‘ಬೆಳಗಾವಿಯಲ್ಲಿ 45 ದಿನ ಅಧಿವೇಶನ, ಸದಸ್ಯರ ಹಾಜರಾತಿ ಕಡ್ಡಾಯಕ್ಕೆ ಪ್ರಯತ್ನಿಸುವೆ’

ಕೆ ಬಿ ಕೋಳಿವಾಡ

ವಿಧಾನ ಸಭಾಧ್ಯಕ್ಷ  ಅವರ ಜತೆ ಮಾತುಕತೆ.


* ಸ್ಪೀಕರಾದ ಬಳಿಕ ಇದು ನಿಮಗೆ ಪ್ರಥಮ ಅಧಿವೇಶನವಾಗಿದ್ದು, ಯಾವ ವಿಷಯಗಳ ಕುರಿತು ಚರ್ಚಿಸುವಿರಿ ?

ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿ ವಿಷಯ ಚರ್ಚಿಸಲಾಗಿ, ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಪ್ರಥಮವಾಗಿ, ಗೋವಾ ಮತ್ತು ಮಹಾರಾಷ್ಟ್ರದೊಂದಿಗಿನ ಮಹದಾಯಿ ಜಲ ವಿವಾದ ಕೈಗೆತ್ತಿಕೊಳ್ಳಲಾಗುವುದು. ಒಂದು ದಿನ ಬರಗಾಲ ಚರ್ಚೆಗೆ ಮೀಸಲಿಡಲಾಗುವುದು.


* ಬೆಳಗಾವಿಯ ಸುವರ್ಣ ಸೌಧದಲ್ಲಿ ಕನಿಷ್ಠ ಎರಡು ಅಧಿವೇಶನ ನಡೆಯಬೇಕೆಂದು ನಿಮ್ಮ ಪೂರ್ವಾಧಿಕಾರಿಗಳು ಹೇಳಿದ್ದರು. ಆದರೆ ಅದು ಅನುಷ್ಠಾನಗೊಂಡಿಲ್ಲ. ನೀವೇನಾದರೂ ಬೆಳಗಾವಿಯಲ್ಲಿ ಎರಡು ಅಧಿವೇಶ ಯೋಜನೆ ಹಾಕಿಕೊಂಡಿದ್ದೀರಾ ?

ವಿಧಾನ ಸೌಧ (ಬೆಂಗಳೂರು) ಮತ್ತು ಸುವರ್ಣ ಸೌಧದಲ್ಲಿ (ಬೆಳಗಾವಿ) ವರ್ಷಕ್ಕೆ 90 ದಿನಗಳ ಅಧಿವೇಶನ ನಡೆಸುವ ಬಗ್ಗೆ ನಾನು ಯೋಚಿಸಿದ್ದೇನೆ. 90 ದಿನಗಳ ಅಧಿವೇಶನಕ್ಕೆ ಒಪ್ಪಿಗೆ ಸಿಕ್ಕಿದ್ದರೂ ಇದುವರೆಗೂ ಅನುಷ್ಠಾನಗೊಂಡಿಲ್ಲ. ಬೆಳಗಾವಿಯಲ್ಲಿ ಎರಡು ಭಾಗವಾಗಿ 45 ದಿನಗಳ ಅಧಿವೇಶನ ನಡೆಯಬೇಕೆಂಬುದು ನನ್ನ ಸಲಹೆಯಾಗಿದೆ.


* ಬೆಳಗಾವಿ ಅಧಿವೇಶನವು ವಿಶೇಷತಃ ಉತ್ತರ ಕರ್ನಾಟಕದ ವಿಷಯಗಳಿಗೆ ಸಂಬಂಧಿಸಿದ್ದಾಗಿದ್ದು, ಈ ಬಾರಿಯೂ ಅಧಿವೇಶನದಲ್ಲಿ ಬೇರೆ ವಿಷಯ ಪ್ರಸ್ತಾವಿಸುವುದಿಲ್ಲವೇ ?

ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ವಿಷಯ ಹೊರತಾಗಿ ಇತರ ಯಾವುದೇ ವಿಷಯ ಪ್ರಸ್ತಾವಕ್ಕೆ ನಾನು ಅವಕಾಶ ಕೊಡುವುದಿಲ್ಲ. ದಿನದ ಅಜೆಂಡಾದಲ್ಲಿ ಎಡೆಬಿಡದೆ ಕನಿಷ್ಠ ಮೂರು ಗಂಟೆ ಸದನ ಕಲಾಪಕ್ಕೆ ಅವಕಾಶ ನೀಡುವೆ. ದಿನದ ಕಲಾಪದ ಮೊದಲ ತಾಸಿನ ವೇಳೆ ಪ್ರಶ್ನಾವಳಿ ತಾಸು ಅಮಾನತುಗೊಳಿಸುವುದಿಲ್ಲ. ಇದಾದ ಬಳಿಕ ಸದನದಲ್ಲಿ ಸದನದ ಕಾರ್ಯದರ್ಶಿ ವರದಿ ಸಲ್ಲಿಸಲಿದ್ದಾರೆ. ಬಳಿಕ ಶೂನ್ಯ ವೇಳೆಯಲ್ಲಿ ಮಹತ್ವದ ವಿಷಯ ಪ್ರಸ್ತಾವಿಸಲು ಸಮಯ ಒದಗಿಸಲಾಗುವುದು. ಇದಾದ ಬಳಿಕ, ಮೊದಲೇ ನೀಡಲಾದ ನೊಟೀಸಿನಂತೆ ಸದನದಲ್ಲಿ ಇತರ ವಿಷಯ ಕೈಗೆತ್ತಿಕೊಳ್ಳಲಾಗುವುದು.


