ಖುರೇಷಿ ಪ್ರಕರಣ ವಿಚಾರಣೆಗೆ ತನಿಖಾಧಿಕಾರಿ ಶೀಘ್ರ ನೇಮಕ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವಿಚಾರಣೆ ನೆಪದಲ್ಲಿ ವಶಕ್ಕೆ ಪಡೆದುಕೊಂಡ ಅಹ್ಮದ್ ಖುರೇಷಿ ಮೇಲೆ ಸಿಸಿಬಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಶೀಘ್ರವೇ ತನಿಖಾಧಿಕಾರಿಯನ್ನು ನೇಮಿಸಲಾಗುವುದು ಎಂದು ಸಚಿವ ಯು ಟಿ ಖಾದರ್ ತಿಳಿಸಿದರು.

ಸೋಮವಾರ ಸುದ್ದಿಗಾರರಲ್ಲಿ ಮಾತಾಡಿದ ಖಾದರ್, ನಾನು ಯಾರನ್ನೂ ಒಂದು ವರ್ಗಕ್ಕೆ ಸೀಮಿತರನ್ನಾಗಿ ನೋಡಿಲ್ಲ. ಈ ಹಿಂದೆ ಹಿಂದೂ ಸಂಘಟನೆ ಕಾರ್ಯಕರ್ತನ ಸಾವಿನ ಪ್ರಕರಣಕ್ಕೂ ಖುರೇಷಿ ಸಾವಿನ ಪ್ರಕರಣಕ್ಕೂ ವ್ಯತ್ಯಾಸವಿದೆ. ಅದನ್ನು ಇದರೊಂದಿಗೆ ಹೋಲಿಕೆ ಮಾಡಲಾಗದು ಎಂದು ತಾನು ಆಸ್ಪತ್ರೆಗೆ ಭೇಟಿ ಕೊಟ್ಟಿರುವುದನ್ನು ಸಮರ್ಥಿಸಿಕೊಂಡರು.

ಈ ಪ್ರಕರಣದಲ್ಲಿ ವಿನಾಕಾರಣ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಎಲ್ಲರೂ ವಿವಾದವನ್ನು ಬಗೆಹರಿಸುವುದಕ್ಕೆ ನೋಡುತ್ತಾರೆ. ಅದೇ ರೀತಿ ನಾನೂ ಕೂಡಾ ಖುರೇಷಿ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗಿದ್ದೆ. ಆದರೆ ಕೆಲವು ಸಂಘಟನೆಗಳು ನನ್ನನ್ನು ಟಾರ್ಗೆಟ್ ಮಾಡಿಕೊಂಡು ವಿವಾದ ಎಬ್ಬಿಸುತ್ತಿವೆ ಎಂದರು. ಆಸ್ಪತ್ರೆಗೆ ಭೇಟಿ ಕೊಟ್ಟಿರುವ ನಾನು ಖುರೇಷಿ ಹತ್ತಿರವೂ ಹೋಗದೇ ನೇರವಾಗಿ ವೈದ್ಯಾಧಿಕಾರಿಗಳ ಬಳಿಗೆ ಹೋಗಿ ಆತನ ಆರೋಗ್ಯದ ವಿಚಾರದ ಬಗ್ಗೆ ವಿಚಾರಿಸಿದ್ದೇನೆ. ವೈದ್ಯರು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಖುರೇಷಿ ಸಹೋದರ ಆತ ಯಾವುದೇ ಗಲಭೆ ಪ್ರಕರಣಗಳಲ್ಲಿ, ಸಂಘಟನೆಗಳಲ್ಲಿ ಗುರುತಿಸಿ ಕೊಂಡಿರಲಿಲ್ಲ ಎಂದು ಹೇಳಿದ್ದರು. ಹೀಗಾಗಿ ನಾನು ಅಮಾಯಕರಿಗೆ ಅನ್ಯಾಯವಾಗಬಾರದು ಎನ್ನುವ ನೆಲೆಯಲ್ಲಿ ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದುಕೊಂಡಿದ್ದೇನೆ ಎಂದರು.ಪೊಲೀಸ್ ಇಲಾಖೆಯನ್ನು ಯಾವತ್ತಿಗೂ ಅನುಮಾನದ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಪೊಲೀಸ್ ಇಲಾಖೆ ಪಕ್ಷಪಾತವಾಗಿ ಕೆಲಸ ಮಾಡುತ್ತಿದೆ ಎನ್ನುವುದು ತಪ್ಪು ಎಂದ ಖಾದರ್, ಪೊಲೀಸರು ಮಾಡುವ ಕಾರ್ಯವೈಖರಿಯಿಂದ ಜನಸಾಮಾನ್ಯರು ಯಾವುದೇ ಚಿಂತೆ ಇಲ್ಲದೇ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದಾರೆ ಎಂದು ಪುಟ್ಟ ಭಾಷಣ ಮಾಡಿದರು.ಪೊಲೀಸ್ ಇಲಾಖೆಯಲ್ಲಿ ಕೇಸರೀಕರಣದ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಖಾದರ್, ಇಲಾಖೆಯಲ್ಲಿ ಒಂದೆರಡು ಪೊಲೀಸರು ಅಂತಹ ಮನೋಭಾವವನ್ನು ಪ್ರದರ್ಶಿಸಿದರೆ ಅಥವಾ ವಿವಾದಗಳು ಹುಟ್ಟಿಕೊಂಡರೆ ಅದನ್ನು ಹಿರಿಯ ಅಧಿಕಾರಿಗಳು ಕೂಡಲೇ ಮಧ್ಯೆ ಪ್ರವೇಶಿಸಿ ಸರಿಪಡಿಸಬೇಕು. ಅದನ್ನು ಬಿಟ್ಟು ಇಡೀ ಪೊಲೀಸ್ ಇಲಾಖೆಯನ್ನು ಅನುಮಾನದ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದರು.