ಪಶ್ಚಿಮ ಘಟ್ಟ ವಿಷಯದಲ್ಲಿ ಅಂತಾರಾಷ್ಟ್ರೀಯ ಗೋಷ್ಠಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅತ್ಯಂತ ಸೂಕ್ಷ್ಮ ಪಶ್ಚಿಮಘಟ್ಟ ಪ್ರದೇಶದ ಕುರಿತಾಗಿ ಡಿಸೆಂಬರ್ 28ರಿಂದ ಡಿ 30ರವರೆಗೆ ಮೂರು ದಿನಗಳ ಮಹತ್ವದ ಅಂತಾರಾಷ್ಟ್ರೀಯ ವಿಚಾರಗೋಷ್ಠಿ ಮೂಡುಬಿದಿರೆಯಲ್ಲಿ ನಡೆಯಲಿದೆ.

ಎನರ್ಜಿ(ಇಂಧನ) ಆ್ಯಂಡ್ ವೆಟ್ ಲ್ಯಾಂಡ್ಸ್ (ಜಲಪ್ರದೇಶ) ರೀಸರ್ಚ್ ಗ್ರೂಪ್, ಪರಿಸರ ವಿಜ್ಞಾನಗಳ ಕೇಂದ್ರ, ಬೆಂಗಳೂರಿನ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಸೈನ್ಸ್ ಜೊತೆ ಸೇರಿಕೊಂಡು ಆಳ್ವಾಸ್ ಕಾಲೇಜು ಮತ್ತು ಆಳ್ವಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ ಈ ಅಂತಾರಾಷ್ಟ್ರೀಯ ಗೋಷ್ಠಿ ಆಯೋಜಿಸುತ್ತಿದೆ.

ಆಹಾರ, ನೀರು ಮತ್ತು ಮಾನವ ಜೀವನದಲ್ಲಿ ವೆಟ್ ಲ್ಯಾಂಡುಗಳ ಪಾತ್ರವೇನೆಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವಲ್ಲಿ ಈ ವಿಚಾರಗೋಷ್ಠಿ ಮಹತ್ವದ್ದಾಗಿದೆ ಎಂದು ಪ್ರಾಂಶುಪಾಲ ಕುರಿಯನ್ ಸುದ್ದಿಗಾರರಲ್ಲಿ ಹೇಳಿದರು.

ವೆಟ್ ಲ್ಯಾಂಡ್ ಪರಿಸರವು ಜೈವಿಕ ತೊಟ್ಟಿಲಿನಂತಿದೆ. ಅದು ನೀರಿನ ಆಸರೆಯಾಗಿದೆ. ಜೊತೆಗೆ ಇಲ್ಲಿನ ಪ್ರಾಥಮಿಕ ಉತ್ಪನ್ನಗಳು ಅಪಾರ ಪ್ರಮಾಣ ಮರಗಳು ಮತ್ತು ಜೀವಿಗಳ ಬದುಕಿಗೆ ಆಧಾರವಾಗಿವೆ. ಭಾರೀ ಪ್ರಮಾಣದ ಅರಣ್ಯನಾಶ, ವಾಸಸ್ಥಾನ ಛಿದ್ರೀಕರಣ, ಜನಸಂಖ್ಯೆ, ಘನ ಮತ್ತು ದ್ರವ ತ್ಯಾಜ್ಯಗಳ ಯಥೇಚ್ಛ ಡಂಪಿಂಗ್ ಪರಿಸರ ನಷ್ಟ ವಿಷಯಗಳೊಂದಿಗೆ ನಂಟು ಹೊಂದಿದೆ ಎಂದವರು ವಿವರಿಸಿದರು.

ಗೋಷ್ಠಿಯಲ್ಲಿ ನೀರಿನ ಗುಣಮಟ್ಟ ವಿಶ್ಲೇಷಣೆ, ಜಿಐಎಸ್, ಜಿಪಿಎಸ್, ರಿಮೂಟ್ ಸೆನ್ಸಿಂಗ್, ಇಮೇಜ್ ಪ್ರೊಸೆಸ್ಸಿಂಗ್ ಬಳಕೆಯ ಸಾಫ್ಟವೇರ್ ಮತ್ತು ಹಾರ್ಡವೇರ್ ಪ್ರದರ್ಶಿಸಲಾಗುವುದು. ಡಿಸೆಂಬರ್ 31ರಂದು ಮೂಡುಬಿದಿರೆಯ ಕೆರೆಯ ಪುನರುಜ್ಜೀವನ ಕೆಲಸ ಆರಂಭಿಸಲಾಗುತ್ತದೆ ಎಂದರು.