ಇನ್ನಾ ಹೊಳೆಯೋ, ಆಟದ ಮೈದಾನವೋ ?

ಐಎಸ್‍ಪಿಆರ್‍ಎಲ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬತ್ತಿ ಹೋದ ಜೀವನದಿ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ :  ಐ ಎಸ್ ಪಿ ಆರ್ ಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ, ವರ್ಷದ ಹನ್ನೆರಡು ತಿಂಗಳೂ ನೀರಿನಿಂದ ತುಂಬಿ ಹರಿಯುತ್ತಿದ್ದ ಕಾಪಿನಾಲ್ ಹೊಳೆ ಇದೀಗ ಹೂಳು ತುಂಬಿ ಮೈದಾನದ ರೂಪ ತಾಳಿದೆ. ನೂರಾರು ಕೃಷಿ ಕುಟುಂಬಗಳಿಗೆ ಜೀವನದಿ ಯಾಗಿದ್ದ ಇನ್ನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶಾಂಭವಿ ಹೊಳೆಗೆ ಸಂಪರ್ಕ ಹೊಂದಿದ್ದ ಹೊಳೆ ಇದು.

ಕಾಪು ಸಮೀಪದ ಪಾದೂರು ಕಚ್ಚಾತೈಲ ಘಟಕದಿಂದ ಸುಮಾರು 24 ಗ್ರಾಮಗಳಲ್ಲಿ ಭೂಗತ ಪೈಪ್ ಲೈನ್ ಅಳವಡಿಸಿಕೊಂಡು ಬಂದಿದ್ದು, ಇದೀಗ ಕಳೆದ ಒಂದು ವರ್ಷಗಳ ಹಿಂದಿನಿಂದ ಇನ್ನಾ ಗ್ರಾಮದಲ್ಲಿ ಈ ಹೊಳೆಯ ಅಡಿಭಾಗದಲ್ಲಿ ಪೈಪ್‍ಲೈನ್ ಅಳವಡಿಸುವುದಕ್ಕಾಗಿ ಸ್ಥಳೀಯ ಕೃಷಿಭೂಮಿಗಳನ್ನು ಲೀಜ್ ಮೂಲಕ ಪಡೆದ ಕಂಪನಿ ಆ ಭಾಗದಲ್ಲಿ ಹೂಳು ಶೇಖರಣೆ ಮಾಡಿದೆಯಾದರೂ ಉಳಿದಂತೆ ಕೆರೆಯ ಭಾಗವನ್ನೇ ಕಾನೂನುಬಾಹಿರ ಕಾಮಗಾರಿಯಿಂದ ಉತ್ಪತ್ತಿಯಾಗುವ ರಾಸಾಯನಿಕ ಮಿಶ್ರಿತ ಹೂಳು ತುಂಬಿಸಲು ಬಳಕೆ ಮಾಡಿ ಕೆರೆ ಮುಚ್ಚಿ ಹೋಗುವಂತೆ ಮಾಡಿದ್ದಾರೆ. ಇದೀಗ ಹೊಳೆಯ ಅಡಿಭಾಗದಿಂದ ಪೈಪ್ ಲೈನ್ ಅಳವಡಿಸುವ ಕಂಪನಿಯ ಪ್ಲಾನ್ ಮುರಿದು ಬಿದ್ದಿದೆ. ಆ ನಿಟ್ಟಿನಲ್ಲಿ ಇದೀಗ ಪೈಪ್ ಲೈನ್ ನಿರ್ಮಾಣಕ್ಕೆ ಬೇರೆ ದಾರಿ ಹುಡುಕಿದ ಕಂಪನಿ ನೋಟಿಪಿಕೇಷನ್ ಆಗದ ಸ್ಥಳದಲ್ಲಿ ಕಾಮಗಾರಿ ಕಾನೂನುಬಾಹಿರವಾಗಿ  ಮುಂದುವರಿಸಿದೆ ಎಂಬುದು ಹೋರಾಟಗಾರ ಬೆಳಪು ದೇವಿಪ್ರಸಾದ್ ಶೆಟ್ಟಿ ಆರೋಪಿಸಿದ್ದಾರೆ. ಕಾಮಗಾರಿಯ ಉಸ್ತುವಾರಿ ನಡೆಸುತ್ತಿದ್ದ ಅಧಿಕಾರಿಯೋರ್ವರು ಅದನ್ನು ಒಪ್ಪಿದ್ದು ಕಾನೂನು ದತ್ತವಾದ ಎಲ್ಲಾ ದಾಖಲೆಗಳನ್ನು ಮಾಡಿ ಆ ಬಳಿಕ ಕಾಮಗಾರಿ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಪ್ರತಿಭಟನೆಯ ಮುಂದಾಳತ್ವ ವಹಿಸಿಕೊಂಡಿರುವ ಇನ್ನಾ ಗ್ರಾ ಪಂ ಸದಸ್ಯ ದೀಪಕ್ ಕುಮಾರ್ ಇನ್ನಾ ಮಾತನಾಡಿ, “ಧಾರ್ಮಿಕ ಹಿನ್ನಲೆಯುಳ್ಳ ಈ ಕೆರೆ ಈ ಭಾಗದ ದನ-ಕರುಗಳ ಸಹಿತ ಕೃಷಿಕರ ನೀರಿನ ಮೂಲ. ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಈ ಭಾಗದ ಜನರು ಇದೀಗ ನೀರಿಗಾಗಿ ಅಲ್ಲಿ-ಇಲ್ಲಿ ಅಲೆದಾಟ ನಡೆಸುವ ಸ್ಥಿತಿ ಬಂದೊದಿಗಿದೆ. ಜನರಿಗೆ ತಪ್ಪು ಮಾಹಿತಿ ನೀಡಿ ಜನರಿಂದ ಲೀಜ್ ಮೂಲಕ ಸ್ಥಳವನ್ನು ಪಡೆದ ಕಂಪನಿ, ಆರಂಭದಲ್ಲಿ ಹೇಳಿದಂತೆ ಯಾವುದೇ ವ್ಯವಸ್ಥೆಗಳನ್ನು ಕಲ್ಪಿಸದೆ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ. ಕಾಮಗಾರಿಗಾಗಿ ಸ್ಫೋಟ ನಡೆಸುತ್ತಿರುವುದರಿಂದ ಈ ಭಾಗದ ಹತ್ತಾರು ವಾಸದ ಮನೆಗಳು ಬಿರುಕು ಬಿಟ್ಟಿದ್ದು, ಅವರಿಗೆ ಪರಿಹಾರ ನೀಡುವುದನ್ನೂ ಕಂಪನಿ ನಿರಾಕರಿಸುತ್ತಿದೆ. ಇದೀಗ ಹೊಳೆಯ ಹೂಳು ತೆರವು ಕಾರ್ಯ ನಡೆಸುತ್ತಿದೆಯಾದರೂ ಆಮೆ ಗತಿಯಲ್ಲಿ ಸಾಗುತ್ತಿದೆ. ಮಳೆಗಾಲ ಆರಂಭಗೊಂಡು ಈ ಹೊಳೆಯಲ್ಲಿ ನೀರು ತುಂಬಿ ಹೊಳೆಯಲ್ಲಿ ಅಡಕವಾಗಿರುವ ಹೂಳು ಸಾರ್ವಜನಿಕರ ಗಮನಕ್ಕೆ ಬಾರದೆ ಕೆರೆಗಿಳಿದು ಹೂಳಿನಲ್ಲಿ ಹೂತು ಹೋಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಆ ಕಾರಣದಿಂದ ಕೆÀರೆಯನ್ನು ಯಥಾ ಸ್ಥಿತಿಗೆ ತಂದ ಬಳಿಕವಷ್ಠೆ ಪೈಪ್ ಲೈನ್ ಕಾಮಗಾರಿ ನಡೆಸತಕ್ಕದ್ದು. ತಪ್ಪಿದ್ದಲ್ಲಿ ಇಡೀ ಗ್ರಾಮದ ಜನರನ್ನು ಸೇರಿಸಿ ಕಾಮಗಾರಿಯ ವಿರುದ್ಧ ಪ್ರತಿಭಟಿಸುವುದು ಅನಿರ್ವಾಯವಾದೀತು” ಎಂಬುದಾಗಿ ಎಚ್ಚರಿಸಿದ್ದಾರೆ.

ಈ ಕಾಮಗಾರಿಯಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸ್ಥಳೀಯ ಮಹಿಳೆಯರು ಆಕ್ರೋಶದಿಂದ ಮಾದ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಗ್ರಾಮದ ನೂರಾರು ಮಂದಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.