* ವಿಪಕ್ಷಗಳು ನಿಲುವಳಿ ತಂದಾಗ ಸ್ಪೀಕರ್ ಯಾವಾಗಲೂ ಪ್ರಶ್ನಾವಧಿ ಅಮಾನತುಗೊಳಿಸುತ್ತಾರೆ. ನೀವು ಕೂಡಾ ಇದನ್ನು ಮುಂದುವರಿಸುತ್ತೀರಾ ?

ಪ್ರಶ್ನಾವಧಿಯಲ್ಲಿ ನಿಲುವಳಿಯೊಂದರ ಬಗ್ಗೆ ಧ್ವನಿ ಎತ್ತಲು ನಾನು ಸದಸ್ಯರಿಗೆ ಅವಕಾಶ ನೀಡುವುದಿಲ್ಲ. ಸದನದ ಕಲಾಪ ನಡೆಯಲು ಸಂಬಂಧಿತ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದ್ದು, ಆ ವರದಿ ಬೆಳಗಾವಿ ಅಧಿವೇಶನದಲ್ಲಿ ಸ್ವೀಕೃತವಾಗಲಿದೆ. ನಿಲುವಳಿ ಸೂಚನೆಯಿಂದ ಸದನದ ಕಲಾಪಕ್ಕೆ ಬಾಧ್ಯವಾಗಬಾರದೆಂಬುದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಮಧ್ಯಾಹ್ನದ ಹಾಜರಾತಿಯ ವೇಳೆ ಅಥವಾ ಶೂನ್ಯ ವೇಳೆ ಮುಗಿದ ಬಳಿಕ ನಿಲುವಳಿ ಕುರಿತು ಚರ್ಚಿಸಲು ಸಮಯ ಹಂಚಿಕೆ ಮಾಡಲಾಗುವುದು. ಹೊಸ ಪದ್ಧತಿಯಂತೆ ನಿರಂತರ ಕಲಾಪ ಮುಂದುವರಿಸಲಾಗುವುದು, ಸದನದೊಳಗೆ ಸದಸ್ಯರ ಧರಣಿ ಹಾಗೂ ಕಲಾಪ ಬಹಿಷ್ಕಾರ ತಡೆಯಲಾಗುವುದು. ಮಧ್ಯಾಹ್ನದೊಳಗೆ ಸ್ಪೀPರಗೆ ನಿಲುವಳಿ ಸಲ್ಲಿಸಬಹುದಾಗಿದೆ. ಹಿಂದೆ ಅಧಿವೇಶನ ಆರಂಭಕ್ಕೆ ಒಂದು ತಾಸು ಮುಂಚೆ ನಿಲುವಳಿ ಸಲ್ಲಿಸಲು ಅವಕಾಶವಿತ್ತು.


* ಕಲಾಪ ಸಲೀಸಾಗಿ ಮುಂದುವರಿಯಲು ಏನೆಲ್ಲ ಶಿಫಾರಸುಗಳಿವೆ ?

ಯಾವುದೇ ತಡೆಯಿಲ್ಲದೆ ಕನಿಷ್ಠ ಮೂರು ತಾಸು ಅಧಿವೇಶನ ನಡೆಯಬೇಕು. ಸದಸ್ಯರಿಗೆ ವರ್ಷ ಪೂರ್ತಿ ಅಸೆಂಬ್ಲಿ ಸಚಿವಾಲಯದಿಂದ ಪ್ರಶ್ನೆ ಕೇಳಲು ಅವಕಾಶ ಮಾಡಿಕೊಡಬೇಕು. ಹಿಂದೆ ಅಧಿವೇಶನಕ್ಕೆ 20 ದಿನ ಮುಂಚಿತ ಇದಕ್ಕೆ ಅವಕಾಶವಿತ್ತು. ಇದರಿಂದ ಮತದಾರರೊಂದಿಗೆ ಸಂವಾದ ನಡೆಸಿದ ಬಳಿಕ ಮಹತ್ವದ ಪ್ರಶ್ನೆ ಕೇಳಲು ಸದಸ್ಯರಿಗೆ ನೆರವಾಗಲಿದೆ.


