`ರಾಜ್ಯಕ್ಕೆ ಸಿ ಆರ್ ಝಡ್ ವಿನಾಯ್ತಿಯಿಲ್ಲದೆ ಅನ್ಯಾಯ’

ಶಿವರಾಮ ಹೆಬ್ಬಾರ

ನಮ್ಮ ಪ್ರತಿನಿಧಿ ವರದಿ

ಶಿರಸಿ : “ಗೋವಾ, ಕೇರಳದಲ್ಲಿ ಸಿ ಆರ್ ಝಡ್ ಕಾಯಿದೆಯಡಿ 500 ಮೀಟರಿಗೆ ವಿನಾಯಿತಿಗೆ ಇದೆ. ಆದರೆ ಕರ್ನಾಟಕ ಕರಾವಳಿಗೆ ವಿನಾಯಿತಿ ಕೊಡದೇ ಅಲ್ಲಿರುವ ಜನರ ಬದುಕಿಗೆ, ಪ್ರವಾಸೋದ್ಯಮ ಬೆಳವಣಿಗೆಗೆ ಅನ್ಯಾಯ ಆಗಿದೆ” ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಅವರು ಶನಿವಾರ ಎಂಎಂ ಕಲಾ ಕಾಲೇಜಿನ ಇತಿಹಾಸ ವಿಭಾಗದ ಆಶ್ರಯದಲ್ಲಿ ಯುಜಿಸಿ ಸಹಯೋಗದಲ್ಲಿ ನಡೆದ ಕರಾವಳಿ ಕರ್ನಾಟಕದಲ್ಲಿ ಸಾಹಸ ಪ್ರವಾಸೋದ್ಯಮ ವಿಷಯದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಾ, “ಪ್ರವಾಸೋದ್ಯಮ ಬೆಳೆಸುವಾಗ ಕೆಲವು ತ್ಯಾಗ ಅನಿವಾರ್ಯ. ಬದುಕು-ಪರಿಸರದ ನಡುವೆ ಹೊಂದಾಣಿಕೆ ಅಗತ್ಯವಿದ್ದು, ಕೆಲವು ಸಲ ಬದುಕಿಗಾಗಿ ಪರಿಸರ ಸಮತೋಲನ ಕಷ್ಟ ಆಗಬಹುದು. ಜಿಲ್ಲೆಯ ಭವಿಷ್ಯದ ಜೊತೆಗೆ ಇಲ್ಲಿನ ಮಕ್ಕಳ ಭವಿಷ್ಯವೂ ಮುಖ್ಯ ಆಗಿರುವುದರಿಂದ ಪರಿಸರವಾದಿಗಳು ಈ ಬಗ್ಗೆ ಸ್ವಲ್ಪ ರಾಜಿ ಮನೋಭಾವ ಹೊಂದುವ ಅನಿವಾರ್ಯತೆ ಇದೆ” ಎಂದು ವೇದಿಕೆಯಲ್ಲಿದ್ದ ಆಶೀಸರರ ಹೆಸರು ಪ್ರಸ್ತಾಪಿಸಿ ಹೇಳಿದರು.

ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಆಶೀಸರ ಮಾತನಾಡಿ, “ಪ್ರವಾಸೋದ್ಯಮವನ್ನು ಕೇವಲ ಆದಾಯದ ಮೂಲ ಎಂದಷ್ಟೇ ನೋಡದೇ ಸುಸ್ಥಿರ ಪ್ರವಾಸೋದ್ಯಮ ಎಂದು ಸಮಗ್ರವಾಗಿ ನೋಡಬೇಕು. ಪ್ರವಾಸೋದ್ಯಮ ಸ್ಥಳಗಳನ್ನು ಗುರುತಿಸುವಾಗ ಸಂರಕ್ಷಿತ ಪ್ರದೇಶ, ಜೀವನದಿ, ಜಲಪಾತ, ಶಿಖರ, ಅಳಿವೆ, ಬೀಚುಗಳಂಥ ಸೂಕ್ಷ್ಮ ಸ್ಥಳಗಳಲ್ಲಿ ಎಚ್ಚರಿಕೆ ವಹಿಸಬೇಕು. ಸಾಂಸ್ಕøತಿಕ ಪಾರಂಪರಿಕ ನಿಸರ್ಗ ಪ್ರವಾಸೋದ್ಯಮಕ್ಕೆ ಒತ್ತು ಸಿಗಬೇಕು. ಇಲ್ಲಿ ಪರಿಸರ ಜಾಗೃತಿ, ಶಿಕ್ಷಣಕ್ಕೆ ಅವಕಾಶ ಇರಬೇಕು. ಪರಿಸರ ಪ್ರವಾಸೋದ್ಯಮದಿಂದ ಬಂದ ಆದಾಯದಲ್ಲಿ ಒಂದು ಭಾಗ ಸಂರಕ್ಷಣೆಗಾಗಿ ನೀಡಬೇಕು. ಪ್ರವಾಸೋದ್ಯಮ ಕುರಿತ ಸಮಗ್ರ ಪರಿಶೀಲನಾ ಸಮಿತಿ ಜಿಲ್ಲಾಮಟ್ಟದಲ್ಲಿ ಅವಶ್ಯ. ಉ ಕ ಕರಾವಳಿ ಮಲೆನಾಡಿನ ಪ್ರವಾಸೋದ್ಯಮ, ರೆಸಾರ್ಟ್, ಹೊಂ ಸ್ಟೆ ಇತ್ಯಾದಿ ಬೇಕಾಬಿಟ್ಟಿ ಆದರೆ ಸ್ವೇಚ್ಛಾಚಾರಕ್ಕೆ ದಾರಿ ಆಗುತ್ತದೆ. ಅದನ್ನು ತಡೆಯಬೇಕು” ಎಂದರು.