ಟೋಲ್ ಸಂಗ್ರಹಕ್ಕಿರುವ ಆಸಕ್ತಿ ಚತುಷ್ಪಥ ಕಾಮಗಾರಿ ಪೂರ್ಣಗೊಳಿಸುವಲ್ಲಿ ಏಕಿಲ್ಲ ?

ಪಡುಬಿದ್ರಿ ಪ್ರದೇಶದಲ್ಲಿ ನಡೆಯುತ್ತಿದೆ ಆಮೆಗತಿಯ ಹೆದ್ದಾರಿ ಕಾಮಗಾರಿ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಪ್ರದೇಶದ ಕಾಮಗಾರಿ ಪೂರ್ಣಗೊಳ್ಳದೆ ಹೆಜಮಾಡಿ ಟೋಲ್ ವಸೂಲಿ ಆರಂಭಗೊಂಡಿದ್ದರೂ ಟೋಲ್ ಸಂಗ್ರಹಕ್ಕಿರುವ ಆಸಕ್ತಿ ನವಯುಗ್ ಕಂಪನಿ ಕಾಮಗಾರಿ ಪೂರ್ಣಗೊಳಿಸುವಲ್ಲಿ ತೋರಿಸುತ್ತಿಲ್ಲ ಎಂಬುದು ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ಆರೋಪ.

ಒಂದು ಕಡೆಯಿಂದ ಟೋಲ್ ಆರಂಭಕ್ಕೆ ಸರ್ಕಾರಿ ಅಧಿಕಾರಿಗಳ ಬೆಂಬಲ, ಮತ್ತೊಂದು ಕಡೆಯಲ್ಲಿ ಜನರ ಮೇಲೆ ಕರುಣೆಯೇ ಇಲ್ಲದ ಈ ಭಾಗದ ರಾಜಕಾರಣಿಗಳ ನಿರಾಶಕ್ತಿ, ಇನ್ನೊಂದು ಕಡೆಯಲ್ಲಿ ಟೋಲ್ ಹೋರಾಟಗಾರರ ದೃಢವಲ್ಲದ ನಿರ್ಧಾರಗಳ ಲಾಭ ಪಡೆದ ಕಂಪನಿ, ಜಿಲ್ಲಾಡÀಳಿತದ ಬೆಂಬಲದೊಂದಿಗೆ ಟೋಲ್ ವಸೂಲಿ ಆರಂಭಗೊಳಿಸಿದೆ. ಇದೀಗ ಟೋಲ್ ಆರಂಭಗೊಂಡು ತಿಂಗಳು ಹಲವು ಉರುಳಿದ್ದು, ಹೆದ್ದಾರಿ ಕಾಮಗಾರಿಗಿದ್ದ ಅಡೆತಡೆಗಳು ತೆರವುಗೊಂಡಿದ್ದರೂ ಕಾಮಗಾರಿ ಆಮೆಗತಿಯಲ್ಲಿ ನಡೆಯುತಿದೆ. ಈ ಕಾಮಗಾರಿ ಸ್ಥಗಿತಗೊಳಿಸಲು ಮುಂದಿನ ಮಳೆಗಾಲಕ್ಕೆ ಕಂಪನಿ ಕಾಯುವಂತಿದೆ. ಈ ಹಿಂದೆ ಒಂದೇ ತಿಂಗಳಲ್ಲಿ ಹತ್ತಾರು ಕೀ ಮೀ ಉದ್ದಕ್ಕೂ ಹೆದ್ದಾರಿ ನಿರ್ಮಿಸಿದ್ದ ನವಯುಗ್ ಈ ದಿನಗಳಲ್ಲಿ ಮಾತ್ರ ಸುಮಾರು 100 ಮೀಟರ್ ರಸ್ತೆ ನಿರ್ಮಿಸಲು ತಿಂಗಳು ತೆಗೆದುಕೊಂಡು ವಿಳಂಬಿಸುತ್ತಿರುವುದು ಜನರಲ್ಲಿ ಸಹನೆಯ ಕಟ್ಟೋಡೆಯುವಂತೆ ಮಾಡುತ್ತಿದೆ.

ಕಾರ್ಮಿಕರಿಲ್ಲ

 ಇದೀಗ ನವಯುಗ್ ಗುತ್ತಿಗೆ ಕಂಪನಿ ಕಾರ್ಮಿಕರ ಸಮಸ್ಯೆ ಅನುಭವಿಸುತ್ತಿದೆ ಎಂಬ ಮಾತು ಕಂಪನಿ ವಲಯದಲ್ಲಿ ಕೇಳಿ ಬರುತ್ತಿದೆ. ಈ ಸಮಸ್ಯೆಗೆ ಮೂಲ ಕಾರಣ ಕಾರ್ಮಿಕರಿಗೆ ಕಂಪನಿ ತಿಂಗಳುಗಟ್ಟಲೆ ಸಂಬಳ ನೀಡದೆ ಉಳಿಸಿದ್ದೇ ಕಾರಣ ಎನ್ನಲಾಗುತ್ತಿದ್ದು, ಇದಕ್ಕೆ ಪೂರಕವೋ ಎಂಬಂತೆ ಪದೇ ಪದೇ ಕಾರ್ಕಳ ರಸ್ತೆಯಂಚಿನಲ್ಲಿರುವ ಕಂಪನಿಯ ಕಛೇರಿಯ ಮುಂಭಾಗ ಕಾರ್ಮಿಕರು ವೇತನಕ್ಕಾಗಿ ನಡೆಸುತ್ತಿರುವ ಪ್ರತಿಭಟನೆಯೇ ಸಾಕ್ಷೀ ನುಡಿಯುತ್ತಿದೆ.

