್ದು ಎದುರಾಳಿ ಕಿಂಗ್ಸ್ ಪಂಜಾಬ್ ತಂಡಕ್ಕೆ ಬ್ಯಾಟಿಂಗ್ ನಡೆಸುವ ಅವಕಾಶ ನೀಡಿದ್ದು ಸರಿಯಾದ ನಿರ್ಧಾರವಾಗಿರಲಿಲ್ಲ. ಬ್ಯಾಟಿಂಗಿಗೆಚ್ಚು ಸ್ಪಂದಿಸುವ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಪಂಜಾಬ್ ಆಟಗಾರರು ರೋಹಿತ್ ಶರ್ಮರ ಲೆಕ್ಕಾಚಾರವನ್ನು ಬುಡಮೇಲು ಮಾಡಿದರು.

ಅಬ್ಬರಿಸಿದ ಸಹಾ

ಟೂರ್ನಿಯಲ್ಲಿ ಮೊದಲ ಬಾರಿಗೆ ಆರಂಭಿಕ ದಾಂಡಿಗರಾಗಿ ಕಣಕ್ಕಿಳಿದ ವೃದ್ದಿಮಾನ್ ಸಹಾ ಪವರ್ ಹಿಟ್ಟಿಂಗ್ ಬ್ಯಾಟಿಂಗ್ ನಡೆಸಿದರು. ಕೇವಲ 55 ಎಸೆತಗಳಲ್ಲಿ ಅಜೇಯ 93 ರನ್ ಹೊಡೆದ ಇವರು ತನ್ನ ತಂಡದ ಮೊತ್ತವನ್ನು 230ಕ್ಕೇರಿಸಿದರು. ವೇಗವಾಗಿ ಬ್ಯಾಟ್ ಬೀಸಿದ ವೃದ್ದಿಮಾನ್ ಸಹಾ ಅವರ ಅಬ್ಬರದ ಬ್ಯಾಟಿಂಗ್ ಮುಂದೆ ಮುಂಬೈ ಬೌಲರುಗಳು ಕಂಗಾಲಾಗಿಬಿಟ್ಟರು.

ಕಿಂಗ್ಸ್ ಪಂಜಾಬ್ ತಂಡದ ಗುರಿಯನ್ನು ಮುಂಬೈ ಇಂಡಿಯನ್ಸ್ ಸುಲಭವಾಗಿ ಬೆನ್ನತ್ತುವ ಸೂಚನೆಯನ್ನು ಆರಂಭದಲ್ಲೇ ನೀಡಿತು. ಲೆಂಡ್ಲೆ ಸಿಮೊನ್ಸ್ (59 ರನ್) ಹಾಗೂ ಪಾರ್ಥಿವ್ ಪಟೇಲ್ (38 ರನ್) ಉತ್ತಮ ಆರಂಭ ನೀಡಿದರು. ಆದರೆ, ಇವರಿಬ್ಬರು ಔಟಾದ ಬಳಿಕ ರನ್ ಗತಿ ಕ್ಷೀಣಿಸಿತು. ಪೆÇಲಾರ್ಡ್-ಹಾರ್ದಿಕ್ ಪಾಂಡ್ಯಾ ಜಯದ ಭರವಸೆ ಮೂಡಿಸಿದರು. ಪಾಂಡ್ಯಾ ವಿಕೆಟ್ ಪತನದ ನಂತರ ಪೆÇಲಾರ್ಡ್ ಕ್ರೀಸಿನಲ್ಲಿದ್ದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

ಮೋಹಿತ್ ಮ್ಯಾಜಿಕ್ ಸ್ಪೆಲ್

ಮುಂಬೈ ತಂಡಕ್ಕೆ ಕೊನೆಯ ಓವರಿನಲ್ಲಿ  ಗೆಲ್ಲಲು 15 ರನ್ ಅವಶ್ಯಕತೆ ಇತ್ತು. ಮೋಹಿತ್ ಶರ್ಮ ಎಸೆದ ಕೊನೆಯ ಓವರಿನ ಮೊದಲ ಲೆನ್ತ್ ಬಾಲ್ ಎಸೆತದಲ್ಲಿ ಹರ್ಭಜನ್ ಸಿಂಗ್ 1 ರನ್ ಗಳಿಸಿದರು. ಎರಡನೇ ಸ್ಲೋ ಲೆನ್ತ್ ಎಸೆತಕ್ಕೆ ಪೆÇಲಾರ್ಡ್ ಸಿಕ್ಸರ್ ಬಾರಿಸಿದರು. ಮೂರನೇ ಫುಲ್ ಟಾಸ್ ಎಸೆತ,  ನಾಲ್ಕನೇ ಯಾರ್ಕರ್ ಎಸೆತ ಹಾಗೂ ಐದನೇ ಸ್ಲೋ ಯಾರ್ಕರ್ ಎಸೆತದಲ್ಲಿ ಪೆÇಲಾರ್ಡ್ ಒಂದೂ ರನ್ ಗಳಿಸಲಿಲ್ಲ. ಮೋಹಿತ್ ಎಸೆದ ಅಂತಿಮ ಯಾರ್ಕರ್ ಎಸೆತದಲ್ಲಿ ಕೇವಲ ಒಂದು ರನ್ ಗಳಿಸಿದ ಪೆÇಲಾರ್ಡ್  ಅಸಹಾಯಕರಾಗಿ ಮುಂಬೈ ಇಂಡಿಯನ್ಸಗೆ 7 ರನ್ ಸೋಲನ್ನು ತಂದುಕೊಟ್ಟರು .

ಅಂತೂ ಬಲಿಷ್ಠ ಮುಂಬೈ ತಂಡವನ್ನು ಸೋಲಿಸಿದ ಕಿಂಗ್ಸ್ ಪಂಜಾಬ್ ಪ್ಲೇ-ಆಫ್ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುವ ಸೂಚನೆ ನೀಡಿದೆ. ಒಂದುವೇಳೆ ಮೇ-13ರಂದು ನಡೆಯುವ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ತಂಡ ಸೋತು, ಮುಂದಿನ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್ ತಂಡ ರೈಸಿಂಗ್ ಪುಣೆ ತಂಡದ ವಿರುದ್ಧ ಗೆದ್ದರೆ ಪ್ಲೆ-ಆಫ್ ಹಂತಕ್ಕೆ ತಲುಪುವ ಹಾದಿ ಸುಗಮವಾಗಬಹುದು.