* ಕಡತರಹಿತ ಸದನ ಕಲಾಪ ಯೋಜನೆ ಏನಾದರೂ ಇದೆಯೇ ?

ಹೌದು. ಸದನದಲ್ಲಿ ಇ-ವಿಧಾನ್ ಅನುಷ್ಠಾನಕ್ಕೆ ಪ್ರಾಜೆಕ್ಟ್ ವರದಿ ಸಿದ್ಧಗೊಂಡಿದೆ.


* ಸದನದಲ್ಲಿ ಕಡ್ಡಾಯ ಹಾಜರಾತಿ ಬಗ್ಗೆ ನಿಮ್ಮಲ್ಲಿ ಯಾವುದಾದರೂ ಉಪಾಯವಿದೆಯೇ ?

ಸದಸ್ಯರು ಸಾಮಾನ್ಯ ಜನರಲ್ಲ. ಅವರು ಜನಪ್ರತಿನಿಧಿಗಳಾಗಿದ್ದು, ಎಲ್ಲ ಹೊತ್ತು ಸದನದಲ್ಲಿ ಹಾಜರಾಗಲೇಬೇಕೆಂದು ಬಲವಂತಪಡಿಸುವುದು ಸರಿಯಲ್ಲ. ಆದರೆ ನಾವು ಪ್ರಸಕ್ತ ತಿದ್ದುಪಡಿಯಲ್ಲಿ ದಿನದ ಅಧಿವೇಶನವನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನದ ಕಲಾಪವಾಗಿ ವಿಭಾಗಗೊಳಿಸುತ್ತಿದ್ದೇವೆ. ಸದಸ್ಯರು ಎರಡು ವೇಳೆಯಲ್ಲಿ ಸಹಿ ಹಾಕಬೇಕು. ಈ ಮೂಲಕ ಸದಸ್ಯರು ರಿಜಿಸ್ಟರ್‍ಗೆ ಬೆಳಿಗ್ಗೆ ಸಹಿ ಹಾಕಿ, ದಿನಪೂರ್ತಿ ಗೈರಾಗುವ ಪ್ರಕ್ರಿಯೆಗೆ ತಡೆ ಹೇರಿದಂತಾಗುತ್ತದೆ.


* ಸದನ ಸಮಿತಿಗಳಲ್ಲಿರುವ ಸದಸ್ಯರು ಸಮಿತಿ ಸಭೆಗಳಿಗೆ ಹಾಜರಾಗದೆ ಟೀಎ ಮತ್ತು ಡೀಎ ಪಡೆಯುತ್ತಿದ್ದಾರೆ ಎಂಬ ಟೀಕೆಗಳಿವೆ. ಇದನ್ನು ತಡೆಗಟ್ಟಲು ನಿಮ್ಮಲ್ಲಿ ಏನಾದರೂ ಯೋಜನೆಗಳಿವೆ ?

ಕೋರಂ ಇಲ್ಲದೆ ಸಮಿತಿ ಸಭೆ ನಡೆಸುವಂತಿಲ್ಲ. ಸಮಿತಿ ಸಭೆಗಳಿಗೆ ಹಾಜರಾಗದೆ ಡೀಎ ಮತ್ತು ಡೀಎ ಪಡೆಯುವವರನ್ನು ತಡೆಗಟ್ಟುವಲ್ಲಿ ನಾವು ಅಸಹಾಯಕರಾಗಿದ್ದೇವೆ.


* ಕಲಾಪ ಸಲೀಸಾಗಿ ನಡೆಯಲು ನಿಮ್ಮಲ್ಲಿ ಬೇರೇ ಯಾವುದಾದರೂ ಯೋಜನೆಗಳಿವೆ ?

ಕೋರಂ ವಿಷಯದಲ್ಲಿ ಮತ್ತೊಂದು ತಿದ್ದುಪಡಿ ಯೋಚಿಸಿದ್ದೇವೆ. ದಿನ ಕಲಾಪದ ವೇಳೆ ಒಟ್ಟು ಸದಸ್ಯರಲ್ಲಿ 10ನೇ ಒಂದರಷ್ಟು ಕಡ್ಡಾಯ ಹಾಜರಾತಿ ನಿಯಮ ಜಾರಿಗೆ ತರಲಿದ್ದೇವೆ. ಒಟ್ಟು 225 ಸದಸ್ಯರಲ್ಲಿ ಕನಿಷ್ಠ 25 ಸದಸ್ಯರು ಹಾಜರಾಗಲೇಬೇಕು. ಎರಡು ಅನಗತ್ಯ ಸಮಿತಿ ರದ್ದುಗೊಳಿಸಿ, ಆ ಜಾಗದಲ್ಲಿ ಇನ್ನೆರಡು ಹೊಸ ಸಮಿತಿ ರಚಿಸಲು ನಿರ್ಧರಿಸಿದ್ದೇವೆ.