ನಿರ್ವಾಹಣೆ ಇಲ್ಲ

ಟೋಲ್ ಸಂಗ್ರಹಕ್ಕೆ ಆರಂಭಕ್ಕೆ ಮುನ್ನ ರಸ್ತೆಯಂಚಿನ ಒಂದು ಮೈಲುಗಲ್ಲು ತುಂಡಾದರೂ ಕ್ಷಣ ಮಾತ್ರದಲ್ಲಿ ಅದರ ದುರಸ್ಥಿ ಕಾರ್ಯ ನಡೆಯುತ್ತಿತ್ತು. ಆದರೆ ಇದೀಗ ಹೆದ್ದಾರಿಯಂಚಿನ ತಡೆ ಬೇಲಿಗಳು ವಾಹನ ಅಪಘಾತದಲ್ಲಿ ಕಿತ್ತು ಹೋಗಿದ್ದು, ಆ ವಾಹನ ಮಾಲಿಕರಿಂದ ಕಂಪನಿ ದಂಡ ವಸೂಲಿ ನಡೆಸಿ ಮೂರು ತಿಂಗಳು ಕಳೆದರೂ ಈ ವರೆಗೂ ದುರಸ್ಥಿ ಕಾರ್ಯ ನಡೆಸಿಲ್ಲ. ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದಾಗ ತುರ್ತಾಗಿ ಸ್ಪಂದಿಸಬೇಕಾಗಿದ್ದ ಟೋಲ್ ಸಂಗ್ರಹ ಕಂಪನಿ, ಗಂಟೆಗಟ್ಟಲೆ ಹೆದ್ದಾರಿ ಬ್ಲಾಕ್ ನಡೆದರೂ ಹತ್ತಿರ ಸುಳಿಯದೆ ಕೆಲವೊಂದು ಬಾರಿ ನಮ್ಮಲ್ಲಿ ಬಾರ ಎತ್ತುವ ಯಂತ್ರ ಇಲ್ಲ ಎಂದರೆ ಮತ್ತೊಂದು ಬಾರಿ ಅದರ ಯಂತ್ರದ ಚಾಲಕನಿಲ್ಲ ಎಂಬ ಉತ್ತರ ಕೊಡುತ್ತಿದೆ. ಕೆಲವು ದಿನಗಳ ಹಿಂದೆ ಕನ್ನಾಂಗಾರು ಬಳಿ ನಡೆದ ಬಸ್ ಅಪಘಾತದಲ್ಲಿ ಬಸ್ ಪಲ್ಟಿಯಾಗಿ ಬರೋಬ್ಬರಿ ಎರಡು ಗಂಟೆ ಹೆದ್ದಾರಿ ತಡೆಯಾಗಿದ್ದು, ಈ ಘಟನೆ ಟೋಲ್ ಪ್ರದೇಶಕ್ಕಿಂತ ಕೇವಲ ಸುಮಾರು ಒಂದು ಕೀ ಮೀ ದೂರದಲ್ಲಿ ನಡೆದಿದ್ದರೂ ಸ್ಪಂದಿಸದ ಟೋಲ್ ಸಂಗ್ರಹ ಸಂಸ್ಥೆ, ತಮ್ಮ ಜವಾಬ್ದಾರಿ ಮರೆತಿದೆ ಎಂಬುದಾಗಿ ಘಟನಾ ಸ್ಥಳದಲ್ಲಿ ಜನರು ಆಕ್ರೋಶ ವ್ಯಕ್ತ ಪಡಿಸಿದ್ದರು.

ಒಟ್ಟಾರೆಯಾಗಿ ತಮ್ಮ ಉದ್ದೇಶ ಟೋಲ್ ಸಂಗ್ರಹ, ಕಾಮಗಾರಿ ಅದೆಷ್ಟೇ ವಿಳಂಬವಾದರೂ ತಮಗೆ ಅದರ ಪರಿವೆ ಇಲ್ಲ ಎನ್ನುವುದು ನವಯುಗ ಕಂಪೆನಿಯ ನೀತಿಯಾಗಿದೆ. ಗೋಡಯ ಮೇಲಿನ ಬರಹ ಗಮನಿಸದೆ  ಇದನ್ನು ಕಂಪನಿ ಮುಂದುವರಿಸಿದರೆ ಮತ್ತೆ ಜನರನ್ನು ಸೇರಿಸಿ ಟೋಲ್‍ಗೇಟ್ ಮುಂಭಾಗ ಪ್ರತಿಭಟನೆ ನಡೆಸ ಬೇಕಾದೀತು ಎಂಬುದಾಗಿ ಹೆಜಮಾಡಿ ಟೋಲ್ ನಾಗರೀಕ ಹೋರಾಟ ಸಮಿತಿಯ ಅಧ್ಯಕ್ಷ ಗುಲಾಂ ಅಹಮ್ಮದ್ ಎಚ್ಚರಿಸಿದ್ದಾರೆ.