ಗುರುತ್ವಾಕರ್ಷಣೆಯ ಸೂತ್ರ ಮೊದಲು ಕಂಡುಹಿಡಿದಿದ್ದು ನ್ಯೂಟನ್ ಅಲ್ಲ , 2ನೇ ಬ್ರಹ್ಮಗುಪ್ತ ಎಂದ ರಾಜಸ್ಥಾನ ಶಿಕ್ಷಣ ಸಚಿವ

ಜೈಪುರ್ : ಐಸಾಕ್ ನ್ಯೂಟನ್ ಗುರುತ್ವಾಕರ್ಷಣೆಯ ಸೂತ್ರ ಕಂಡು ಹಿಡಿಯುವ ಒಂದು ಸಾವಿರ ವರ್ಷಗಳಷ್ಟು ಮೊದಲೇ ಅದನ್ನು ಎರಡನೇ ಬ್ರಹ್ಮಗುಪ್ತ ಕಂಡು ಹಿಡಿದಿದ್ದ ಎಂದು ರಾಜಸ್ಥಾನದ ಶಿಕ್ಷಣ ಸಚಿವ ವಸುದೇವ್ ದೇವ್ನಾನಿ ಹೇಳಿಕೊಂಡಿದ್ದಾರೆ.

ರಾಜಸ್ಥಾನ ವಿಶ್ವವಿದ್ಯಾಲಯದ 72ನೇ ಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ದೇವ್ನಾನಿ ತಾವು ಹೇಳಿದ ವಿಚಾರವನ್ನು ಇನ್ನೂ ಶಾಲೆಗಳ ಪಠ್ಯದಲ್ಲಿ ಸೇರಿಸಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ. “ಗುರುತ್ವಾಕರ್ಷಣೆಯ

ಸೂತ್ರವನ್ನು ನ್ಯೂಟನ್ ಆವಿಷ್ಕರಿಸಿದ್ದರೆಂದು ನಾವು ಬಾಲ್ಯದಿಂದಲೂ ಓದಿಕೊಂಡು ಬಂದಿದ್ದೇವೆ. ಆದರೆ ವಾಸ್ತವದಲ್ಲಿ ಭಾರತದ ಖಗೋಳಶಾಸ್ತ್ರಜ್ಞರೊಬ್ಬರು ಅದನ್ನು ಮೊದಲು ಕಂಡು ಹಿಡಿದಿದ್ದರು ಎಂದು ಇತಿಹಾಸವನ್ನು ಅವಲೋಕಿಸಿದಾಗ ತಿಳಿದುಬರುತ್ತದೆ” ಎಂದು ದೇವ್ನಾನಿ ಹೇಳಿದ್ದಾರೆ. ತಮ್ಮ ಹೇಳಿಕೆಗೆ ತೀವ್ರ ಟೀಕೆಗಳನ್ನೆದುರಿಸಿದ ಸಚಿವ ತಮ್ಮ ಟೀಕಾಕಾರರಿಗೆ ಬ್ರಹ್ಮಗುಪ್ತ ಬರೆದಿರುವ ಕೃತಿಗಳನ್ನು ಓದಿ ನಂತರ ಪ್ರತಿಕ್ರಿಯಿಸುವಂತೆ ಹೇಳಿದ್ದಾರೆ.

ಆದರೆ ಇತಿಹಾಸಕಾರರು ದೇವ್ನಾನಿ ಅವರ ಹೇಳಿಕೆಯನ್ನು ಭಾಗಶಃ ಒಪ್ಪಿಕೊಂಡಿದ್ದಾರೆ. ರಾಜಸ್ಥಾನದ ಇತಿಹಾಸ ವಿಭಾಗದ ಮುಖ್ಯಸ್ಥ ಕೆ ಜಿ ಶರ್ಮ ಅವರು, ಬ್ರಹ್ಮಸ್ಫುಟ ಸಿದ್ಧಾಂತ ಎಂಬ ಬ್ರಹ್ಮಗುಪ್ತನ ಕೃತಿಯಲ್ಲಿನ ಭಾಗವೊಂದನ್ನು ಉಲ್ಲೇಖಿಸುತ್ತಾ ಅದರಲ್ಲಿ “ನೀರು ಹರಿಯುವುದು ಪ್ರಕೃತಿ ಸ್ವಭಾವವಾಗಿರುವಂತೆ ವಸ್ತುಗಳನ್ನು ತನ್ನತ್ತ ಆಕರ್ಷಿಸುವುದು ಭೂಮಿಯ ಪ್ರಕೃತಿಯಾಗಿರುವುದರಿಂದ ಒಂದು ವಸ್ತು ಭೂಮಿಯತ್ತ ಬೀಳುತ್ತದೆ, ಎಂದು ಹೇಳಲಾಗಿದೆ. ಬ್ರಹ್ಮಗುಪ್ತನಿಗೆ ಗುರುತ್ವಾಕರ್ಷಣೆಯ ಬಗ್ಗೆ ಅರಿವಿತ್ತು. ನಂತರ ಇದೇ ವಿಚಾರವನ್ನು ಇನ್ನೊಬ್ಬ ಭಾರತೀಯ ಖಗೋಳಶಾಸ್ತ್ರಜ್ಞ ಎರಡನೇ ಭಾಸ್ಕರ ತನ್ನ ಸೂರ್ಯ ಸಿದ್ಧಾಂತದಲ್ಲಿ ವಿಸ್ತರಿಸಿದ್ದ”ಎಂದು ಶರ್ಮ ಹೇಳುತ್ತಾರೆ.

ಗುರುತ್ವಾಕರ್ಷಣೆಯ ಕ್ಷೇತ್ರದಲ್ಲಿ ಬ್ರಹ್ಮಗುಪ್ತ ಸಾಕಷ್ಟು ಅಧ್ಯಯನ ನಡೆಸಿದ್ದಾನೆಂಬುದಕ್ಕೆ ಹಲವಾರು ದಾಖಲೆಗಳಿವೆ ಎಂದು ಪುರಾತತ್ವ ಇಲಾಖೆಯ ಸುಪರಿಂಟೆಂಡೆಂಟ್ ಝಫರುಲ್ಲಾ ಖಾನ್ ತಿಳಿಸುತ್ತಾರೆ.

LEAVE A REPLY