ನಗರದಲ್ಲಿ ಎಪ್ರಿಲ್ 24ರಿಂದ 4 ದಿನ ಅಂತರಾಷ್ಟ್ರೀಯ ಚಲನಚಿತ್ರ ಉತ್ಸವ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಿಟ್ಟೆ ವಿಶ್ವವಿದ್ಯಾನಿಲಯವು ನಾಲ್ಕು ದಿನದ ಅಂತರಾಷ್ಟ್ರೀಯ ಚಲನಚಿತ್ರ ಉತ್ಸವವನ್ನು ಎಪ್ರಿಲ್ 24 ರಿಂದ 27ರವರೆಗೆ ನಗರದ  ಭಾರತ ಸಿನಿಮಾಸ್‍ನಲ್ಲಿ ಆಯೋಜಿಸಿದೆ.

ಸುಮಿತ್ರ ಭಾವೆ ಮತ್ತು ಸುನಿಲ್ ಸುಖ್ತಾಂಕರ್ ನಿರ್ದೇಶನದ ಪ್ರಸಿದ್ದ ಮಾರತಿ ಚಿತ್ರ `ಕಾಸವ್’ ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದ ಓಪನಿಂಗ್ ಚಿತ್ರವಾಗಿರುತ್ತದೆ. ಈ ಚಿತ್ರವು 64ನೇ ರಾಷ್ಟ್ರೀಯ ಪ್ರಶಸ್ತಿಯಲ್ಲಿ ಅತ್ಯುತ್ತಮ ಚಿತ್ರಕ್ಕಾಗಿ ಗೋಲ್ಡನ್ ಲೋಟಸ್ ಪ್ರಶಸ್ತಿಯನ್ನು ಗಳಿಸಿತ್ತು. ಒಟ್ಟು ಐದು ದೇಶಗಳ ಮತ್ತು ಹಲವು ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಭಾರತೀಯ ಭಾಷೆಗಳ ಸುಮಾರು 55 ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ನಿಟ್ಟೆ ಸಮುದಾಯ ಸಂಸ್ಥೆಯ ಇಲಾಖಾ ಮುಖ್ಯಸ್ಥ ರವಿರಾಜ್ ಕಿಣಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಉತ್ಸವದಲ್ಲಿ ವಿವಿಧ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕರು ಭಾಗವಹಿಸಲಿದ್ದಾರೆ. ಪಿ ಎನ್ ರಾಮಚಂದ್ರ, ಅನಿರುದ್ದ ರಾಯ್ ಚೌಧರಿ, ಬಿಜಯ ಜೆನಾ, ಪ್ರದಿಪ್ತ ಭಟ್ಟಾಚಾರ್ಯ ಮೊದಲಾದ ಪ್ರಸಿದ್ದ ಚಿತ್ರ ನಿರ್ಮಾಕರು ಮತ್ತು ನಟರಾದ ಮನೋಹರ್, ಶ್ರುಂಗ, ಪ್ರತಿಕ್ ಗಾಂಧಿ ಹರಿಶರ್ವ, ಹೇಮನಾಥ ಕೂಡ ಚಲನಚಿತ್ರ ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರೊ ರವಿರಾಜ ಕಿಣಿ ಹೇಳಿದ್ದಾರೆ.