ಚೆಂಗಿಸ್ ಖಾನ್ ಕುರಿತ ಕೆಲವು ಕುತೂಹಲಕಾರಿ ಸಂಗತಿಗಳು

ಯಾವುದೇ ಒಬ್ಬ ವ್ಯಕ್ತಿಯ ಸಾಮಥ್ರ್ಯ ಅವನ ಸಂತತಿಯಲ್ಲಿ ಕಾಣುತ್ತದೆ ಎಂದು ನಂಬಿದ್ದ ಚೆಂಗಿಸ್ ಖಾನ್ ಸಾವಿರಾರು ಮಹಿಳೆಯರೊಡನೆ ಸಂಬಂಧ ಹೊಂದಿದ್ದು ಅನೇಕರಿಂದ ಮಕ್ಕಳನ್ನೂ ಪಡೆದಿದ್ದ. ಏಷಿಯಾದ ಶೇ 8ರಷ್ಟು ಜನರು ಅವನ ಸಂತತಿಯವರೇ ಆಗಿದ್ದಾರೆ ಎನ್ನಲಾಗುತ್ತದೆ.

 

  • ಹರ್ಷಿತ್ ಕೌಶಿಕ್

ಚೆಂಗಿಸ್ ಖಾನ್ 1162ರಲ್ಲಿ ಡೆಲುನ್ ಬಾಲ್ಡಗ್ ಎಂಬಲ್ಲಿ ಜನಿಸಿ 1227ರಲ್ಲಿ ತನ್ನ 65ನೆಯ ವಯಸ್ಸಿನಲ್ಲಿ ಮೃತಪಟ್ಟಿದ್ದ. ಒಂದು ಮಾಹಿತಿಯ ಪ್ರಕಾರ ಚೆಂಗಿಸ್ ಖಾನ್ ತನ್ನ ಮುಷ್ಟಿಯಲ್ಲಿ ರಕ್ತ ಸಂಚಾರ ಸ್ಥಗಿತಗೊಂಡಿದ್ದ ಸ್ಥಿತಿಯಲ್ಲೇ ಜನಿಸಿದ್ದ. ಇದು ಅವನು ಜಗತ್ತಿನ ಅತ್ಯಂತ ಪ್ರಬಲ ನಾಯಕನಾಗಿ ಹೊರಹೊಮ್ಮುವ ಸೂಚನೆಯಾಗಿತ್ತು. ಮಂಗೋಲ್ ಸಾಮ್ರಾಜ್ಯ ಇತಿಹಾಸ ಎಂದಿಗೂ ಕಂಡರಿಯದ ಬೃಹತ್ ಸಾಮ್ರಾಜ್ಯವಾಗಿ ರೂಪುಗೊಂಡಿತ್ತು. ಅದು ಪೆಸಿಫಿಕ್ ಕಡಲಿನಿಂದ ಪೂರ್ವ ಯೂರೋಪಿನವರೆಗೆ ವ್ಯಾಪಿಸಿತ್ತು.

ಯಾವುದೇ ಒಬ್ಬ ವ್ಯಕ್ತಿಯ ಸಾಮಥ್ರ್ಯ ಅವನ ಸಂತತಿಯಲ್ಲಿ ಕಾಣುತ್ತದೆ ಎಂದು ನಂಬಿದ್ದ ಚೆಂಗಿಸ್ ಖಾನ್ ಸಾವಿರಾರು ಮಹಿಳೆಯರೊಡನೆ ಸಂಬಂಧ ಹೊಂದಿದ್ದು ಅನೇಕರಿಂದ ಮಕ್ಕಳನ್ನೂ ಪಡೆದಿದ್ದ. ಏಷಿಯಾದ ಶೇ 8ರಷ್ಟು ಜನರು ಅವನ ಸಂತತಿಯವರೇ ಆಗಿದ್ದಾರೆ ಎನ್ನಲಾಗುತ್ತದೆ. ಅವನ ಸೇನೆ ಜೋಸೆಫ್ ಸ್ಟಾಲಿನ್ ಮತ್ತು ಅಡೋಲ್ಫ್ ಹಿಟ್ಲರ್‍ಗಿಂತಲೂ ಹೆಚ್ಚಿನ ಜನರನ್ನು ಹತ್ಯೆಗೈದಿತ್ತು.  ಅವನ ಸೇನಾ ದಾಳಿ ಮತ್ತು ಅತಿಕ್ರಮಣಗಳು ಕೆಲವು ಪ್ರದೇಶಗಳ ಇಡೀ ನಾಗರಿಕ ಸಮುದಾಯವನ್ನೇ ನಿಶ್ಶೇಷ ಮಾಡಿದ್ದವು. ಅವನ ಆಳ್ವಿಕೆಯಲ್ಲಿ 40 ದಶಲಕ್ಷ ಜನರು ಹತರಾಗಿದ್ದರು.

ಚೆಂಗಿಸ್ ಖಾನ್ ಆಜ್ಞೆಯಂತೆ ಅವನ ಶವವನ್ನು ಮಂಗೋಲಿಯಾದ ಅಜ್ಞಾತ ಸ್ಥಳದಲ್ಲಿ ಸಮಾಧಿ ಮಾಡಲಾಗಿತ್ತು. ಇದನ್ನು ಮರೆಮಾಚಲು ಶವಯಾತ್ರೆಯ ಸಂದರ್ಭದಲ್ಲಿ ಅಡ್ಡ ಬಂದವರನ್ನೆಲ್ಲಾ ಕೊಲ್ಲಲಾಗಿತ್ತು. ಅಚ್ಚರಿ ಎಂದರೆ ಚೆಂಗಿಸ್ ಖಾನ್ ಧಾರ್ಮಿಕ ಸಹಿಷ್ಣುತೆಯನ್ನು ಪ್ರತಿಪಾದಿಸಿದ್ದ. ಇತರ ಸಂಸ್ಕøತಿಯ ತತ್ವಶಾಸ್ತ್ರಗಳಲ್ಲಿ ವಿಶ್ವಾಸ ಇರಿಸಿದ್ದ. ಇಸ್ಲಾಂ, ಬೌದ್ಧ ಧರ್ಮ, ಟಾವೊವಾದ, ಕ್ರೈಸ್ತ ಧರ್ಮವನ್ನು ಅಧ್ಯಯನ ಮಾಡಿದ್ದ. ತನ್ನ ಸಾಮ್ರಾಜ್ಯದಲ್ಲಿ ಖಾನ್ ಜನಾಂಗೀಯ ವೈವಿಧ್ಯತೆಯನ್ನು ಕಾಪಾಡಿದ್ದ. ಇತರ ಸಂಸ್ಕøತಿಯ ಜನರಿಗೆ ಆಡಳಿತ ಚುಕ್ಕಾಣಿ ನೀಡಿದ್ದ. ಯೂಗುರ್ ಲಿಪಿಯನ್ನು ಪ್ರೋತ್ಸಾಹಿಸುವ ಮೂಲಕ ಮಂಗೋಲಿಯಾ ಸಂಸ್ಕøತಿಗೆ ಆಧುನಿಕತೆಯ ಸ್ಪರ್ಶ ನೀಡಿದ್ದ.

ಹತ್ತು ವರ್ಷದವನಾಗಿದ್ದಾಗಲೇ ಖಾನ್ ಬೇಟೆಯಲ್ಲಿ ತನ್ನ ಪಾಲು ಪಡೆಯಲು ತನ್ನ ಸೋದರನನ್ನು ಕೊಲೆ ಮಾಡಿದ್ದ. ನಿಷ್ಠೆಗೆ ಹೆಚ್ಚು ಬೆಲೆ ಕೊಡುತ್ತಿದ್ದ ಖಾನ್ ತನ್ನ ಸೇನಾಧಿಕಾರಿಗಳಿಗೆ ಪ್ರತಿಭೆಯ ಆಧಾರದ ಮೇಲೆ ಬಡ್ತಿ ನೀಡುತ್ತಿದ್ದ. ಆದ್ದರಿಂದಲೇ ಅವನ ಸೇನೆ ಸದಾ ಯಶಸ್ವಿಯಾಗಿತ್ತು.

ನಿಪುಣ ತಂತ್ರಗಾರಿಕೆ ಹೊಂದಿದ್ದ ಖಾನ್ ಕೆಲವೊಮ್ಮೆ ಹಿಂಸಾತ್ಮಕ ಮಾರ್ಗವನ್ನೂ ಅನುಸರಿಸುತ್ತಿದ್ದ.  ಗುಪ್ತ ಮಾರ್ಗಗಳ ಮೂಲಕ ಇತರ ದೇಶಗಳ ಮಾಹಿತಿ ಪಡೆದು ರಹಸ್ಯವಾಗಿಯೇ ಆಕ್ರಮಿಸುತ್ತಿದ್ದ.

ಪರ್ಷಿಯಾದ ಕ್ವಾರೆಮಿಡ್ ಸಾಮ್ರಾಜ್ಯದ ದೊರೆ ಚೆಂಗಿಸ್ ಖಾನನ ಧೂತನನ್ನು ವಧೆ ಮಾಡುವ ಮೂಲಕ ಖಾನ್ ಅವಕೃಪೆಗೆ ಪಾತ್ರವಾಗಿತ್ತು. ಖಾನ್ ಕಳುಹಿಸಿದ್ದ ವ್ಯಾಪಾರಿ ಸಮೂಹದ ನೆಲೆಗಳನ್ನು  ಈ ಸಾಮ್ರಾಜ್ಯದ ದೊರೆ ಧ್ವಂಸಗೊಳಿಸಿದ್ದ. ಈ ಅವಮಾನವನ್ನು ತಾಳಲಾರದೆ ಖಾನ್ ತನ್ನ ಎರಡು ಲಕ್ಷ ಸಂಖ್ಯೆಯ ಬೃಹತ್ ಸೇನೆಯನ್ನು ಬಳಸಿ ಪರ್ಷಿಯಾದ ಮೇಲೆ ಆಕ್ರಮಣ ನಡೆಸಿದ್ದ.

1222ರಲ್ಲಿ ಪರ್ಷಿಯಾ ಚೆಂಗಿಸ್ ಖಾನನ ಬೃಹತ್ ಸೇನೆ ಮತ್ತು ಪ್ರಾಬಲ್ಯಕ್ಕೆ ಸಂಪೂರ್ಣ ಶರಣಾಗಿತ್ತು.  ಪರ್ಷಿಯಾವನ್ನು ಖಾನ್ ಧ್ವಂಸಗೊಳಿಸಿದ್ದ. ನಾಗರಿಕ ಸಮಾಜವನ್ನು ಅಳಿಸಿಹಾಕಲಾಯಿತು. ಶೇ 90ರಷ್ಟು ಜನರು ಹತರಾಗಿದ್ದರು. ಕುಶಲ ಕರ್ಮಿ ಕಾರ್ಮಿಕರನ್ನು ಮಂಗೋಲಿಯಾಗೆ ಕಳುಹಿಸಲಾಗಿತ್ತು. ಈ ಅವಧಿಯಲ್ಲಿ ಕ್ಷಿಯಾ ಮತ್ತು ಜಿನ್ ಒಟ್ಟಾಗಿ ಸೇರಿ ಮಂಗೋಲಿಯಾದ ಅಧಿಪತ್ಯಕ್ಕೆ ಸವಾಲು ಒಡ್ಡಿದ್ದರು. ತನ್ನ ಅಂತಿಮ ಸೇನಾ ಗೆಲುವಿನಲ್ಲಿ ಚೆಂಗಿಸ್ ಖಾನ್ ಮತ್ತೊಮ್ಮೆ ವಿಜಯಿಯಾಗಿ ಹಿಂದಿರುಗಿ ಇಬ್ಬರನ್ನೂ 1226ರ ಯುದ್ಧದಲ್ಲಿ ಸೋಲಿಸಿದ್ದ. ತನಗೆ ಯಾವುದೇ ರೀತಿಯ ವಿಶ್ವಾಸ ದ್ರೋಹ ಆಗಕೂಡದು ಎಂದು ಎಣಿಸಿ ಮಂಗೋಲಿಯಾ ಸಾಮ್ರಾಜ್ಯದ ರಾಜಕುಟುಂಬವನ್ನು ನಿರ್ನಾಮ ಮಾಡಿದ್ದ.

ತನ್ನ ಮಕ್ಕಳಲ್ಲಿ ವಿರಸ ತಪ್ಪಿಸಲು ಖಾನ್ ತನ್ನ ಸಾಮ್ರಾಜ್ಯವನ್ನು ಸಮನಾಗಿ ಹಂಚಿದ್ದ. ಒಗೆಡಿ ಖಾನ್ ಮಂಗೋಲಿಯಾ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಿದ್ದ. ಒಂದು ಹಂತದಲ್ಲಿ ಮಂಗೋಲಿಯಾ ಸಾಮ್ರಾಜ್ಯ ವಿಶ್ವದ 12 ದಶಲಕ್ಷ ಚದರ ಮೈಲಿ ಪ್ರದೇಶವನ್ನು ಆಳಿತ್ತು. ಸಂಪ್ರದಾಯಕ್ಕೆ ವಿರುದ್ಧವಾಗಿ ಚೆಂಗಿಸ್ ಖಾನ್ ತನ್ನ ಸಂಬಂಧಿಕರ ಬದಲು ಮಿತ್ರರನ್ನೇ ಪ್ರಧಾನ ಸ್ಥಾನಗಳಿಗೆ ನೇಮಿಸಿದ್ದ.  1201ರಲ್ಲಿ ನಡೆದ ಯುದ್ಧದಲ್ಲಿ ಚೆಂಗಿಸ್ ಖಾನನ ಕುತ್ತಿಗೆಗೆ ಗುಂಡೇಟು ಬಿದ್ದಿತ್ತು. ಈ ಕೃತ್ಯ ಎಸಗಿದವ ತಾನು ಖಾನನನ್ನು ಗುರಿ ಮಾಡಿದ್ದಾಗಿ ಒಪ್ಪಿಕೊಂಡ ನಂತರವೂ ಖಾನ್ ಅವನನ್ನು ಸೇನಾ ಮುಖ್ಯಸ್ಥನನ್ನಾಗಿ ನೇಮಿಸಿದ್ದ.

ಬಡವರು ಮತ್ತು ಪಾದ್ರಿಗಳನ್ನು ತೆರಿಗೆಯಿಂದ ಮುಕ್ತಗೊಳಿಸಿದ್ದ ಖಾನ್ ಸಾಕ್ಷರತೆ ಹಾಗೂ ಮುಕ್ತ ಧರ್ಮವನ್ನು ಪ್ರೋತ್ಸಾಹಿಸಿದ್ದ. ಹಾಗಾಗಿ ಅನೇಕ ಸಾಮ್ರಾಟರು ಸ್ವಇಚ್ಚೆಯಿಂದ ಮಂಗೋಲ್ ಸಾಮ್ರಾಜ್ಯದಲ್ಲಿ ಸೇರಿದ್ದರು.

ತಾಜ್ ಮಹಲ್ ನಿರ್ಮಿಸಿದ ಶಹಜಹಾನ್ ಚೆಂಗಿಸ್ ಖಾನನ ನೇರ ಸಂತತಿಯವನಾಗಿದ್ದ.  ಮಾನವ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಜೈವಿಕ ಪಿತೃ ಎಂದೇ ಪ್ರಸಿದ್ಧನಾಗಿರುವ ಚೆಂಗಿಸ್ ಖಾನ್ ಕೇಂದ್ರ ಏಷಿಯಾದಲ್ಲಿ 16 ದಶಲಕ್ಷ ಸಂತತಿಯ ಪಿತಾಮಹ ಆಗಿದ್ದಾನೆ. ತನ್ನ 90 ಸಾವಿರ ಸೈನಿಕರ ಸೇನೆಯೊಂದಿಗೆ ಚೀನಾದ ಮೇಲೆ ಆಕ್ರಮಣ ನಡೆಸಿದ್ದ ಖಾನ್ ವಿಶ್ವದ ಅತಿ ದೊಡ್ಡ ಸೇನೆಯ ದಂಡಾಧಿಕಾರಿಯಾಗಿ ಹೊರಹೊಮ್ಮಿದ್ದ.

ಜಿನ್ ಸಾಮ್ರಾಜ್ಯದ 10 ಲಕ್ಷ ಸೇನೆಯನ್ನು ತನ್ನ ಅಧಿಪತ್ಯಕ್ಕೊಳಪಡಿಸಿದ್ದ ಚೆಂಗಿಸ್ ಖಾನ್ ಈ ಸೇನೆಯ ಐದು ಲಕ್ಷ ಸೈನಿಕರನ್ನು ಕೊಲೆ ಮಾಡಿ ಉತ್ತರ ಚೀನಾ ಮತ್ತು ಬಿಜಿಂಗ್ ಮೇಲೆ ನಿಯಂತ್ರಣ ಸಾಧಿಸಿದ್ದ.